HD Kumaraswamy: ಕಾಂಗ್ರೆಸ್ ಗೆದ್ದ ಅಮಲಿನಲ್ಲಿ ಆಕಾಶದಲ್ಲಿದೆ,ನಾವು ನೆಲದಲ್ಲಿದ್ದೇವೆ; ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗುತ್ತೆ ಎಂದ ಮಾಜಿ ಸಿಎಂ
ನಾವು ಕಾಂಗ್ರೆಸ್ ಜೊತೆ ರಾಜಕೀಯದಲ್ಲಿ ಭಾಗಿಯಾಗಲು ಆಗುತ್ತಾ? ಕಾಂಗ್ರೆಸ್ನವರು ನಮ್ಮನ್ನ ಲೆಕ್ಕಕ್ಕೂ ಇಟ್ಟಿಲ್ಲ. ಅವರು ಆಕಾಶದ ಮೇಲೆ ಇದ್ದಾರೆ, ನಾವು ಭೂಮಿ ಮೇಲೆ ಇದ್ದೇವೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಗೆದ್ದ ಅಮಲಿನಲ್ಲಿ ಆಕಾಶದಲ್ಲಿ ಇದೆ. ನಾವು ನೆಲದಲ್ಲಿ ಇದ್ದೇವೆ. ನಾವು ಆಕಾಶಕ್ಕೆ ಏರಲು ಆಗುತ್ತಾ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು (Ex PM HD DeveGowda) ಭೇಟಿಯಾಗಲು ಬಂದಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಖ್ ಅಬ್ದುಲ್ಲಾ ಅವರನ್ನು ನಿನ್ನೆ (ಜೂನ್ 7, ಬುಧವಾರ) ಬೀಳ್ಕೊಟ್ಟ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಎಲ್ಲರೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಎಲ್ಲಿಗೆ ಬರುತ್ತೆ ಎಂದು ನೋಡೋಣ. ನಾವು ಕಾಂಗ್ರೆಸ್ ಜೊತೆ ರಾಜಕೀಯದಲ್ಲಿ ಭಾಗಿಯಾಗಲು ಆಗುತ್ತಾ? ಕಾಂಗ್ರೆಸ್ ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ. ಕಾಂಗ್ರೆಸ್ನವರು ಆಕಾಶದ ಮೇಲೆ ಇದ್ದಾರೆ, ನಾವು ಭೂಮಿ ಮೇಲೆ ಇದ್ದೇವೆ. ಅಂತಹವರ ಜೊತೆ ನಾವು ಚರ್ಚೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಆಕಾಶದಿಂದ ಕೆಳಗೆ ಇಳಿಸಬೇಕು
ಜನ ಅವರಿಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರನ್ನು ಮತ್ತೆ ಜನ ಆಕಾಶದಿಂದ ಕೆಳಗೆ ಇಳಿಸಬೇಕು ಅಲ್ವಾ? ಅವರು ಭೂಮಿಗೆ ಬರುವ ತನಕ ನಾವು ಕಾಯಬೇಕು ತಾನೇ. ನಾವು ಆಕಾಶಕ್ಕೆ ಏರಲು ಆಗುತ್ತಾ..? ಭೂಮಿಯಲ್ಲಿ ಇದ್ದೇವೆ. ನೋಡೋಣ ಕಾಯೋಣ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು
ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗುತ್ತೆ
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಚುನಾವಣೆಗಾಗಿ ಜನರ ಮತ ಪಡೆಯಲು ಅಂತಹ ಸಂದರ್ಭದಲ್ಲಿ ಚೀಪ್ ಗಿಮಿಕ್ ಸರ್ವೆ ಸಾಮಾನ್ಯ ಎಂದು ಅವರು ಹೇಳಿದ್ದಾರೆ.
