ಕನ್ನಡ ಸುದ್ದಿ  /  Karnataka  /  Haveri News Neeru Naayi Otter Spotted At Historic Heggeri Kere Haveri Dist Karnataka Wild Life Uks

ಹಾವೇರಿ ಜನರ ಕುತೂಹಲ ಕೆರಳಿಸಿವೆ ನೀರುನಾಯಿಗಳು; ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ಫ್ರೆಶ್ ವಾಟರ್ ಓಟರ್ ಪತ್ತೆ

ಇದ್ದಕ್ಕಿದ್ದ ಹಾಗೆ ಊರ ಕೆರೆಯಲ್ಲಿ ನೀರು ನಾಯಿ ಕಾಣಸಿಕ್ಕರೆ ಹೇಗಾಗಬೇಡ.. ಹೌದು, ಹಾವೇರಿ ಜನರ ಕುತೂಹಲ ಕೆರಳಿಸಿವೆ ನೀರುನಾಯಿಗಳು. ಇಲ್ಲಿನ ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ಫ್ರೆಶ್ ವಾಟರ್ ಓಟರ್ ಪತ್ತೆಯಾಗಿರುವುದು ಇದಕ್ಕೆ ಕಾರಣ.

ಹಾವೇರಿ ನಗರದ ಹೊರವಲಯದ ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ಫ್ರೆಶ್ ವಾಟರ್ ಓಟರ್ ಪತ್ತೆಯಾಗಿವೆ. ಈ ನೀರುನಾಯಿಗಳು ಹಾವೇರಿ ಜನರ ಕುತೂಹಲ ಕೆರಳಿಸಿವೆ.
ಹಾವೇರಿ ನಗರದ ಹೊರವಲಯದ ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ಫ್ರೆಶ್ ವಾಟರ್ ಓಟರ್ ಪತ್ತೆಯಾಗಿವೆ. ಈ ನೀರುನಾಯಿಗಳು ಹಾವೇರಿ ಜನರ ಕುತೂಹಲ ಕೆರಳಿಸಿವೆ. (PC- WAGroup)

ಹಾವೇರಿ: ಜಿಲ್ಲೆಯ ಐತಿಹಾಸಿಕ ಹೆಗ್ಗೇರಿ ಕೆರೆಯಲ್ಲಿ ತುಂಗಭದ್ರಾ ನದಿಯಲ್ಲಿ ಕಾಣಸಿಗುವ ಅಪರೂಪದ ನೀರುನಾಯಿಗಳು ಕಾಣಸಿಕ್ಕಿವೆ. ಹಾವೇರಿ ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆ ಜೀವವೈವಿಧ್ಯಗಳ ಒಡಲಾಗಿದ್ದು, ಅದರಲ್ಲಿ ಈಗ ಸಮುದ್ರದ ಹಿನ್ನೀರು ಹಾಗೂ ನದಿಗಳಲ್ಲಿ ಹೆಚ್ಚಾಗಿ ಕಂಡು ಬರುವ ಅಳಿವಿನಂಚಿನಲ್ಲಿರುವ ‘ನೀರುನಾಯಿಗಳು’ ಕಾಣಸಿಕ್ಕಿರುವುದು ಸ್ಥಳೀಯರ ಕುತೂಹಲವನ್ನು ಹೆಚ್ಚಿಸಿದೆ.

ಕಾವೇರಿ, ಕಾಳಿ, ತುಂಗಭದ್ರಾ ನದಿಗಳ ಪರಿಸರದಲ್ಲಿ ಕಾಣಸಿಗುವ ಅಪರೂಪದ ನೀರುನಾಯಿಗಳು ಇವು. ಇವುಗಳನ್ನು ಫ್ರೆಶ್ ವಾಟರ್ ಓಟರ್ ಅಥವಾ ಸಿಹಿ ನೀರಿ ನೀರುನಾಯಿಗಳು ಎನ್ನುತ್ತಾರೆ. ಈ ನೀರು ನಾಯಿಗಳು ವಿಶೇಷವಾಗಿ ಹಂಪಿಯ ಪರಿಸರದಲ್ಲಿ ತುಂಗಭದ್ರಾ ನದಿ ಸುತ್ತಮುತ್ತ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತವೆ.

