Haveri Crime: ಹಣಕ್ಕಾಗಿ ಸಂಘರ್ಷ: ಹಾವೇರಿ ಜಿಲ್ಲೆಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನೇ ಕೊಚ್ಚಿ ಕೊಲೆಗೈದ ಮೈದುನ
ಕನ್ನಡ ಸುದ್ದಿ  /  ಕರ್ನಾಟಕ  /  Haveri Crime: ಹಣಕ್ಕಾಗಿ ಸಂಘರ್ಷ: ಹಾವೇರಿ ಜಿಲ್ಲೆಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನೇ ಕೊಚ್ಚಿ ಕೊಲೆಗೈದ ಮೈದುನ

Haveri Crime: ಹಣಕ್ಕಾಗಿ ಸಂಘರ್ಷ: ಹಾವೇರಿ ಜಿಲ್ಲೆಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನೇ ಕೊಚ್ಚಿ ಕೊಲೆಗೈದ ಮೈದುನ

Haveri crime News ಹಣದ ವಿಷಯದಲ್ಲಿ ಸಹೋದರರ ನಡುವೆ ಉಂಟಾದ ಮನಸ್ತಾಪ ಅಣ್ಣನ ಪತ್ನಿ ಹಾಗೂ ಇಬ್ಬರು ಮಕ್ಕಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೇರಿ ಜಿಲ್ಲೆ( Haveri district) ಯಲ್ಲಿ ನಡೆದಿದೆ.

ಕೊಲೆಯಾದ ಗೀತಾ ಹಾಗೂ ಆರೋಪಿ ಕುಮಾರ.
ಕೊಲೆಯಾದ ಗೀತಾ ಹಾಗೂ ಆರೋಪಿ ಕುಮಾರ.

ಹುಬ್ಬಳ್ಳಿ: ಈವರೆಗೂ ತಾನು ನೋಡಿಕೊಳ್ಳುತ್ತಿದ್ದ ವಹಿವಾಟು ಕೈತಪ್ಪಿದ್ದರಿಂದ ಕನಲಿದ ಯುವಕನೊಬ್ಬ ಅತ್ತಿಗೆ ಹಾಗೂ ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆಯಿದು.

ಇದು ನಡೆದಿರುವ ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಯಳ್ಳೂರು ಗ್ರಾಮದಲ್ಲಿ. ಅಣ್ಣ- ತಮ್ಮನ ವೈಮನಸ್ಸು ಮಕ್ಕಳ ಜೀವ ತೆಗೆಯುವ ಹಂತಕ್ಕೆ ಹೋಗಿದ್ದು ಇಡೀ ಗ್ರಾಮದಲ್ಲಿ ಬೇಸರ ತರಿಸಿದೆ. ಕೊಲೆ ಮಾಡಿದ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಮಚ್ಚಿನಿಂದ ಕೊಚ್ಚಿ ಹತ್ಯೆ

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅಡ್ಡಿಯಾದಳು ಎಂದು ರೊಚ್ಚಿಗೊದ್ದ ಅಣ್ಣನ ಹೆಂಡತಿ ಹಾಗೂ ಅಣ್ಣನ ಇಬ್ಬರು ಮಕ್ಕಳನ್ನು ಸಹೋದರನೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.

ಯಳ್ಳೂರ ಗ್ರಾಮದ ಕುಮಾರ ಚನ್ನಬಸನಗೌಡ ಮರಿಗೌಡರ (35) ತನ್ನ ಅಣ್ಣನ ಹೆಂಡತಿ ಮತ್ತು ಮಕ್ಕಳನ್ನು ಇಬ್ಬರು ಮಾಡಿ ಪರಾರಿಯಾದ ಆರೋಪಿ. ಗೀತಾ ಹೊನ್ನಗೌಡ ಮರಿಗೌಡರ (32), ಅಕುಲ್ ಗೌಡ ಹೊನ್ನಗೌಡ ಮರಿಗೌಡರ (10) ಮತ್ತು ಅಂಕಿತಾ ಹೊನ್ನಗೌಡ ಮರಿಗೌಡರ (6) ಹತ್ಯೆಯಾದ ದುರ್ದೈವಿಗಳು.

ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಅತ್ತಿಗೆ ಗೀತಾ ಮತ್ತು ಮಕ್ಕಳಾದ ಅಕುಲ್‌ ಗೌಡ, ಅಂಕಿತಾ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮನೆಯಲ್ಲೇ ಮಲಗಿದ್ದ ಹೊನ್ನಗೌಡನ ತಾಯಿ ಘಟನೆಯನ್ನು ಕಂಡು ಕಿರುಚಾಡಿದಾಗ ಗ್ರಾಮಸ್ಥರು ಸೇರಿಕೊಂಡಿದ್ದಾರೆ. ಅಕುಲ್‌ಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗೀತಾ ಮತ್ತು ಅಂಕಿತಾಳನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಕೊನೆಯುಸಿರೆಳೆದಿದ್ದಾರೆ.

ಹಣಕಾಸಿನ ವೈಮನಸ್ಸು

ಹೊನ್ನಗೌಡ ಮರಿಗೌಡರ ಕಳೆದ 15 ವರ್ಷಗಳಿಂದ ದುಬೈನಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸ್ವಂತ ಗ್ರಾಮವಾದ ಯಳ್ಳೂರಿನಲ್ಲಿ ವಾಸವಾಗಿದ್ದರು. ಇವರೊಂದಿಗೆ ಹೊನ್ನಗೌಡನ ತಮ್ಮ ಕುಮಾರ ಮತ್ತು ತಾಯಿ ಕಮಲವ್ವ ವಾಸವಿದ್ದರು. 20 ದಿನಗಳ ಹಿಂದೆ ಹೊನ್ನಗೌಡ ದುಬೈನಿಂದ ಗ್ರಾಮಕ್ಕೆ ಬಂದಿದ್ದರು. ಆ ಸಮಯದಲ್ಲಿ ಅಣ್ಣ-ತಮ್ಮನ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ವೈಮನಸ್ಸು ಉಂಟಾಗಿತ್ತು. ನ.1ರಂದು ಹೊನ್ನಗೌಡ ದುಬೈಗೆ ಮರಳಿದ್ದರು. ಹಾನಗಲ್ಲಿನಲ್ಲಿ ಹೊನ್ನಗೌಡ ಒಡೆತನದ ವಾಣಿಜ್ಯ ಮಳಿಗೆಗಳು ಬಾಡಿಗೆ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕುಮಾರನ ಮೊದಲಿನಂತೆ ಬಾಡಿಗೆ ಕಟ್ಟಡಗಳ ಹಣ ಬಾರದಿದ್ದರಿಂದ ಕುಪಿತಗೊಂಡಿಂದ್ದ ಎನ್ನಲಾಗಿದೆ.

ಹಾನಗಲ್ಲಿನಲ್ಲಿ ಅಣ್ಣ ಹೊನ್ನೇಗೌಡರ ವ್ಯವಹಾರವನ್ನು ಸಹೋದರ ಕುಮಾರ ನೋಡಿಕೊಳ್ಳುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಊರಿಗೆ ಆಗಮಿಸಿದ್ದ ಅಣ್ಣ ಹೊನ್ನೇಗೌಡ ಇನ್ಮುಂದೆ ವ್ಯವಹಾರವನ್ನು ತನ್ನ ಪತ್ನಿ ಗೀತಾ ಹೆಸರಲ್ಲಿ ನಡೆಸುವಂತೆ ತಮ್ಮನಿಗೆ ತಿಳಿಸಿದ್ದ ಎನ್ನಲಾಗಿದೆ. ವಹಿವಾಟು ತಮ್ಮನ ಬದಲು ಪತ್ನಿಯೇ ಹೆಸರಲ್ಲಿ ನಡೆಸು ಎಂದು ಹೇಳಿದ್ದಕ್ಕೆ ಬೇಸತ್ತ ಕುಮಾರಗೌಡ ಅಣ್ಣನ ಪತ್ನಿ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ ಎಂದು ಶಂಕಿಸಲಾಗಿದೆ.

