ನೀನೇನು ಸತ್ಯ ಹರಿಶ್ಚಂದ್ರನಾ? ನಿನ್ನ ಮೇಧಾವಿ ಅನ್ಕೊಂಡಿದ್ದೆ, ನೀನು ಹೆಬ್ಬೆಟ್ಟೇ; ಕೃಷ್ಣ ಬೈರೇಗೌಡ ಆರೋಪಕ್ಕೆ ಹೆಚ್​ಡಿಕೆ ವಾಗ್ದಾಳಿ-hd kumaraswamy slams to minister krishna byregowda and congress for denotification allegations mysuru news prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನೀನೇನು ಸತ್ಯ ಹರಿಶ್ಚಂದ್ರನಾ? ನಿನ್ನ ಮೇಧಾವಿ ಅನ್ಕೊಂಡಿದ್ದೆ, ನೀನು ಹೆಬ್ಬೆಟ್ಟೇ; ಕೃಷ್ಣ ಬೈರೇಗೌಡ ಆರೋಪಕ್ಕೆ ಹೆಚ್​ಡಿಕೆ ವಾಗ್ದಾಳಿ

ನೀನೇನು ಸತ್ಯ ಹರಿಶ್ಚಂದ್ರನಾ? ನಿನ್ನ ಮೇಧಾವಿ ಅನ್ಕೊಂಡಿದ್ದೆ, ನೀನು ಹೆಬ್ಬೆಟ್ಟೇ; ಕೃಷ್ಣ ಬೈರೇಗೌಡ ಆರೋಪಕ್ಕೆ ಹೆಚ್​ಡಿಕೆ ವಾಗ್ದಾಳಿ

HD Kumaraswamy: ತನ್ನ ವಿರುದ್ಧ ಡಿನೋಟಿಫಿಕೇಷನ್ ಆರೋಪ ಮಾಡಿದ್ದ ಸಚಿವ ಕೃಷ್ಣ ಬೈರೇಗೌಡ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಲ್ಲದೆ, ಡಿಕೆ ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ.

ಮೈಸೂರು: ಬೆಂಗಳೂರಿನ ಗಂಗೇನಹಳ್ಳಿಯ 1 ಎಕರೆ 11 ಗುಂಟೆ ಭೂಮಿಯನ್ನು ಸತ್ತವರ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್​ ಯಡಿಯೂರಪ್ಪ ಮತ್ತು ಹೆಚ್​​ಡಿ ಕುಮಾರಸ್ವಾಮಿ ಜಂಟಿ ಡಿನೋಟಿಫಿಕೇಷನ್ ಮಾಡಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇದೀಗ ಈ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಹೆಚ್​​ಡಿ ಕುಮಾರಸ್ವಾಮಿ, 'ಮಿಸ್ಟರ್ ಕೃಷ್ಣ ಬೈರೇಗೌಡ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡಬೇಡಿ. ನೀನೇನು ಸತ್ಯ ಹರಿಶ್ಚಂದ್ರನಾ, ಕಂದಾಯ ಇಲಾಖೆಯಲ್ಲಿ ಏನೇನು ಮಾಡಿದ್ದೀಯಾ ಗೊತ್ತಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನೀವು ಏನೇ ಮಾಡಿದರೂ ನನ್ನದು ಏನು ಸಿಗುವುದಿಲ್ಲ. ಕೃಷ್ಣ ಬೈರೇಗೌಡ ಫಾರಿನ್​ನಲ್ಲಿ ಓದಿದವನು, ಬಹಳ ಮೇಧಾವಿ ಎಂದುಕೊಂಡಿದ್ದೆ. ಆದರೆ ಹೆಬ್ಬೆಟ್ಟು ಎಂದುಕೊಂಡಿರಲಿಲ್ಲ. ಯಾವನೋ ಏನೋ ಬರೆದು ಕೊಟ್ಟ, ಅದನ್ನು ಇವರು ತಂದು ಓದಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾವು ಯಾವುದೇ ಅಲ್ಕಾ ಕೆಲಸ ಮಾಡಿಲ್ಲ ಎಂದ ಹೆಚ್​ಡಿಕೆ

ನಾನು ಎಲ್ಲಿಗೂ ಕದ್ದು ಓಡಿ ಹೋಗುವುದಿಲ್ಲ. ನನ್ನ ರಕ್ಷಿಸಿ ಎಂದು ಯಾರ ಮುಂದೆಯೂ ಗೋಗರೆಯುವುದಿಲ್ಲ. ಆ ಕೆಲಸವನ್ನು ನಾನು ಮಾಡಿಲ್ಲ. ನಾನು ಯಾವುದೇ ಅಲ್ಕಾ ಕೆಲಸಗಳನ್ನು ಮಾಡಿಲ್ಲ. ಡಿನೋಟಿಫಿಕೇಷನ್ ಆಗಿದೆ, ಅದನ್ನು ನಾನು ಮಾಡಿದ್ದೇನಾ? ಆ ಜಮೀನು ತೆಗೆದುಕೊಂಡಿರುವುದು ನನ್ನ ಪತ್ನಿಯ ಅತ್ತೆ. ನನಗೂ ಅವರಿಗೆ ಸಂಬಂಧ ಇಲ್ಲ ಎಂದು ಸಿಎಂ ರೀತಿ ಹೇಳುವುದಿಲ್ಲ. ನನ್ನ ಉಳಿಸಿ ಎಂದು ಕೈ ಕಟ್ಟುವ ಪರಿಸ್ಥಿತಿ ಬಂದರೆ ನಾನು 5 ಸೆಕೆಂಡ್ ಕೂಡ ರಾಜಕಾರಣದಲ್ಲಿ ಇರುವುದಿಲ್ಲ. 2015ರಲ್ಲೇ ಕೇಸ್ ಆಗಿತ್ತು. ಆ ನಂತರ ತನಿಖೆ ಮಾಡಿ ಬಿ ರಿಪೋರ್ಟ್ ಸಹ ಹಾಕಿದ್ದಾರೆ.

