ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ; ಸುತ್ತೂರು ಶಾಖಾ ಮಠಕ್ಕೂ ಭೇಟಿ
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ; ಸುತ್ತೂರು ಶಾಖಾ ಮಠಕ್ಕೂ ಭೇಟಿ

ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ; ಸುತ್ತೂರು ಶಾಖಾ ಮಠಕ್ಕೂ ಭೇಟಿ

ಚನ್ನಪಟ್ಟಣ ಉಪಚುನಾವಣೆ ಪ್ರಚಾರ ಬಿರುಸುನಿಂದ ಸಾಗಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಈ ಬಾರಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ. ಚನ್ನಪಟ್ಟಣದಲ್ಲಿ ಚಕ್ರವ್ಯೂಹ ರಚಿಸಲು ಕಾಂಗ್ರೆಸ್‌ನಿಂದ ಸಾಧ್ಯವಾಗಲಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಿಖಿಲ್ ಸ್ಪರ್ಧೆ ಅನಿವಾರ್ಯವಾಯಿತು ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ

ಮೈಸೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಗೆಲುವಿಗಾಗಿ ತಂದೆ ಎಚ್‌ಡಿ ಕುಮಾರಸ್ವಾಮಿ ಶಕ್ತಿ ದೇವತೆ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ. ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಮಾಡಿದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಪುತ್ರ ನಿಖಿಲ್ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ಬಳಿಕ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ ದೇಗುಲಕ್ಕೂ ಭೇಟಿ‌ ನೀಡಿದ ಕುಮಾರಸ್ವಾಮಿ, ಪೂಜೆ ಸಲ್ಲಿಸಿ ಮಗನ ಗೆಲುವಿಗಾಗಿ ಪ್ರಾರ್ಥಿಸಿದರು. ಕುಮಾರಸ್ವಾಮಿಗೆ ವಿಧಾನಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಸಾ ರಾ ಮಹೇಶ್, ಮಾಜಿ ಮೇಯರ್ ರವಿಕುಮಾರ್ ಸಾಥ್ ನೀಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣ ಉಪಚುನಾವಣೆಯ ಪ್ರಚಾರ ಬಿರುಸುನಿಂದ ಸಾಗಿದೆ. ತಾಯಿಯ ಆಶೀರ್ವಾದದಿಂದ ಈ ಬಾರಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ. ಕಾಂಗ್ರೆಸ್‌ನವರು ಚನ್ನಪಟ್ಟಣದಲ್ಲಿ ಈ ಬಾರಿ ಚಕ್ರವ್ಯೂಹ ರಚಿಸಲು ಆರಂಭದಲ್ಲಿ ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಪಕ್ಷದ ಹಿತದೃಷ್ಟಿಯಿಂದ ಈ ಬಾರಿ ನಿಖಿಲ್ ಸ್ಪರ್ಧೆ ಅನಿವಾರ್ಯವಾಯಿತು ಎಂದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಪಕ್ಷದ ಕಾರ್ಯ ಚಟುಚಟಿಕೆಗಳಿಂದ ದೂರ ಉಳಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಜಿ ಟಿ ದೇವೇಗೌಡರಿಗೆ ಅವರ ಸ್ವಕ್ಷೇತ್ರದಲ್ಲೇ ಸಾಕಷ್ಟು ಕೆಲಸಗಳಿವೆ. ಹೀಗಾಗಿ ಅವರು ಉಪಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿ ಟಿ ದೇವೇಗೌಡರು ಸಹ ನಿಖಿಲ್ ಗೆಲುವಿಗಾಗಿ ಶ್ರಮಿಸುತ್ತಾರೆ ಎಂದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೂತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಶಾಖಾಮಠದಲ್ಲೇ ಬೆಳಗ್ಗಿನ ಉಪಾಹಾರ ಸೇವಿಸಿ ಕೆಲ ಕಾಲ ಸುತ್ತೂರು ಶ್ರೀಗಳ ಜೊತೆ ಗೌಪ್ಯವಾಗಿ ಮಾತುಕತೆ ನಡೆಸಿದರು.

ಕಾಂಗ್ರೆಸ್‌ ತಪ್ಪಿನ ಮೇಲೆ ತಪ್ಪು ಮಾಡುತ್ತಿದೆ

ಶಾಖಾ ಮಠದ ಆವರಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ದೀಪಕ್ಕೆ ಸಿಕ್ಕ ಪತಂಗದಂತಾಗಿದೆ ಕಾಂಗ್ರೆಸ್ ಸರ್ಕಾರದ ಸ್ಥಿತಿ. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿಕೊಳ್ಳುತ್ತಿದೆ. ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ. ಮುಡಾ, ವಕ್ಫ್ ಎಲ್ಲದರಲ್ಲೂ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ. ಈ ವಿಚಾರಗಳು ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳುವುದಿಲ್ಲ. ಉಪಚುನಾವಣೆ ನಡೆಯುವುದೇ ಬೇರೆ ರೀತಿ. ಹಣ ಬಲ, ವೈಯುಕ್ತಿಕ ಬಲ, ಅಧಿಕಾರ ದುರುಪಯೋಗ ಎಲ್ಲವೂ ಇರುತ್ತದೆ. ಹೀಗಿದ್ದರೂ ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.‌

