Health News: 10 ಮಂದಿ ಪ್ರಾಣ ಉಳಿಸಿದ ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ: ದುಬಾರಿ ಬೆಲೆಯ ಚುಚ್ಚುಮದ್ದು ಉಚಿತ
ಹಠಾತ್ ಹೃದಯಾಘಾತ ಸಂಭವಿಸುತ್ತಿರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು(Puneeth Rajkumar s Hriday Jyothi scheme) ಜಾರಿಗೆ ತಂದಿತು. ಈ ಯೋಜನೆಯಡಿ 11,000 ಜನರ ಗಂಭೀರ ಸಮಸ್ಯೆಗಳನ್ನು ಪತ್ತೆ ಮಾಡಿ 10 ಮಂದಿಯ ಪ್ರಾಣ ರಕ್ಷಣೆ ಮಾಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.ವರದಿ: ಪ್ರಿಯಾಂಕಗೌಡ, ಬೆಂಗಳೂರು
ಬೆಂಗಳೂರು: ವರನಟ ಡಾ. ರಾಜ್‍ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದವರು. ಅದೇ ಅಭಿಮಾನಿಗಳು ಅವರ ಪುತ್ರ ದಿವಂಗತ ಪುನೀತ್ ರಾಜ್‍ಕುಮಾರ್ ಅವರನ್ನು ದೇವರೆಂದು ಕರೆದು ಮನೆ-ಮನಗಳಲ್ಲಿ ಪೂಜಿಸುತ್ತಿದ್ದಾರೆ. ದೇವರ ಫೋಟೋ ಇರುವ ಜಾಗದಲ್ಲಿ ಪುನೀತ್ ಫೋಟೋ ಕೂಡ ರಾರಾಜಿಸುತ್ತಿದೆ. ಹೃದಯಾಘಾತದಿಂದ ಮೃತಪಟ್ಟ ನಂತರವೂ ಹಲವು ಜೀವಗಳಿಗೆ ಬೆಳಕಾದ ನಟ ಪುನೀತ್ ರಾಜ್‍ಕುಮಾರ್ ಅವರ ಹೆಸರಲ್ಲಿ ತಂದ ಹೃದಯ ಜ್ಯೋತಿ ಯೋಜನೆ ಸಾಕಷ್ಟು ಯಶಸ್ಸನ್ನು ಕಂಡಿದ್ದು, ಹಲವರ ಜೀವ ಉಳಿಸಿದೆ.
ಯೋಜನೆಯಡಿಯಲ್ಲಿ 10 ಜೀವಗಳ ರಕ್ಷಣೆ
ಜನರಲ್ಲಿ ಹಠಾತ್ ಹೃದಯಾಘಾತ ಸಂಭವಿಸುತ್ತಿರುವ ಕಾರಣ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು. ಈ ಚುಚ್ಚುಮದ್ದನ್ನು ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರದಿಂದ ಎಸ್‍ಟಿ-ಎಲಿವೇಟೆಡ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (STEMI) ಕಾರ್ಯಕ್ರಮದ ಎರಡನೇ ಹಂತದ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ 11,000 ಜನರ ಗಂಭೀರ ಸಮಸ್ಯೆಗಳನ್ನು ಪತ್ತೆ ಮಾಡಲಾಗಿದ್ದು, ಇದುವರೆಗೆ 10 ಮಂದಿಯ ಪ್ರಾಣ ರಕ್ಷಣೆ ಮಾಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ರಾಜ್ಯದಾದ್ಯಂತ 86 ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವು ದುಬಾರಿ ಬೆಲೆಯ ಟೆನೆಕ್ಟ್ಪೇಸ್ ಇಂಜೆಕ್ಷನ್ ಅನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದ 15 ದಿನಗಳಲ್ಲಿ ಒಟ್ಟು 10 ಜೀವಗಳನ್ನು ಉಳಿಸಲಾಗಿದೆ. ಈ ಚುಚ್ಚುಮದ್ದನ್ನು ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದಿಂದ ಎಸ್‍ಟಿ-ಎಲಿವೇಟೆಡ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಕಾರ್ಯಕ್ರಮದ 2ನೇ ಹಂತದ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ.
ಮೊದಲನೇ ಹಂತದ ಯೋಜನೆಯಲ್ಲಿ ಟೆನೆಕ್ಟೆಪ್ಲೇಸ್ ಚುಚುಮದ್ದು ಸಿಗುತ್ತಿರಲಿಲ್ಲ. ಎರಡನೇ ಹಂತದ ಯೋಜನೆಯಲ್ಲಿ ಈ ಜೀವರಕ್ಷಕ ಲಭ್ಯವಿದ್ದು, ಹಠಾತ್ ಹೃದಯಾಘಾತ ಸಂಭವಿಸದಂತೆ ತಡೆಗಟ್ಟುವಲ್ಲಿ ಈ ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಜೀವರಕ್ಷಕ ಇಂಜೆಕ್ಷನ್ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯೋಜನೆಯನ್ನು 2023ರ ನವೆಂಬರ್ ನಲ್ಲಿ ಪ್ರಾರಂಭಿಸಲಾಯಿತಾದರೂ, ಟೆಂಡರ್ ಪ್ರಕ್ರಿಯೆ ಹಾಗೂ ಕೋಲ್ಡ್ ಸ್ಟೋರೇಜ್ ಗಳ ಬಗ್ಗೆ ಖಾತ್ರಿಯಾದ ನಂತರ ಇವನ್ನು ಜೂನ್ ಮಧ್ಯ ಭಾಗದಲ್ಲಿ ಆಸ್ಪತ್ರೆಗಳಿಗೆ ತರಲಾಯಿತು.
