Haveri crime: ಹಾನಗಲ್‌ ಅತ್ಯಾಚಾರದ ಆರೋಪಿಗಳ ಸೆರೆಗೆ 3 ವಿಶೇಷ ತಂಡ: ಶೀಘ್ರ ಪತ್ತೆಗೆ ಉಸ್ತುವಾರಿ ಸಚಿವರ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Haveri Crime: ಹಾನಗಲ್‌ ಅತ್ಯಾಚಾರದ ಆರೋಪಿಗಳ ಸೆರೆಗೆ 3 ವಿಶೇಷ ತಂಡ: ಶೀಘ್ರ ಪತ್ತೆಗೆ ಉಸ್ತುವಾರಿ ಸಚಿವರ ಸೂಚನೆ

Haveri crime: ಹಾನಗಲ್‌ ಅತ್ಯಾಚಾರದ ಆರೋಪಿಗಳ ಸೆರೆಗೆ 3 ವಿಶೇಷ ತಂಡ: ಶೀಘ್ರ ಪತ್ತೆಗೆ ಉಸ್ತುವಾರಿ ಸಚಿವರ ಸೂಚನೆ

Haveri News ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನಲ್ಲಿ ನಡೆದಿದ್ದ ನೈತಿಕ ಪೊಲೀಸಗಿರಿ ಹಾಗೂ ಅತ್ಯಾಚಾರ ಆರೋಪದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸ್‌ ತಂಡಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿವೆ.

ಹಾವೇರಿ ಜಿಲ್ಲೆಯಲ್ಲಿ ನಡೆದ ನೈತಿಕ ಪೊಲೀಸ್‌ ಗಿರಿ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು,. ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ನಡೆದ ನೈತಿಕ ಪೊಲೀಸ್‌ ಗಿರಿ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು,. ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನಲ್ಲಿ ನಡೆದಿದ್ದ ಯುವತಿ ಮೇಲಿನ ಅತ್ಯಾಚಾರ, ಪೊಲೀಸ್‌ ನೈತಿಕಗಿರಿ ಹಾಗೂ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು, ಹಾವೇರಿ ಜಿಲ್ಲಾ ಪೊಲೀಸರು ನಾನಾ ಕಡೆಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾರೆ. ಘಟನೆ ಕುರಿತು ಹಾವೇರಿ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ್‌ ಅವರೊಂದಿಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌, ಆರೋಪಿಗಳ ಶೀಘ್ರ ಪತ್ತೆ ಜತೆಗೆ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಭಾನುವಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭಾನುವಾರ ಹಾವೇರಿಯಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಶಿವಾನಂದ ಪಾಟೀಲ್‌, ಇಂತಹ ಸೂಕ್ಷ್ಮ ವಿಚಾರದಲ್ಲಿ ಪೊಲೀಸ್‌ ತನಿಖೆ ನಿಖರವಾಗಿರಬೇಕು. ಯಾವುದೇ ವ್ಯಕ್ತಿ ವಿರುದ್ದ ದೂರು ಕೇಳಿ ಬಂದರೂ ಅದನ್ನು ನಿರ್ಲಕ್ಷಿಸಬೇಡಿ. ನೊಂದ ಮಹಿಳೆಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ತನಿಖೆ ಚುರುಕು

ಘಟನೆಯಲ್ಲಿ ಭಾಗಿಯಾಗಿರುವ ಅಕ್ಕಿ ಆಲೂರಿನ ಏಳು ಆರೋಪಿಗಳ ವಿರುದ್ದ ಈಗಾಗಲೇ ಪ್ರಕರಣ ದಾಖಲಾಗಿ ಮೂವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಗಾಯಗೊಂಡು ಚಿಕಿತ್ಸೆ ಪಡೆದಿದ್ದು, ಆತನನ್ನೂ ವಶಕ್ಕೆ ಪಡೆಯಲಾಗುತ್ತದೆ. ನಾಪತ್ತೆಯಾಗಿರುವ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ. ಅವರ ಮೊಬೈಲ್‌ ಕೆಲ ಹೊತ್ತು ಚಾಲನೆಯಿದ್ದರೆ, ಬಹುತೇಕ ಸಮಯದಲ್ಲಿ ಸ್ವಿಚ್‌ ಆಫ್‌ ಕಂಡು ಬರುತ್ತಿದೆ. ಅವರ ಮೊಬೈಲ್‌ ಟವರ್‌ ಮಾಹಿತಿ ಆಧರಿಸಿ ಬಾಗಲಕೋಟೆ, ಬೆಳಗಾವಿ ನಗರ ಹಾಗೂ ಖಾನಾಪುರ ಸಹಿತ ಹಲವು ಸ್ಥಳಗಳಲ್ಲಿ ಪತ್ತೆ ಕೈಗೊಂಡಿದೆ. ಡಿವೈಎಸ್ಪಿ, ಇಬ್ಬರು ಇನ್ಸ್‌ಪೆಕ್ಟರ್‌ ಹಾಗೂ ಮೂವರು ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿಗಳ ತಂಡ ಕೆಲಸ ಮಾಡುತ್ತಿವೆ ಎನ್ನುವುದು ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಗೋಪಾಲ್‌ ವಿವರಣೆ.