ಜಿ ಟಿ ದೇವೆಗೌಡರು ಎರಡನೇ ಹಂತದ ನಾಯಕರಿಗೆ ಅವಕಾಶ ಕೊಟ್ಟಿದ್ದಾರೆ‌

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೆಗೌಡ ಉಪಪ್ರಚಾರದಿಂದ ದೂರ ಉಳಿದಿರುವ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಪ್ರಚಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ‌. ಹೀಗಾಗಿ ಜಿ ಟಿ ದೇವೆಗೌಡರು ಎರಡನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ‌. ಜಿ ಟಿ ದೇವೆಗೌಡರ ಪ್ರಚಾರದ ವಿಚಾರ ಮುಂದೆ ಮಾತಾಡೋಣ. ಈಗ ಯಾಕೆ ಈ ವಿಚಾರ, ಸದ್ಯಕ್ಕೆ ಇಷ್ಟೇ ಸಾಕು. ಜಿ ಟಿ ದೇವೇಗೌಡರ ವಿಚಾರದಲ್ಲಿ ಏನೇನು ಆಗುತ್ತಿದೆ ಎಂಬುದು ಮಾಧ್ಯಮದವರಿಗೆ ಚೆನ್ನಾಗಿಯೇ ಗೊತ್ತಿದೆ. ಅದನ್ನು ಯಾಕೆ ನನ್ನ ಬಳಿ ಮತ್ತೆ ಮತ್ತೆ ಕೇಳುತ್ತಿದ್ದೀರಿ ಎಂದು ಮರುಪ್ರಶ್ನೆ ಹಾಕಿದರು.

ಸಿಎಂ ಸಿದ್ದರಾಮಯ್ಯರಿಗೆ ಈಗ ದೇವರು-ಮಠಗಳು ನೆನಪಾಗುತ್ತಿವೆ. ಮುಡಾದ ಹಗರಣ ಹೊರಬಂದ ಮೇಲಂತೂ ಅವರಿಗೆ ಹೆಚ್ಚಿನ ಭಕ್ತಿ ಬಂದಿದೆ. ಮೊದಲು ಕುಂಕುಮವನ್ನೇ ಹಾಕಿಸಿಕೊಳ್ಳುತ್ತಿರಲಿಲ್ಲ. ಈಗ ಹುಡುಕಿಕೊಂಡು ಹೋಗಿ ದೇವರ ದರ್ಶನ ಮಾಡುತ್ತಿದ್ದಾರೆ. ಇದೆಲ್ಲ ಮುಡಾ ವಿಚಾರದ ಪ್ರಭಾವ ಎಂದು ಸಿದ್ದರಾಮಯ್ಯ ಕುರಿತು ವ್ಯಂಗ್ಯವಾಡಿದ್ದಾರೆ.

ಕ್ರೆಡಿಟ್ ಯಾರಿಗೆ?

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಕೆರೆ ತುಂಬಿಸಿದ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಯುತ್ತಿರುವ ವಿಚಾರವಾಗಿ ಮಾತನಾಡಿ, ದೇವೆಗೌಡರು ಇಗ್ಗಲೂರು ಡ್ಯಾಮ್ ಕಟ್ಟದೆ ಹೋಗಿದ್ದರೆ ಯಾರು ಕೂಡ ಕೆರೆ ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ. ಕೆರೆ ತುಂಬಿಸುವ ಯೋಜನೆಗೆ 105 ಕೋಟಿ ಕೊಟ್ಟ ಸದನಾಂದಗೌಡ ನಾನು ಭಗೀರಥ ಎಂದಿದ್ದಾರೆ. ಯೋಗೇಶ್ವರ್ ತುಂಬಿಸಿರೋದು ಕೇವಲ 17‌ ಕೆರೆಗಳನ್ನು ಮಾತ್ರ. ನಾನು 107 ಕೆರೆಗಳನ್ನು ತುಂಬಿಸಿದ್ದೇನೆ. ಇದರಲ್ಲಿ ಯಾರು ಹೆಚ್ಚು ಕೆರೆ ತುಂಬಿಸಿದ್ದು ಎಂಬುದು ಗೊತ್ತಾಗುತ್ತದೆ. ಹಾಗೆ ನೋಡುವುದಾದರೆ ಇದೆಕ್ಕೆಲ್ಲ ಮೂಲ ಪುರುಷ ದೇವೇಗೌಡರು. ಅವರು ಇಗ್ಗಲೂರು ಡ್ಯಾಂ ಕಟ್ಟದಿದ್ದರೆ ಯಾರು ಸಹ ಕೆರೆ ತುಂಬಿಸಲಾಗುತ್ತಿರಲಿಲ್ಲ ಎಂದು ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಕೇಂದ್ರ ಸಚಿವ ಮಾತನಾಡಿದ್ದಾರೆ.

Whats_app_banner