Kannada News  /  Karnataka  /  Hd Kumaraswamy Urges Voters To Support Jds In Next Assembly Elections
ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ (Verified Twitter)

HD Kumaraswamy: ನಮ್ಮ ತಪ್ಪನ್ನು ಮನ್ನಿಸಿ ಆಶೀರ್ವದಿಸಿ: ಹೀಗೊಂದು ವಿಶೇಷ ಮನವಿ ಮಾಡಿದ ಎಚ್‌ಡಿಕೆ!

14 September 2022, 6:21 ISTNikhil Kulkarni
14 September 2022, 6:21 IST

ರಾಜಕಾರಣದಲ್ಲಿ ತಪ್ಪುಗಳಾಗುವುದು ಸಹಜ. ನಮ್ಮಗಳ ನಡವಳಿಕೆಯಲ್ಲಿ ಏನಾದರೂ ದೋಷವಾಗಿದ್ದರೆ ಕ್ಷಮಿಸಿ, 2023ರ ಚುನಾವಣೆಯಲ್ಲಿ ಆಶೀರ್ವದಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಜನತೆಯಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡುತ್ತೇವೆ ಎಂದೂ ಎಚ್‌ಡಿಕೆ ಘೋಷಿಸಿದ್ದಾರೆ.

ಹಾಸನ: 2023ರ ವಿಧಾನಸಭೆ ಚುನಾವಣೆಗೆ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್‌ ಮಾತ್ರವಲ್ಲ, ಜೆಡಿಎಸ್‌ ಕೂಡ ಭರ್ಜರಿ ತಯಾರಿ ನಡೆಸಿದೆ. ಪ್ರಸ್ತುತವಾಗಿ ಚುನಾವಣಾ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಸದ್ದು ಜೋರಾಗಿ ಕೇಳುತ್ತಿದೆಯಾದರೂ, ಜೆಇಡೆಸ್‌ ಯಾವಾಗ ಬೇಕಾದರೂ ಲೈಮ್‌ಲೈಟ್‌ಗೆ ಬಂದು ಬಿಡುವ ಛಾತಿ ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈಗಾಗಲೇ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದ್ದು, ಜನರೊಂದಿಗಿನ ಸಂಪರ್ಕ ಹೆಚ್ಚಿಸಿದ್ದಾರೆ. ಅದರಂತೆ ಮಾಜಿ ಶಾಸಕ ದಿವಂಗತ ಎಚ್‌.ಎಸ್‌ ಪ್ರಕಾಶ್‌ ಅವರ 71ನೇ ಜನ್ಮದಿನದ ಸವಿನೆನಪಿಗಾಗಿ, ಹಾಸನದ ರಿಂಗ್‌ ರಸ್ತೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಎಚ್‌ಡಿಕೆ ಭಾಗಿಯಾಗಿದ್ದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, ರಾಜಕಾರಣದಲ್ಲಿ ತಪ್ಪುಗಳಾಗುವುದು ಸಹಜ. ನಮ್ಮಗಳ ನಡವಳಿಕೆಯಲ್ಲಿ ಏನಾದರೂ ದೋಷವಾಗಿದ್ದರೆ ಕ್ಷಮಿಸಿ, 2023ರ ಚುನಾವಣೆಯಲ್ಲಿ ಆಶೀರ್ವದಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು. ಹಾಸನ ಕ್ಷೇತ್ರದ ಕಾರ್ಯಕರ್ತರು ನಮ್ಮ ಕುಟುಂಬವಿದ್ದಂತೆ. ನಿಮ್ಮಗಳ ಭಾವನೆಗೆ ಬೆಲೆ ಕೊಡದೆ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಎಚ್‌ಡಿಕೆ ಇದೇ ವೇಳೆ ಭರವಸೆ ಕೂಡ ನೀಡಿದ್ದಾರೆ.

