Health News: ಕರ್ನಾಟಕದಲ್ಲಿ ಝೀಕಾ ವೈರಸ್‌, ಶಿವಮೊಗ್ಗದ ವೃದ್ದ ಬಲಿ, ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ ಆರೋಗ್ಯ ಇಲಾಖೆ-health news karnataka records first death for zika virus in shimoga health department alerts district taluk units kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Health News: ಕರ್ನಾಟಕದಲ್ಲಿ ಝೀಕಾ ವೈರಸ್‌, ಶಿವಮೊಗ್ಗದ ವೃದ್ದ ಬಲಿ, ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ ಆರೋಗ್ಯ ಇಲಾಖೆ

Health News: ಕರ್ನಾಟಕದಲ್ಲಿ ಝೀಕಾ ವೈರಸ್‌, ಶಿವಮೊಗ್ಗದ ವೃದ್ದ ಬಲಿ, ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ ಆರೋಗ್ಯ ಇಲಾಖೆ

Zika Virus ಝೀಕಾ ವೈರಸ್‌ ಸೋಂಕಿಗೆ ಕರ್ನಾಟಕದಲ್ಲಿ ಕೆಲವರು ಸಿಲುಕಿದ್ದರು. ಈಗ ಮೊದಲ ಬಲಿಯೂ ಆಗಿದೆ. ಶಿವಮೊಗ್ಗದಲ್ಲಿ ವೃದ್ದರೊಬ್ಬರು ಮೃತಪಟ್ಟಿದ್ದಾರೆ.

Zika Virus Alert ಕರ್ನಾಟಕದಲ್ಲಿ ಝೀಕಾ ವೈರಸ್‌ಗೆ ವೃದ್ದರೊಬ್ಬರು ಬಲಿಯಾಗಿದ್ದಾರೆ.
Zika Virus Alert ಕರ್ನಾಟಕದಲ್ಲಿ ಝೀಕಾ ವೈರಸ್‌ಗೆ ವೃದ್ದರೊಬ್ಬರು ಬಲಿಯಾಗಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಝೀಕಾ ವೈರಸ್‌ ಸದ್ದಿಲ್ಲದೇ ಹರಡುತ್ತಿದೆ. ಗರ್ಭಿಣಿಯೂ ಸೇರಿದಂತೆ ಆರು ಜನರಿಗೆ ಝೀಕಾ ವೈರಸ್‌ ಕರ್ನಾಟಕದಲ್ಲಿ ಇರುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿತ್ತು. ಇದರ ನಡುವೆಯೂ ಝೀಕಾ ವೈರಸ್‌ಗೆ ಕರ್ನಾಟಕದಲ್ಲ ಮೊದಲ ಸಾವು ದಾಖಲಾಗಿದೆ. ಝೀಕಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಶಿವಮೊಗ್ಗದ ವೃದ್ದರೊಬ್ಬರು ಮೃತಪಟ್ಟಿರುವುದನ್ನು ಕರ್ನಾಟಕ ಆರೋಗ್ಯ ಇಲಾಖೆಯೇ ಖಚಿತಪಡಿಸಿದೆ. ಇದರ ನಡುವೆಯೇ ಝೀಕಾ ಪ್ರಕರಣಗಳು ಹರಡದಂತೆ ತಡೆಯಲು ಕರ್ನಾಟಕ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕೆಯನ್ನು ವಹಿಸಿದೆ. ಕರ್ನಾಟಕದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಣ್ಗಾವಲು ಇಡುವಂತೆಯೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಶಿವಮೊಗ್ಗ ನಗರದ ಗಾಂಧಿನಗರ ನಿವಾಸಿ 74 ವರ್ಷದ ವ್ಯಕ್ತಿಗೆ ಝೀಕಾ ವೈರಸ್‌ ಸೋಂಕು ಇರುವುದು ಖಚಿತವಾಗಿತ್ತು. ಆದರೆ ಅವರು ಜೂನ್ ತಿಂಗಳಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂದುರಿಗಿದ್ದರು. ಇದಾದ ನಂತರ ಮತ್ತೆ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆಂದು ಬಂದಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಝೀಕಾ ವೈರಸ್‌ ಸಮಸ್ಯೆ ಇರುವುದು ದೃಢವಾಗಿತ್ತು. ಆನಂತರ ಅವರು ಅಸುನೀಗಿದ್ದರು.

