HD Kumaraswamy: 'ಅನ್ ಕಂಡೀಷನ್' ಸಪೋರ್ಟ್ ಕೊಟ್ಟಿದ್ವಿ ಅಂತಾ ಹೇಳಕ್ಕೆ ನಾಚಿಕೆಯಾಗಲ್ವಾ ಸಿದ್ದರಾಮಯ್ಯ?: ಹೆಚ್‌ಡಿಕೆ ಗುಡುಗು!
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ನಮಗೆ ಷರತ್ತುರಹಿತ ಬೆಂಬಲ ನೀಡಿದ್ದಾಗಿ ಸುಳ್ಳು ಹೇಳಲು ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಕರೆಯುವ ಸಿದ್ದರಾಮಯ್ಯ, ತಾಕತ್ತಿದ್ದರೆ ನಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಎಚ್‌ಡಿಕೆ ಸವಾಲು ಹಾಕಿದ್ದಾರೆ.
ಬಾಗಲಕೋಟೆ: 2018ರ ಲೋಕಸಭೆ ಚುನಾವನೆ ಬಳಿಕ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಲ್ಲಿ, ನಾವು ಷರತ್ತುರಹಿತ ಬೆಂಬಲ ನೀಡಿದ್ದೇವು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ತಿರುಗೇಎಟು ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ನಮಗೆ ಷರತ್ತುರಹಿತ ಬೆಂಬಲ ನೀಡಿದ್ದಾಗಿ ಸುಳ್ಳು ಹೇಳಲು ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಕಾಂಗ್ರೆಸ್ ಪಕ್ಷದವರು ಗುಮಾಸ್ತನಂತೆ ನೋಡಿಕೊಂಡರು. ಆದರೆ ನಾನು ಆಗ ವಿಷಕಂಠನಂತೆ ಎಲ್ಲ ನೋವನ್ನೂ ನುಂಗಿಕೊಂಡು ಸುಮ್ಮನಿದ್ದೆ. ಮೈತ್ರಿಕೂಟ ಸರ್ಕಾರದಲ್ಲಿ ಕಾಂಗ್ರೆಸ್‌ನವರುನನಗೆ ಕೊಟ್ಟ ಕಿರುಕುಳಗಳು ಒಂದೆರಡಲ್ಲ ಎಂದು ಹೆಚ್‌ಡಿಕೆ ತೀವ್ರ ವಾಗ್ದಾಳಿ ನಡೆಸಿದರು.
ನಾನು ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ಯೋಜನೆಗೆ ವಿರೋಧ ಮಾಡಿದ್ದೆ ಎಂದು ಸಿದ್ದರಾಮಯ್ಯ ಆಪಾದಿಸಿದ್ದಾರೆ. ಆದರೆ ನಾನಾಗಲಿ ಅಥವಾ ಜೆಡಿಎಸ್ ಪಕ್ಷವಾಗಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಮಾಡಿಲ್ಲ. ಎಲ್ಲಾ ಜನಪರ ಯೋಜನೆಗಳಿಗೆ ವಿರೋಧ ಬಂದಿದ್ದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಹೆಚ್‌ಡಿಕೆ ಕಿಡಿಕಾರಿದರು.
ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಕರೆಯುವ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು, ತಾಕತ್ತಿದ್ದರೆ ನಮ್ಮೊಂದಿಗೆ ಚರ್ಚೆಗೆ ಬರಲಿ. ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಾವು ಬೆಳೆದು ಬಂದ ಪಕ್ಷವನ್ನು ಟೀಕೆ ಮಾಡಬಾರದು ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಉಪದೇಶ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರಿಗೂ ಈ ನಿಯಮ ಅನ್ವಯಿಸಬೇಕು. ಸಿದ್ದರಾಮಯ್ಯ ಏಕೆ ಜೆಡಿಎಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೆಚ್‌ಡಿಕೆ ಖಾರವಾಗಿ ಪ್ರಶ್ನಿಸಿದರು.
ಜೆಡಿಎಸ್ ಪಕ್ಷ ಗೆದ್ದೆತ್ತಿನ ಬಾಲ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ ಕಾಂಗ್ರೆಸ್ ಪಕ್ಷ ಸೋತೆತ್ತಿನ ಬಾಲ ಹಿಡಿಯುತ್ತದೆ ಅಂತಾಯ್ತು. ಸುಮ್ಮನೆ ನಮ್ಮ ವಿರುದ್ಧ ಟೀಕೆ ಮಾಡಿ ನಿಮ್ಮ ಮರ್ಯಾದೆಯನ್ನು ಹರಾಜು ಹಾಕಿಕೊಳ್ಳಬೇಡಿ. ಜೆಡಿಎಸ್ ವಿರುದ್ಧ ನೀವು ಹೀಗೆ ಟೀಕೆಯನ್ನು ಮುಂದುವರೆಸಿದರೆ, ನಿಮ್ಮ ಅಸಲಿಯತ್ತನ್ನು ರಾಜ್ಯದ ಜನರ ಮುಂದೆ ತೆರೆದಿಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಹೆಚ್‌ಡಿಕೆ ನೇರ ಸವಾಲು ಹಾಕಿದರು.
ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ ತಿಂಗಳಿಗೆ 2000 ರೂ. ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಡಿಕೆ ಶಿವಕುಮಾರ್ ಈ ಹಿಂದೆ ವಿದ್ಯುತ್ ಸಚಿವರಾಗಿದ್ದರು. ಆಗ ಏಕೆ 200 ಯೂನಿಟ್ ಉಚಿತ ವಿದ್ಯುತ್ ಕೊಡಲಿಲ್ಲ ಎಂದು ಹೆಚ್‌ಡಿಕೆ ಪ್ರಶ್ನಿಸಿದರು. ನಾಡಿನ ಹೆಣ್ಣುಮಕ್ಕಳಿಗೆ ಬೇಕಾಗಿರುವುದು 2000 ರೂ. ಸಹಾಯಧನ ಅಲ್ಲ, ಬಯಲು ಶೌಚಮುಕ್ತ ವಾತಾವರಣ ಎಂದು ಮಾಜಿ ಮುಖ್ಯಮಂತ್ರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇನ್ನು ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹೆಚ್‌ಡಿಕೆ, ನಾನ್ಯಾಕೆ ಅನ್ಯ ಪಕ್ಷಗಳ ನಾಯಕರತ್ತ ನೋಡಲಿ? ಒಂದು ವೇಳೆ ನಮ್ಮ ಪಕ್ಷದ ನಾಯಕರ ಮೇಲೆ ಎರಡೂ ರಾಷ್ಟ್ರೀಯ ಪಕ್ಷಗಳು ಕಣ್ಣು ಹಾಕಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಡಲಾಗುವುದು ಎಂದು ಎಚ್ಚರಿಸಿದರು.
ಇನ್ನು ಹೆಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಹಾಸನದಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ನಾವು ಪಕ್ಷ ಸಂಘಟನೆ ದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಉತ್ತರ ಕರ್ನಾಟಕವನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ವರ್ತಿಸುತ್ತಿವೆ. ಉತ್ತರ ಕರ್ನಾಟಕದ ಭಾಗದಲ್ಲಿ ಸಾಕಷ್ಟು ಸಮಸ್ಯೆ ಇದೆ. ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ವಿಶೇಷ ಗಮನ ಕೊಡಲಾಗುವುದು ಎಂದು ಹೆಚ್‌ಡಿಕೆ ಇದೇ ವೇಳೆ ಭರವಸೆ ನೀಡಿದರು.