ಕಮಲವ್ವ ಮರಿಗೌಡರ ಅವರಿಗೆ ಐವರು ಗಂಡು ಮಕ್ಕಳು. ಈ ಪೈಕಿ ಮೂವರು ಇದೇ ಗ್ರಾಮದಲ್ಲಿ ಬೇರೆ ಮನೆ ಮಾಡಿಕೊಂಡಿದ್ದಾರೆ. ಕೊನೆಯ ಮಗ ಆರೋಪಿ ಕುಮಾರನಿಗೆ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಹೊನ್ನಗೌಡನ ಹೆಂಡತಿ, ಮಕ್ಕಳ ಜೊತೆಯಲ್ಲಿ ಕಮಲವ್ವ ಮತ್ತು ಕುಮಾರ ವಾಸವಾಗಿದ್ದರು ಎನ್ನಲಾಗುತ್ತಿದ್ದು, ಮೃತ ಇಬ್ಬರು ಕಂದಮ್ಮಗಳು ಹಾನಗಲ್ ಆಕ್ಸ್‌ಫರ್ಡ್‌ಶಾಲೆಯಲ್ಲಿ 1 ಮತ್ತು 3ನೇ ತರಗತಿಯಲ್ಲಿ ಓದುತ್ತಿದ್ದರು.

ನೀರವ ಮೌನ

ಯಳ್ಳೂರ ಗ್ರಾಮದಲ್ಲಿ ಮಕ್ಕಳು ಸೇರಿ ಮೂವರ ಕೊಲೆ ಆಗಿರುವುದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ಲಾಟ್ ಭಾಗದಲ್ಲಿನ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಹೆಣವಾಗಿದ್ದ ಸುದ್ದಿಗೆ ಇಡೀ ಗ್ರಾಮ ಬೆಚ್ಚಿ ಬಿದ್ದಿದೆ. ಇಬ್ಬರು ಮಕ್ಕಳು ಹಾಗೂ ತಾಯಿ ಹತ್ಯೆ ಆಗಿರುವುದು ಗ್ರಾಮಸ್ಥರ ಕಣ್ಣಂಚುಗಳಲ್ಲಿ ನೀರು ತರಿಸಿದೆ.

ಬೆಳಗ್ಗೆ ಬೇಗನೇ ಎದ್ದು ಯೂನಿಫಾರ್ಮ್ ಸಮೇತ ಸಿದ್ಧಗೊಂಡು ಹಾನಗಲ್ಲನ ಆಕ್ಸ್‌ಫರ್ಡ್ ಶಾಲೆಗೆ ಬರಬೇಕಿದ್ದ ಕಂದಮ್ಮಗಳು ಮಲಗಿದ ಹಾಸಿಗೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದರು. ಅಂಕಿತಾ 1ನೇ ತರಗತಿ ಮತ್ತು ಅಕುಲ್‌ ಗೌಡ 3ನೇ ತರಗತಿಯಲ್ಲಿ ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಓದಿನಲ್ಲಿ ಚುರುಕಾಗಿದ್ದರು. ಮಕ್ಕಳ ಹತ್ಯೆ ತಿಳಿದು ದಿಗ್ಧಮೆಯಾಗಿದೆ ಎಂದು ಗ್ರಾಮಸ್ಥರು ಬೇಸರ ಕಣ್ಣಿರಾದರು.

ಆರೋಪಿ ಪರಾರಿ

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರಿ, ಹೆಚ್ಚುವರಿ ಎಸ್ಪಿ ಸಿ.ಗೋಪಾಲ, ಡಿಎಸ್‌ ಪಿ ಆರ್. ಮಂಜುನಾಥ, ಹಾನಗಲ್ಲ ಠಾಣೆ ಸಿಪಿಐ ಶ್ರೀಧರ ಎಸ್‌.ಆರ್, ಪಿಎಸ್ ಐ ಯಲ್ಲಪ್ಪ ಹಿರಗಣ್ಣನವರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಾರಿಯಾಗಿರುವ ಆರೋಪಿ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Whats_app_banner