ಆರೋಗ್ಯ ಇಲಾಖೆ ವರದಿ

ಶಿವಮೊಗ್ಗದ ವ್ಯಕ್ತಿ ಮೃತಪಟ್ಟಿರುವುದು ಝೀಕಾದಿಂದಲೇ ಎನ್ನುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಈಗ ಪ್ರಕಟಣೆಯಲ್ಲಿ ತಿಳಿಸಿದೆ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಝೀಕಾ ವೈರಸ್‌ ಸೋಂಕು ತಗುಲಿತ್ತು.ಅವರು ಆನಂತರ ಮೃತಪಟ್ಟಿದ್ದರು ಎಂಬುದನ್ನು ಆರೋಗ್ಯ ಇಲಾಖೆಯ ಮರಣದ ಆಡಿಟ್‌ ವರದಿಯಲ್ಲಿ ದಾಖಲಿಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಸದ್ದು ಮಾಡಿ ತಣ್ಣಗಾಗಿದ್ದ ಝೀಕಾ ವೈರಸ್‌ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಈಗಾಗಲೇ 6 ಝೀಕಾ ಪ್ರಕರಣಗಳು ಪತ್ತೆಯಾಗಿವೆ. ಗರ್ಭಿಣಿಯೂ ಸೇರಿದಂತೆ ಆರು ಮಂದಿಗೆ ವೈರಸ್‌ ಇರುವುದು ದೃಢವಾಗಿದ್ದು, ಅವರಿಗೆ ಚಿಕಿತ್ಸೆ ನಡೆದಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎನ್ನುವುದು ಅರೋಗ್ಯ ಇಲಾಖೆ ನೀಡಿದ ಸೂಚನೆ.

ಏನಿದು ಝೀಕಾ ವೈರಸ್‌?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಝೀಕಾ ವೈರಸ್‌ ಪ್ರಾಥಮಿಕವಾಗಿ ಈಡಿಸ್‌ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ವೇಳೆ ಹೆಚ್ಚು ಕಚ್ಚುತ್ತದೆ. ಇದರ ರೋಗಲಕ್ಷಣಗಳು ಸೌಮ್ಯವಾಗಿರುತ್ತದೆ. ಸಾಮಾನ್ಯವಾಗಿ ದದ್ದು, ಜ್ವರ, ಮದ್ರಾಸ್‌ ಐ ಹಾಗೂ ತಲೆನೋವಿನಂತಹ ಲಕ್ಷಣಗಳನ್ನು ಹೊಂದಿರುತ್ತದೆ. 2 ರಿಂದ 7 ದಿನಗಳವರೆಗೆ ಇದರ ರೋಗಲಕ್ಷಣಗಳು ಇರುತ್ತವೆ. ಇದು ಲೈಂಗಿಕ ಸಂಪರ್ಕ, ಸೋಂಕಿತ ತಾಯಿಯಿಂದ ಮಗುವಿಗೆ ಅಥವಾ ಸೋಂಕಿತರ ರಕ್ತ ಪಡೆಯುವುದರಿಂದಲೂ ಹರಡುವ ಸಾಧ್ಯತೆ ಇದೆ.

ಸೊಳ್ಳೆಯಿಂದ ಕಚ್ಚುವ ಅಪಾಯವನ್ನು ಕಡಿಮೆ ಮಾಡುವುದು ಝೀಕಾ ವೈರಸ್‌ನಿಂದ ಸೋಂಕನ್ನು ತಡೆಗಟ್ಟುವ ಏಕೈಕ ಮಾರ್ಗವಾಗಿದೆ. ಸೊಳ್ಳೆಯು ಮುಖ್ಯವಾಗಿ ಹಗಲಿನ ವೇಳೆಯಲ್ಲಿ ಕಚ್ಚುವುದರಿಂದ, ಯಾವಾಗಲೂ ನಿಮ್ಮ ಮನೆ ಹಾಗೂ ಸುತ್ತಲಿನ ವಾತಾವರಣ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ ಎನ್ನುವುದು ತಜ್ಞರ ನುಡಿ.