ಹೆಗ್ಗೇರಿಕೆರೆಗೆ ಹೇಗೆ ಬಂದವು ಈ ನೀರುನಾಯಿಗಳು

ಹೆಗ್ಗೇರಿ ಕೆರೆಯಲ್ಲಿ ನೀರು ನಾಯಿಗಳನ್ನು ಕಂಡವರ ಮನದಲ್ಲಿ ಹತ್ತಾರು ಪ್ರಶ್ನೆಗಳು. ಈ ನೀರು ನಾಯಿಗಳು ಇಲ್ಲಿಗೆ ಹೇಗೆ ಬಂದವು ಎಂಬುದು ಸಾಮಾನ್ಯ ಪ್ರಶ್ನೆ. ನೀರು ನಾಯಿಗಳ ಆಹಾರ, ಅವುಗಳ ಬದುಕು ಹೀಗೆ ಅನ್ಯಾನ್ಯ ಕುತೂಹಲ.

ಸ್ಥಳೀಯರ ಅಂದಾಜಿನ ಪ್ರಕಾರ, ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತದೆ. ಹಾಗೆ ನೀರು ಹರಿಸುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಒಳಗಾಗಿ ಇವು ಹೆಗ್ಗೇರಿ ಕೆರೆಗೆ ತಲುಪಿರಬಹುದು. ಇನ್ನೂ ಕೆಲವರ ಪ್ರಕಾರ, ನೀರು ನಾಯಿಗಳು ವಲಸೆ ಹೋಗುತ್ತವೆ. ಹಾಗೆ ವಲಸೆ ಹೋಗುವ ನೀರು ನಾಯಿಗಳು ಇಲ್ಲಿ ಕಾಣಸಿಕ್ಕಿದ್ದಿರಬಹುದು. ಒಟ್ಟಿನಲ್ಲಿ ಇವುಗಳು ಎಲ್ಲರ ಗಮನಸೆಳೆದಿರುವುದು ವಾಸ್ತವ.

ದಕ್ಷಿಣ ಭಾರತದ ನೀರುನಾಯಿಗಳ ವಿಶೇಷ

1) ಕೊಪ್ಪಳದ ಮುದ್ಲಾಪುರದಿಂದ ಹೊಸಪೇಟೆ ಹಂಪಿ ತನಕದ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ಈ ನೀರುನಾಯಿಗಳು ಕಾಣಸಿಗುತ್ತವೆ

2) ನೀರುನಾಯಿಗಳು ಅರೆ ಜಲ ಪ್ರಾಣಿಗಳು. ಭೂಮಿ ಮತ್ತು ನೀರಿನಲ್ಲಿ ಸರಾಗವಾಗಿ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿವೆ.

3)ಮೀನು, ಹಾವು, ಉಭಯಚರಗಳು, ಇಲಿ ಹೆಗ್ಗಣ, ಸಣ್ಣ ಸಸ್ತನಿಗಳು, ಚಿಕ್ಕಪುಟ್ಟ ಹಕ್ಕಿಗಳು ಮತ್ತು ಕೆಲವು ಸಸ್ಯಗಳು ನೀರುನಾಯಿಗಳ ಆಹಾರ.

4) ಸಾಮೂಹಿಕವಾಗಿ ಮಲವಿಸರ್ಜನೆ ಮಾಡುತ್ತ ತಮ್ಮ ಇರುವಿಕೆಯ ಗಡಿಯನ್ನು ಗುರುತಿಸುವುದು ಇವುಗಳ ಗುಣ.

5) ಈ ನದಿ ನೀರುನಾಯಿಗಳ ಜೀವಿತಾವಧಿ 4 ವರ್ಷದಿಂದ 10 ವರ್ಷ ಎಂದು ಹೇಳಲಾಗುತ್ತಿದೆಯಾದರೂ, ಇದನ್ನು ದೃಢೀಕರಿಸುವ ದಾಖಲೆಗಳು ಲಭ್ಯವಾಗಿಲ್ಲ ಎನ್ನುತ್ತಾರೆ ಪ್ರಾಣಿಶಾಸ್ತ್ರಜ್ಞರು.

6) ಕೇವಲ 2 ರಿಂದ 6 ಕಿಲೋ ತೂಕದ ಇವುಗಳನ್ನು ವಿಶ್ವದ ಅತ್ಯಂತ ಚಿಕ್ಕ ನೀರು ನಾಯಿ ಎಂದೂ ಗುರುತಿಸುತ್ತಾರೆ. ಇದು ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ಓರಿಯೆಂಟಲ್ ಶಾರ್ಟ್-ಕ್ಲಾವ್ಡ್ ಓಟರ್ಸ್, ಏಷ್ಯನ್ ಸ್ಮಾಲ್-ಕ್ಲಾವ್ಡ್ ಓಟರ್ಸ್ ಎಂದೂ ಕರೆಯುತ್ತಾರೆ.