12 ಎಂಐ (ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಥವಾ ಹೃದಯಾಘಾತ) ರೋಗಿಗಳಿಗೆ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅನ್ನು ಉಚಿತವಾಗಿ ನೀಡಲಾಯಿತು. ಇದರಿಂದ 10 ರೋಗಿಗಳ ಜೀವವನ್ನು ಉಳಿಸಲು ಸಹಾಯಕವಾಯಿತು ಎಂದು ಎನ್‍ಸಿಡಿ ಉಪ ನಿರ್ದೇಶಕ ಡಾ. ಶ್ರೀನಿವಾಸ್ ಹೇಳಿದ್ದಾಗಿ ಟೈಮ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಒಂದು ಚುಚ್ಚುಮದ್ದಿನ ಬೆಲೆ 28,000 ರೂ.
ಈ ಹಿಂದೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಠಾತ್ ಹೃದಯಾಘಾತ ತಡೆಗಟ್ಟುವ ಆರಂಭಿಕ ಹಂತದಲ್ಲಿ ಸ್ಟ್ರೆಪ್ಟೋಕಿನೇಸ್ ಚುಚ್ಚುಮದ್ದನ್ನು ಬಳಸಲಾಗುತ್ತಿತ್ತು. ಇದಕ್ಕೆ ಕಡಿಮೆ ವೆಚ್ಚವಾಗಿದ್ದರೂ ಸಹ ಅದರ ನಿರ್ವಹಣೆಯಲ್ಲಿ ತೊಡಕಾಗಿತ್ತು ಎಂದು ಅವರು ಹೇಳಿದರು. ಆದರೆ, ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ತ್ವರಿತವಾಗಿದ್ದು, ಇದು ಹಠಾತ್ ಹೃದಯಾಘಾತವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಈ ಚುಚ್ಚುಮದ್ದು ಒಂದು ಸೀಸೆಗೆ 28,000 ರೂ.ಗಳಿವೆ. ಆದರೆ, ರಾಜ್ಯದಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.
450 ವೈದ್ಯಕೀಯ ಸಿಬ್ಬಂದಿಗೆ ತರಬೇ(ತಿ
ಇದನ್ನು ಸೂಕ್ತವಾಗಿ ನಿರ್ವಹಿಸಲು ವೈದ್ಯರು, ದಾದಿಯರು ಹಾಗೂ ಆಂಬ್ಯುಲೆನ್ಸ್ ಚಾಲಕರು ಸೇರಿದಂತೆ ಸುಮಾರು 450 ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಅಲ್ಲದೆ, ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆಯಿಂದ ಆನ್‍ಲೈನ್ ಮೂಲಕ ತರಬೇಕಿ ನೀಡಲಾಗಿದೆ. 20 ಎಂಜಿ, 30 ಎಂಜಿ ಹಾಗೂ 40 ಎಂಜಿ ಟೆನೆಕ್ಟೆಪ್ಲೇಸ್ ಅನ್ನು ಸಂಗ್ರಹಿಸಲಾಗಿದ್ದು, ಸುಮಾರು 8 ಕೋಟಿ ರೂ. ಮೌಲ್ಯದ ಖರೀದಿಯಾಗಿದೆ. ಇನ್ನೂ ಕೂಡ 25 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ನಾಲ್ಕು ಹಂತದಲ್ಲಿ 2025ರ ಡಿಸೆಂಬರ್ ಅಂತ್ಯದೊಳಗೆ ಈ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ವಿಸ್ತರಿಸಲಾಗುತ್ತಿದ್ದು, 2025-26ರೊಳಗೆ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಡಾ. ಶ್ರೀನಿವಾಸ್ ತಿಳಿಸಿದರು.
ಸ್ಟೆಮಿಯ ಮೊದಲ ಹಂತದಲ್ಲಿ 71 ತಾಲೂಕು ಆಸ್ಪತ್ರೆಗಳು ಸೇರಿದಂತೆ 86 ಸ್ಪೋಕ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಎಂಐ ಅನ್ನು ಪತ್ತೆಹಚ್ಚಲು ಎಐ ಮತ್ತು ಕ್ಲೌಡ್ ಕಾರ್ಯವಿಧಾನವನ್ನು ಹೊಂದಿರುವ ಸ್ಟೆಮಿ ಕಿಟ್‍ಗಳನ್ನು ಸ್ಥಾಪಿಸಲಾಗಿದೆ. ಇದು ಹಠಾತ್ ಹೃದಯಾಘಾತದಿಂದ ಉಂಟಾಗುವ ಸಾವನ್ನು ತಡೆಗಟ್ಟಲು ಸಹಾಯಕವಾಗಿದೆ. ಎದೆನೋವು ಕಾಣಿಸಿಕೊಂಡವರು ಕೂಡಲೇ ಸ್ಪೋಕ್ ಕೇಂದ್ರಕ್ಕೆ ದಾಖಲಾಗಬೇಕು. ಇಲ್ಲಿ ಆರು ನಿಮಿಷದೊಳಗೆ ರೋಗಿಯ ಸ್ಥಿತಿಗತಿ ಬಗ್ಗೆ ಎಐ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುತ್ತದೆ. ಇದು ಅನೇಕರ ಜೀವವನ್ನು ಉಳಿಸುವ ಸಂಜೀವಿನಿಯಾಗಿದ್ದು, ಜನರು ಇದನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ ಡಾ. ಶ್ರೀನಿವಾಸ್.
( ವರದಿ: ಪ್ರಿಯಾಂಕಗೌಡ, ಬೆಂಗಳೂರು)