ಈಗ ಅದಕ್ಕೆ ಮರು ಜೀವ ಕೊಡಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ. ನಾನೇ ಆ ಫೈಲ್​ನ ನನ್ನ ಅವಧಿಯಲ್ಲಿ ರಿಜೆಕ್ಟ್ ಮಾಡಿದ್ದೇನೆ. ನನಗೂ ಯಡಿಯೂರಪ್ಪ ಅವರಿಗೂ ರಾಜಕೀಯ ಸಂಘರ್ಷ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅವತ್ತು ಅವರೇಕೆ ನನಗೆ ಸಹಾಯ ಮಾಡುತ್ತಾರೆ. ಕಳೆದ 3 ತಿಂಗಳಿನಿಂದಲೂ ಈ ಸರ್ಕಾರ ನನ್ನ ವಿರುದ್ಧ ದಾಖಲೆ ಹುಡುಕಿಸುತ್ತಿದೆ. ಯಾವುದೂ ಸಿಗದ ಕಾರಣ ಹಳೇ‌ ಕೇಸ್​ಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ‌ ಎಂದು ಮೈಸೂರಿನಲ್ಲಿ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಪಡೆದು ಜಮೀನು ಹೊಡೆದಿದ್ದು ಯಾರು? ಡಿಕೆ ಶಿವಕುಮಾರ್​​ಗೆ ಅಂತಹದ್ದು ಗೊತ್ತಿದೆ. ಬೆನಗಾನಹಳ್ಳಿ ಜಮೀನು ವಿಚಾರದಲ್ಲಿ ಏನೇನಾಗಿದೆ ಎಂಬುದು ಡಿಕೆ ಸುರೇಶ್ ಮರೆತು ಹೋಯಿತಾ? ನನಗೆ ಅಂತಹ ಯಾವ ವ್ಯವಹಾರಗಳು ಗೊತ್ತಿಲ್ಲ ಎಂದು ತಿವಿದ ಹೆಚ್​​​ಡಿಕೆ, ಈಗ ಕೆಲವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಹುಟ್ಟುತ್ತಿದೆ. ಮೈಸೂರಿನಲ್ಲಿ ದೇವೇಗೌಡರ ಫೋಟೊಗೆ ಚಪ್ಪಲಿ ಹಾರ ಹಾಕಿಸಿದ್ದು ಯಾರು? ಆಗ ಒಕ್ಕಲಿಗರ ಮೇಲಿನ ಸ್ವಾಭಿಮಾನ ಎಲ್ಲಿಗೆ ಹೋಗಿತ್ತು. ನಮ್ಮ ಸಮಾಜದ ಸ್ವಾಮೀಜಿಗೆ ಸಾಫ್ಟ್ ಆಗಿ ಇರಲು ಹೇಳಿದ್ದೇನೆಂದು ಕೆಲವರು ಹೇಳಿದ್ದಾರೆ. ನಾನ್ಯಾಕೆ ಇಂತಹವೆಲ್ಲಾ ಮಾಡಲಿ ಹೇಳಿ ಎಂದು ಡಿಕೆ ಶಿವಕುಮಾರ್ ವಿರುದ್ಧ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ವಿರುದ್ಧವೂ ವಾಗ್ದಾಳಿ

ಕಾಂಗ್ರೆಸ್ ಸಚಿವರ ಪತ್ರಿಕಾಗೋಷ್ಠಿ ಕಾಂಗ್ರೆಸ್​ನ ಟೂಲ್ ಕಿಟ್. ನಿನ್ನೆ ಯಾರೋ ಅವರಿಗೆ ಸರಿಯಾಗಿ ಸ್ಕ್ರಿಪ್ಟ್ ಕೂಡ ಬರೆದುಕೊಟ್ಟಿಲ್ಲ. ಅದರಲ್ಲೇ ಅವರು ಸಿಕ್ಕಿ ಬೀಳುತ್ತಾರೆಂದು ಕುಟುಕಿದ‌ ಕುಮಾರಸ್ವಾಮಿ, ಮುನಿರತ್ನ ಪ್ರಕರಣದ ತನಿಖೆಗೆ ಎಸ್ಐಟಿಗೆ ರಚನೆ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಎಸ್ಐಟಿ ಎನ್ನುವುದು ಸಿದ್ದರಾಮಯ್ಯ ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಎಸ್ಐಟಿ ಅವರು ಮಾಡುವುದು ತನಿಖೆಯಲ್ಲ, ಅವರು ಮಾಡುವುದು ಇವರ ಗುಲಾಮಗಿರಿ. ಯಾವನೋ ಸುಬ್ರಹ್ಮಣೇಶ್ವರ ರಾವ್ ಅಂಥೇ. ಅವನ ಮೂಲಕವೂ ಈಗ ನನ್ನ ಮೇಲೆ ತನಿಖೆ ಮಾಡಿಸುತ್ತಾರಂತೆ. ನಾನು ಯಾರ ಮೇಲಿನ ಎಸ್ಐಟಿ ತನಿಖೆಯ ಬಗ್ಗೆಯೂ ಮಾತನಾಡುವುದಿಲ್ಲ. ಎಸ್ಐಟಿ ಹೇಗೆ ಕಾರ್ಯ ಮಾಡುತ್ತೇ ಎಂಬುದು ಜನರಿಗೆ ಗೊತ್ತಾಗಲಿ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

mysore-dasara_Entry_Point