ಹಾಸನ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇರುವುದು ನನ್ನ ಗಮನಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡುತ್ತೇವೆ. ಜನತೆ ನಮಗೆ ಆಶೀರ್ವಾದ ಮಾಡಿ ಬೆಂಬಲಿಸಬೇಕು ಎಂದು ಎಚ್‌ಡಿಕೆ ಮನವಿ ಮಾಡಿದರು. ಜೆಡಿಎಸ್‌ ಪಾಲಿಗೆ ಜಿಲ್ಲೆಯ ಯುವಕರು ಆಧಾರ ಸ್ತಂಭವಿದ್ದಂತೆ. ನನಗೆ ನಿಮ್ಮೊಂದಿಗೆ ಹತ್ತಿರವಾದ ಒಡನಾಟ ಇಲ್ಲದಿದ್ದರೂ, ನನ್ನ ತಂದೆ, ತಾಯಿ ಈ ಮಣ್ಣಿನಲ್ಲಿ ನನಗೆ ಜನ್ಮ ನೀಡಿದ್ದಾರೆ. ನಾವೇನು ರಾಜಮನೆತನದಿಂದ ಬಂದವರಲ್ಲ, ರೈತ ಕುಟುಂಬದಿಂದ ಬಂದು ಕಷ್ಟ, ಕಾರ್ಪಣ್ಯವನ್ನು ಅರಿತಿದ್ದೇವೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ನಗರದಲ್ಲಿ ಕೆಲದಿನದ ಹಿಂದೆ ನಡೆದ ಜೆಡಿಎಸ್‌ ಸಭೆಯಲ್ಲಿ ವಿಧಾನಸಭೆ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಪರ ಕಅರ್ಯಕರ್ತರು ಧ್ವನಿ ಎತ್ತಿದ್ದಾರೆ. ಅದನ್ನೇ ಈ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಭಿನ್ನಮತ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಮ್ಮ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್‌ಡಿಕೆ ಇದೇ ವೇಳೆ ಗುಡುಗಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ, ಇಲ್ಲಿ ಬೆಳೆಯುವ ಆಲೂಗಡ್ಡೆ, ಕಾಫಿ, ಏಲಕ್ಕಿ, ತರಕಾರಿ ವಿದೇಶಕ್ಕೆ ರಫ್ತು ಮಾಡುವಂತಾಗಬೇಕು, ಆ ಮೂಲಕ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕು ಎಂದು ಹೋರಾಟ ಮಾಡಿದ್ದರು. ಬಿಜೆಪಿ ಶಾಸಕನಂತೆ ಕಂಡ , ಕಂಡಲೆಲ್ಲ ಲೇಔಟ್‌ ಮಾಡಲು ಹೋಗಿರಲಿಲ್ಲ, ನನ್ನ ತಂದೆ ಮುಖ್ಯಮಂತ್ರಿ, ಪ್ರಧಾನಿ, ನಾನು ಎರಡು ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದೇವೆ. ಅದ್ಯಾವುದೋ ಕಲ್ಯಾಣಮಂಟಪ, ಆಸ್ತಿ ಬಗ್ಗೆ ಮಾತನಾಡುವವರು ಒಂದು ಬಾರಿ ಶಾಸಕರಾಗಿ ಎಷ್ಟು ಸಂಪಾದಿಸಿದ್ದಾರೆ ಎಂಬುದು ಗೊತ್ತು ಎಂದು ಪ್ರೀತಂ ಗೌಡ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2018ರ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಗರಕ್ಕೆ ರಾಹುಲ್‌ ಗಾಂಧಿಯನ್ನು ಕರೆದುಕೊಂಡು ಬಂದು ಜೆಡಿಎಸ್‌ ಬಿಜೆಪಿಯ ಬಿ ಟೀಮ್‌ ಎಂದು ಹೇಳಿಸಿದ್ದರಿಂದ, ಒಂದು ವರ್ಗದ ಜನ ನಮಗೆ ಮತ ನೀಡದೇ ಹೋದರು. ಇದರಿಂದ ಜೆಡಿಎಸ್‌ ಅಭ್ಯರ್ಥಿ ದಿವಂಗತ ಎಚ್‌.ಎಸ್‌.ಪ್ರಕಾಶ್‌ ಪರಾಭವಗೊಂಡರು. ಪರಿಣಾಮಾಗಿ ಬಿಜೆಪಿಯ ಭ್ರಷ್ಟ ವ್ಯಕ್ತಿ ಈಗ ಇಲ್ಲಿನ ಶಾಸಕರಾಗಿದ್ದಾರೆ. ಜಿಲ್ಲೆಯ ಜನ ಕಾಂಗ್ರೆಸ್‌ನ ಸುಳ್ಳುಗಳಿಗೆ ಕಿವಿಗೊಡದೇ ಜೆಡಿಎಸ್‌ನ್ನು ಬೆಂಬಲಿಸಬೇಕು ಎಂದು ಎಚ್‌ಡಿ ಕುಮಾರಸ್ವಾಮಿ ಮನವಿ ಮಾಡಿದರು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.