Haveri News: ಹಾವೇರಿಯ ಹಿರಿಯ ಪತ್ರಕರ್ತ, ಸಾಹಿತಿ ಪ್ರಕಾಶ ಜೋಶಿ ನಿಧನ; ನಾಲ್ಕೂವರೆ ದಶಕದಿಂದ ನಿರಂತರ ಮಾಧ್ಯಮ ಕಾಯಕ ನಿರತ ಜೋಶಿ
ನಾಲ್ಕೂವರೆ ದಶಕದಿಂದ ಪತ್ರಕರ್ತರಾಗಿ ಉತ್ತರ ಕರ್ನಾಟಕದ ಹಾವೇರಿಯಲ್ಲಿ ಕೆಲಸ ಮಾಡಿದ್ದ, ಸಾಹಿತಿಯೂ ಆಗಿದ್ದ ಪ್ರಕಾಶ ಜೋಶಿ ನಿಧನರಾದರು.

ಹಾವೇರಿ: ನಾಲ್ಕೂವರೆ ದಶಕದಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಪ್ರಕಾಶ ಜೋಶಿ ನಿಧನರಾದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಪಿಟಿಐ ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದ ಸಾಹಿತಿಯೂ ಆಗಿದ್ದ ಹಿರಿಯ ಪತ್ರಕರ್ತ ಪ್ರಕಾಶ ಜೋಶಿ (75) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು- ಬಳಗವಿದೆ.
ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳ ಕುರಿತ ವರದಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಿದ್ದರು. ಧಾರವಾಡ ಜಿಲ್ಲೆಯ ಗುಡಗೇರಿಯಲ್ಲಿ 1950 ರಲ್ಲಿ ಇವರ ಜನನ ಬಿ.ಎ. ಪದವಿಯ ಜೊತೆಗೆ ಪುಣೆಯ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸೀನಿಯರ್ ಕಲಿಕೆ. ತಬಲಾ ಬಾರಿಸುವುದೂ ಇವರ ಹವ್ಯಾಸವಾಗಿತ್ತು.ಸಂಯುಕ್ತ ಕರ್ನಾಟಕ ಪತ್ರಿಕೆಯ ಗ್ರಾಮೀಣ ವರದಿಗಾರರಾಗಿ 1979 ರಲ್ಲಿ ವೃತ್ತಿ ಬದುಕಿಗೆ ಪ್ರವೇಶಿಸಿದ್ದರು. ನಂತರ ಸವಣೂರ ಉಪವಿಭಾಗ ಕೇಂದ್ರದ ವರದಿಗಾರಿಕೆ ಆರಂಭಿಸಿದ್ದರು. 1997 ರಲ್ಲಿ ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಹಾವೇರಿ ವರದಿಗಾರರಾಗಿ ನೇಮಕ ಆಗಿದ್ದರು. 2010 ರಿಂದ ಪಿ.ಟಿ.ಐ ಅರೆಕಾಲಿಕ ವರದಿಗಾರರಾಗಿ 9 ವರ್ಷ ಸೇವೆ ಸಲ್ಲಿಸಿದ್ದರು.
ಚಿಕ್ಕವಯಸ್ಸಿನಿಂದಲೇ ಸಂಗೀತಾಭ್ಯಾಸ ಮಾಡುತ್ತಿದ್ದ ಇವರು ಪತ್ರಿಕೋದ್ಯಮ ವೃತ್ತಿಯ ಜೊತೆಗೆ ವಿದ್ಯಾಧರ ಕುಲಕರ್ಣಿ ಸಂಗೀತ ಸೇವಾ ಸಮಿತಿಯಲ್ಲಿ ಸಕ್ರಿಯ. ಶ್ರೀ ಗುರುಗೋವಿಂದ ಸೇವಾ ಟ್ರಸ್ಟ್ ಅಧ್ಯಕ್ಷ. ತಿಪ್ಪೋಜಿ ಶೇಠ ಗಣಧರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಸದಸ್ಯರೂ ಆಗಿದ್ದರು.
ಕಹಳೆ ಹಾಗೂ ದೇವದತ್ತ ಕವನಗಳು, ಪ್ರಸನ್ನದತ್ತ, ಇವರ ಸಂಗ್ರಹಿತ ಕೃತಿಗಳು. ರಟ್ಟೆ ಇಲ್ಲದವನಿಗೆ ಹೊಟ್ಟೆಯ ಹೊರೆ, ನಿಂತು ಹೋದ ನಾದಸ್ವರ, ನಾರಾಯಣಪ್ಪನ ಬಜಿ, ಸುಬ್ಬಣ್ಣನ ಶಂಕರ ಪೋಳಿ ಮೊದಲಾದ ವರದಿಗಳು ಓದುರ ಮೆಚ್ಚುಗೆಗೆ ಪಾತ್ರ ಹಾವೇರಿ ಜಿಲ್ಲೆಯ ಮೂಲಸೌಲಭ್ಯಗಳ ಬಗ್ಗೆ ವರದಿಗಳ ಮೂಲಕ ಬೆಳಕು ಚೆಲ್ಲಿದ್ದು ಇವರ ವೃತ್ತಿ ಬದುಕಿನ ವಿಶೇಷತೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಇವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು 2019 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಅವರ ಪುತ್ರ ದೇವದತ್ತ ಜೋಶಿ ಅವರು ಕೂಡ ವಿಕಾಸ ಸದಸ್ಯರು. ದೇವದತ್ತ ಜೋಶಿ ಬೆಂಗಳೂರು ಕನ್ನಡ ಪ್ರಭ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕಾಶ ಜೋಶಿ ಅವರು ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿ ಸುದೀರ್ಘ ಅವಧಿಗೆ ಕೆಲಸ ಮಾಡಿದ್ದರು. ಸಾಹಿತಿಯೂ ಆಗಿದ್ದ ಅವರ ಹಲವು ಕೃತಿಗಳು ಪ್ರಕಟವಾಗಿವೆ. ವಿಕಾಸ ಬಳಗದ ಸದಸ್ಯರೂ ಆಗಿದ್ದರು ಎಂದು ಹಿರಿಯ ಪತ್ರಕರ್ತ, ವಿಕಾಸ ಬಳಗದ ಹನುಮೇಶ ಯಾವಗಲ್ ಸಂತಾಪ ಸೂಚಿಸಿದ್ದಾರೆ.