ಆ ವಿಡಿಯೋ ನಾನು ನೋಡಿದ್ದೇನೆ, ಕೇಳಿಸಿಕೊಂಡಿದ್ದೇನೆ. ಸತ್ಯಾಂಶಗಳು ಒಂದೊಂದೇ ಹೊರಗೆ ಬರುತ್ತಿವೆ. ವೋಟ್ ಪಡೆಯಲು ನಾಡಿನ ಜನತೆಯನ್ನು ಯಾವ ರೀತಿ ದಾರಿ ತಪ್ಪಿಸಿದ್ದೇವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕೊನೆ ಪಕ್ಷ ಹೀಗೆ ಸತ್ಯ ಒಪ್ಪಿಕೊಳ್ಳುವ ಮೂಲಕ ತಮ್ಮ ಅಸಲಿ ಸಾಚಾತನ ತೋರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದ್ದಾರೆ.
ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಉಪ ಮುಖ್ಯಮಂತ್ರಿ ಅವರು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ಇವತ್ತು ಜಲಮಂಡಳಿ ನೌಕರರಿಗೆ ಸಂಬಳ ಕೊಡು ದುಡ್ಡು ಇಲ್ಲ. ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಸರ್ಕಾರ ವಿದ್ಯುತ್ ದರ ಹೆಚ್ಚಿಸಿದೆ. ಈಗ ನೀರಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಪರೋಕ್ಷ ಸುಳಿವು ನೀಡಿದ್ದಾರೆ. ಅಲ್ಲಿಗೆ ಈ ಸರ್ಕಾರದ ನಿಜ ಬಣ್ಣ ಏನು ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ಒಂದು ಕೈಯಲ್ಲಿ ಕೊಡೋದು, ಎರಡು ಕೈಯಲ್ಲಿ ಕಿತ್ತುಕೊಳ್ಳೋದು. ಇದು ಈ ಸರ್ಕಾರದ ಸಾಮಾಜಿಕ ನ್ಯಾಯ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಒಂದು ಕಡೆ ಗ್ಯಾರಂಟಿ ಎನ್ನುವುದು ಎಲ್ಲರಿಗೂ ಉಚಿತ ಖಚಿತ ಎಂದು ಹೇಳುತ್ತಿದ್ದರು. ಈಗ ಅದರ ಜತೆಗೆ ದರ ಏರಿಕೆಯೂ ಖಚಿತ ಆಗಿದೆ. ಈಗ ಬೆಲೆ ಏರಿಕೆಯೂ ನಿಶ್ಚಿತ ಎಂದು ಹೇಳುತ್ತಿದ್ದಾರೆ. ಬೆಲೆ ಏರಿಕೆ ಗ್ಯಾರಂಟಿಯೇ ಜನರಿಗೆ ಗಟ್ಟಿ. ಜನರಿಗೆ ಇನ್ನು ಯಾವ ಯಾವ ಕೊಡುಗೆ ಕೊಡುತ್ತಾರೆ ಎಂದು ಸ್ವಲ್ಪ ದಿನ ಕಾದು ನೋಡೋಣ ಎಂದಿದ್ದಾರೆ.
ಕಾಂತರಾಜು ವರದಿಯನ್ನು ಸ್ವೀಕಾರ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ವರದಿ ಬರಲಿ, ಅದರಲ್ಲಿ ಏನೂ ಗುಮ್ಮ ಇದೆ ಎಂದು ನೋಡೋಣ ಅಂತ ಹೇಳಿದ್ದಾರೆ.
ಆ ವರದಿಯನ್ನು ಯಾವ ರೀತಿ ಬರೆಸಿಕೊಂಡಿದ್ದಾರೆ, ಹೇಗೆ ಬರೆಸಿದ್ದಾರೆ ಎಂಬುದನ್ನು ನೋಡೋಣ. ವಾಸ್ತವಾಂಶ ಏನೂ ಇದೆ ಗಮನಿಸೋಣ, ವರದಿ ಮಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ನಮ್ಮ ಸ್ವಾಗತ ಇದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.