ಈ ನಡುವೆ ಘಟನಾ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಐಜಿಪಿ ಕೆ.ತ್ಯಾಗರಾಜನ್‌ ಭೇಟಿ ನೀಡಿದ್ದರು. ಹಾನಗಲ್‌, ಘಟನೆ ನಡೆದ ಸ್ಥಳಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದರು. ತನಿಖೆಯನ್ನು ಚುರುಕುಗೊಳಿಸಬೇಕು. ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಿ ಎನ್ನುವ ಸೂಚನೆ ನೀಡಿದ್ದಾರೆ.

ಘಟನೆ ಕುರಿತು ಎಲ್ಲಾ ಆಯಾಮದಲ್ಲಿ ತನಿಖೆ ನಡೆದಿದೆ. ಇದೇ ಘಟನೆಯಲ್ಲಿ ಇನ್ನೊಂದು ವಿಡಿಯೋ ಬಂದಿರುವುದನ್ನು ಗಮನಿಸಿದ್ದೇವೆ. ಯಾವುದೇ ದೂರು ಬಂದಿಲ್ಲ. ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವ ಕುರಿತು ವಿಡಿಯೋಗಳು ಹರಿದಾಡುತ್ತಿದ್ದು, ಅವುಗಳನ್ನು ಪರಿಶೀಲಿಸುತ್ತೇವೆ ಎನ್ನುವುದು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ ಅವರ ಸ್ಪಷ್ಟನೆ.

ಬಿಜೆಪಿ ನೆರವು

ಈ ನಡುವೆ ಅತ್ಯಾಚಾರದ ದೂರುದಾರ ಮಹಿಳೆಗೆ ಹಾವೇರಿ ಬಿಜೆಪಿ ಘಟಕ 25 ಸಾವಿರ ಪರಿಹಾರ ನೀಡಿದೆ. ಹಾವೇರಿನ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಂತ್ರಸ್ತೆ ಭೇಟಿ ನೀಡಿದ್ದಳು. ಈ ವೇಳೆ ಆಕೆಗೆ ಮಾಜಿ ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಪರಿಹಾರ ನೀಡಲಾಯಿತು.

ನನಗೆ ಪ್ರಕರಣದಿಂದ ಹಿಂದೆ ಸರಿಯುವಂತೆ ಲಕ್ಷಾಂತರ ರೂ. ಪರಿಹಾರದ ಬೇಡಿಕೆಗಳು ಬರುತ್ತಿವೆ. ಈಗಾಗಲೇ ಮರ್ಯಾದೆಯನ್ನು ಕಳೆದು ಹಣ ನೀಡುತ್ತೇನೆ ಎಂದರೆ ಹೇಗೆ ಒಪ್ಪಲಿ. ನನ್ನ ಹೋರಾಟ ಮುಂದುವರೆಯಲಿದೆ. ಈಗಾಗಲೇ ಘಟನೆ ಕುರಿತು ನ್ಯಾಯಾಧೀಶರ ಮುಂದೆಯೂ ವಿವರವಾಗಿ ಹೇಳಿಕೆ ದಾಖಲಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡರು.

ಯಾವುದೇ ಸಂದರ್ಭದಲ್ಲೂ ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಯಾರಿಂದಾದರೂ ಬೆದರಿಕೆ ಕರೆ ಬಂದರೆ ನಮಗೆ ತಿಳಿಸಿ. ಪೊಲೀಸರಿಗೂ ಮಾಹಿತಿ ನೀಡಿ ಎಂದು ಬಿಜೆಪಿ ಮುಖಂಡರು ಸೂಚಿಸಿದರು.

ಮುಚ್ಚಿ ಹಾಕಲು ಯತ್ನ ಆರೋಪ

ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ನೈತಿಕ ಪೊಲಿಸ್ ಗಿರಿ ಪ್ರಕರಣವನ್ನು ಸಂತ್ರಸ್ಥರಿಗೆ ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

*ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾನಗಲ್ ಪ್ರಕರಣವನ್ನು ಅಲ್ಲಿನ ಪೊಲೀಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನಿಸಿದ್ದರು. ತನಿಖೆಗೆ ಎಸ್.ಐ.ಟಿ ರಚನೆ ಮಾಡಿ. ಸಿಎಂ ಸಿದ್ದರಾಮಯ್ಯ ನಾಳೆ ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಅಂತ ನಿರೀಕ್ಷೆ ಮಾಡುತ್ತೇನೆ ಎಂದರು.

ತನಿಖೆ ನೆಪದಲ್ಲಿ ಸಂತ್ರಸ್ಥೆಯನ್ನು ಶಿರಸಿಗೆ ಕರದೊಯ್ಯಲಾಗುತ್ತಿದೆ. ಬಿಜೆಪಿ ಮಹಿಳಾ ನಿಯೋಗ ಅಲ್ಲಿಗೆ ಭೇಟಿ ಕೊಡುತ್ತಿದೆ ಅಂತ ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲ ರಾಜಕಾರಣವನ್ನು ಕಾಂಗ್ರೆಸ್ ನವರು ಮಾಡುತ್ತಾರೆ. ಅವರಿಂದ ನಾವೇನು ಜಾಸ್ತಿ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು.

Whats_app_banner