7) ನೀರುನಾಯಿ ಸಂರಕ್ಷಣಾ ಮೀಸಲು ಪ್ರದೇಶ ಹೊಂದಿ ಭಾರತದ ಮೊದಲ ರಾಜ್ಯ ಕರ್ನಾಟಕ. ತುಂಗಭದ್ರಾ ನದಿಯ ಕೆಳಭಾಗವನ್ನು ನೀರುನಾಯಿ ಸಂರಕ್ಷಣಾ ಮೀಸಲು ಪ್ರದೇಶ ಎಂದು 10 ವರ್ಷ ಹಿಂದೆ ಘೋ‍ಷಿಸಲಾಗಿದೆ.

8) ಅರಣ್ಯ, ಪರಿಸರ ಮತ್ತು ಪರಿಸರ ಇಲಾಖೆಯು ಹತ್ತು ವರ್ಷ ಹಿಂದೆ ಗೆಜೆಟ್ ಅಧಿಸೂಚನೆಯ ಮೂಲಕ ತುಂಗಭದ್ರಾ ನದಿಪಾತ್ರದ ಕೆಳಭಾಗದ 34 ಕಿ.ಮೀ ಉದ್ದದ ಪ್ರದೇಶವನ್ನು 'ಒಟರ್ ಕನ್ಸರ್ವೇಶನ್ ರಿಸರ್ವ್' ಎಂದು ಘೋಷಿಸಿತು.

ಕನಿಷ್ಠ 140 ಜೀವವೈವಿಧ್ಯದ ಒಡಲು 900 ಎಕರೆ ಪ್ರದೇಶದ ಹೆಗ್ಗೇರಿಕೆರೆ

ಹಾವೇರಿ ಹೊರವಲಯದಲ್ಲಿರುವ ಹೆಗ್ಗೇರಿಕೆರೆ 900 ಎಕರೆ ಪ್ರದೇಶ ವ್ಯಾಪಿಸಿದ್ದು, 140ಕ್ಕೂ ಹೆಚ್ಚು ಜೀವವೈವಿಧ್ಯದ ಒಡಲು ಎಂಬುದು ಅಧ್ಯಯನದ ಮೂಲಕ ಬಹಿರಂಗವಾಗಿದೆ. ಹಲವು ವಿಧದ ಪಕ್ಷಿಗಳು, ಮೀನು ಸೇರಿದಂತೆ 140 ಜೀವ ವೈವಿಧ್ಯ ಗುರುತಿಸಿರುವುದನ್ನು ಇಬರ್ಡ್‌ ಡಾಟ್ ಓಆರ್‌ಜಿ ದಾಖಲಿಸಿದೆ.

ಸಣ್ಣ ನೀರಾವರಿ ಇಲಾಖೆ ಪ್ರಕಾರ, ಹೆಗ್ಗೇರಿ ಕೆರೆ 700- 800 ಎಕರೆ ವಿಶಾಲವಾದುದು. ಈ ಕೆರೆಯನ್ನು 2009-10 ರಲ್ಲಿ ಹಾವೇರಿ ನಗರದ ಕುಡಿಯುವ ನೀರು ಪೂರೈಕೆಗಾಗಿ ನಗರಸಭೆಗೆ ಹಸ್ತಾಂತರವಾಗಿದೆ. ಕುಡಿಯುವ ನೀರು ಹೊರತುಪಡಿಸಿ ಇತರೆ ಚಟುವಟಿಕೆಗೆ ಸಣ್ಣ ನೀರಾವರಿ ಇಲಾಖೆಯ ಅನುಮತಿ ಬೇಕು ಎನ್ನುತ್ತಿವೆ ಇಲಾಖೆಯ ಮೂಲಗಳು.

ಜನಪದದ ಪ್ರಕಾರ ಹೆಗ್ಗೇರಿ ಕೆರೆಗೆ ಇತಿಹಾಸವಿದೆ. ಹಿಂದೆ ನಳಚಕ್ರವರ್ತಿ ತನ್ನ ರಾಣಿಯರ ಜಲಕ್ರೀಡೆಗಾಗಿ ಈ ಕೆರೆ ನಿರ್ಮಿಸಿದ ಎಂಬ ಐತಿಹ್ಯವಿದೆ. ಆದರೆ ಲಿಖಿತ ದಾಖಲೆಗಳ ವಿವರ ಅಧ್ಯಯನಕ್ಕೆ ಸಿಕ್ಕಿಲ್ಲ ಎನ್ನುತ್ತಿವೆ ಕೆಲವು ವರದಿಗಳು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point