Health News: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣ ದುಪ್ಪಟ್ಟು, ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆ, ಸಹಾಯವಾಣಿ ಶುರು-health news karnataka see double dengue cases in one year bangalore record 50 percent cases helpline in bbmp area ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Health News: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣ ದುಪ್ಪಟ್ಟು, ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆ, ಸಹಾಯವಾಣಿ ಶುರು

Health News: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣ ದುಪ್ಪಟ್ಟು, ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆ, ಸಹಾಯವಾಣಿ ಶುರು

Dengue alert ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣದಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿಯೇ ಈ ಪ್ರಕರಣ ಅಧಿಕವಾಗಿವೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಡೇಂಗ್ಯೂ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಿವೆ.
ಡೇಂಗ್ಯೂ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಿವೆ.

ಬೆಂಗಳೂರು: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಅದರಲ್ಲೂ ರಾಜಧಾನಿ ಬೆಂಗಳೂರು ನಗರದಲ್ಲೂ ಡೆಂಗ್ಯೂ ಪ್ರಕರಣಗಳ ಪ್ರಮಾಣ ಕೊಂಚೆ ಹೆಚ್ಚೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಆತಂಕಕ್ಕೀಡು ಮಾಡಿದೆ. ಆಗಸ್ಟ್‌ 3 ರವರೆಗೆ ರಾಜ್ಯದಲ್ಲಿ ಒಟ್ಟು 19,300 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿ ಜನ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿರುವುದರಿಂದ ಆರೋಗ್ಯ ಇಲಾಖೆ ಹಾಗೂ ಬೃಹತ್‌ ಬೆಂಗಳೂರು ನಗರ ಪಾಲಿಕೆಯಿಂದ ಸಹಾಯವಾಣಿಯನ್ನೂ ಆರಂಭಿಸಿ ಜನರಿಗೆ ಮಾಹಿತಿ ನೀಡುವಂತೆ ಕೋರಲಾಗುತ್ತಿದೆ.

ರಾಜ್ಯ ಆರೋಗ್ಯ ಇಲಾಖೆಯೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 19,313 ಪ್ರಕರಣಗಳು ವರದಿಯಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. 2023ರ ಇದೇ ಅವಧಿಯಲ್ಲಿ ರಾಜ್ಯದಲ್ಲಿ 4,864 ಡೆಂಗ್ಯೂ ಪ್ರಕರಣಗಳು ಮಾತ್ರ ವರದಿಯಾಗಿದ್ದವು. ಒಟ್ಟು 19,313 ಪ್ರಕರಣಗಳಲ್ಲಿ 1 ವರ್ಷದೊಳಗಿನ 360 ಮಕ್ಕಳು, ಮತ್ತು 6,863 ಮಂದಿ 18 ವರ್ಷದೊಳಗಿನವರು ಎಂದು ತಿಳಿದು ಬಂದಿದೆ.

ಎಲ್ಲೆಲ್ಲಿ ಎಷ್ಟು ಪ್ರಕರಣ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 3 ಮಂದಿ ಸಾವನ್ನಪ್ಪಿದ್ದರೆ. ಶಿವಮೊಗ್ಗ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 2, ಹಾವೇರಿ, ಮೈಸೂರುಮತ್ತು ಧಾರವಾಡದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಕಳೆದ 2 ವಾರಗಳಲ್ಲಿ ದಾಖಲಾಗಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.

ಶೇ. 46ರಷ್ಟು ಪ್ರಕರಣಗಳು ಬೆಂಗಳೂರುವೊಂದರಲ್ಲೇ ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಜುಲೈ 1ರಂದು 1,563 ಪ್ರಕರಣಗಳು ದಾಖಲಾಗಿದ್ದರೆ ಆಗಸ್ಟ್ 3ಕ್ಕೆ 8,800 ಪ್ರಕರಣಗಳು ದಾಖಲಾಗಿವೆ. ಆಂದರೆ ಬೆಂಗಳೂರಿನಲ್ಲಿ ಒಂದು ತಿಂಗಳ ಅಂತರದಲ್ಲಿ 6 ಪಟ್ಟು ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ಹೊರತುಪಡಿಸಿದರೆ ಹಾಸನ (758), ಮೈಸೂರು (693), ಚಿಕ್ಕಮಗಳೂರು (678), ಮಂಡ್ಯ (661), ಹಾವೇರಿ (625), ಧಾರವಾಡ (606), ಚಿತ್ರದುರ್ಗ (533), ತುಮಕೂರು (506), ಕಲಬುರಗಿ (503), ಮತ್ತು ಶಿವಮೊಗ್ಗದಲ್ಲಿ 459 ಪ್ರಕರಣಗಳು ಬೆಳಕಿಗೆ ಬಂದಿವೆ.

ಬೆಂಗಳೂರಲ್ಲಿ ಸಹಾಯವಾಣಿ

ಬೆಂಗಳೂರಿನಲ್ಲಿ ಏಕಾಏಕಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಡೆಂಗ್ಯೂ ನಿಯಂತ್ರಣದ ಸಮರ್ಪಕ ನಿರ್ವಹಣೆಗೆ ಆರೋಗ್ಯ ಇಲಾಖೆ ಬೆಂಗಳೂರಿನ 6 ಸರ್ಕಾರಿ ಆಸ್ಪತ್ರೆಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದೆ. ಜೊತೆಗೆ ಆರೋಗ್ಯ ಇಲಾಖೆ ಟೋಲ್‌ ಫ್ರೀ ನಂಬರ್‌ 1800-425-8330 ಸ್ತಾಪಿಸಿದ್ದು ಸಾರ್ವಜನಿಕರು ತಮ್ಮ ದೂರು ಅಥವಾ ಮಾಹಿತಿ ಪಡೆಯಬಹುದಾಗಿದೆ.

ಈಡಿಸ್‌ ಏಜಿಪ್ಟಿ ಎಂಬ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವುದರಿಂದ ಹರಡುತ್ತದೆ. ಕಚ್ಚಿದ ಒಂದು ಸೊಳ್ಳೆ ಆರೋಗ್ಯವಂತ 7-8 ಮಂದಿಗೆ ಡೆಂಗಿಯನ್ನು ಹರಡುವ ಶಕ್ತಿ ಹೊಂದಿರುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ನಿರಂತರ ಬರಗಾಲ ಮತ್ತು ಅದಕ್ಕೆ ಹೊಂದಿಕೊಂಡಂತೆ ನಿರಂತರ ಮಳೆಯಿಂದಾಗಿ ಡೆಂಗ್ಯೂ ಹೆಚ್ಚಳವಾಗಿದೆ. ಮುನ್ನೆಚ್ಚರಿಕೆ ವಹಿಸಬೇಕು.ಸೊಳ್ಳೆಗಳು ಹರಡದಂತೆ ಗಮನ ನೀಡಬೇಕು.ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ವರದಿ: ಎಚ್.ಮಾರುತಿ, ಬೆಂಗಳೂರು