HMP ಸೋಂಕಿನಿಂದ ರಕ್ಷಣೆ ಪಡೆಯುವುದು ಹೇಗೆ? ಆಕಸ್ಮಾತ್ ಸೋಂಕು ದೃಢಪಟ್ಟರೆ ಔಷಧಿ ಇದೆಯೇ? ಮುನ್ನೆಚ್ಚರಿಕೆ ಕ್ರಮಗಳೇನು? -ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Hmp ಸೋಂಕಿನಿಂದ ರಕ್ಷಣೆ ಪಡೆಯುವುದು ಹೇಗೆ? ಆಕಸ್ಮಾತ್ ಸೋಂಕು ದೃಢಪಟ್ಟರೆ ಔಷಧಿ ಇದೆಯೇ? ಮುನ್ನೆಚ್ಚರಿಕೆ ಕ್ರಮಗಳೇನು? -ಇಲ್ಲಿದೆ ವಿವರ

HMP ಸೋಂಕಿನಿಂದ ರಕ್ಷಣೆ ಪಡೆಯುವುದು ಹೇಗೆ? ಆಕಸ್ಮಾತ್ ಸೋಂಕು ದೃಢಪಟ್ಟರೆ ಔಷಧಿ ಇದೆಯೇ? ಮುನ್ನೆಚ್ಚರಿಕೆ ಕ್ರಮಗಳೇನು? -ಇಲ್ಲಿದೆ ವಿವರ

ಚೀನಾದಲ್ಲಿ ಪತ್ತೆಯಾಗಿರುವ ಹೊಸ ವೈರಸ್ ಹೆಚ್ಎಂಪಿ ಅಲ್ಲಿನ ಜನರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದೆ. ಕೆಲವು ದೇಶಗಳಿಗೆ ಈಗಾಗಲೇ ಈ ವೈರಸ್ ಹರಡಿದ್ದು, ಬೆಂಗಳೂರಿನ ಮಗುವಿಗೂ ಸೋಂಕು ಇರುವುದಾಗಿ ವರದಿಯಾಗಿದೆ. ಹೆಚ್ಎಂಪಿವಿಯಿಂದ ರಕ್ಷಣೆ ಪಡೆಯುವುದು ಹೇಗೆ, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಹೆಚ್ಎಂಪಿ ವೈರಸ್ ತಡೆಗಟ್ಟಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಯಿರಿ. (Photo-Cleveland Clinic)
ಹೆಚ್ಎಂಪಿ ವೈರಸ್ ತಡೆಗಟ್ಟಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಯಿರಿ. (Photo-Cleveland Clinic)

2019 ರಲ್ಲಿ ಪತ್ತೆಯಾಗಿ 2022 ವರೆಗೆ ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೋವಿಡ್-19 ಸಾಂಕ್ರಾಮಿಕದಿಂದ ಹೊರ ಬಂದ ಎರಡೇ ವರ್ಷಕ್ಕೆ ಚೀನಾದಲ್ಲಿ ಮತ್ತೆ ಹೊಸ ವೈರಸ್ ಕಾಣಿಸಿಕೊಂಡಿದ್ದು, ತಲ್ಲಣ ಸೃಷ್ಟಿಸಿದೆ. ಹ್ಯೂಮನ್ ಮೆಟಾನ್ಯುಮೊ ವೈರಸ್ (ಹೆಚ್ಎಂಪಿವಿ) ಹೆಸರಿನ ಸೋಂಕು ತಗುಲಿರುವ ಸಾವಿರಾರು ಮಂದಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅಷ್ಟು ಮಾತ್ರವಲ್ಲದೆ, ಈ ಅಪಾಯಕಾರಿ ವೈರಸ್ ಈಗಾಗಲೇ ಹಲವು ದೇಶಗಳಿಗೆ ಹರಡಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಭಾರತಕ್ಕೆ ಈ ವೈರಸ್ ಕಾಲಿಟ್ಟಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಹೆಚ್ಎಂಪಿ ವೈರಸ್ ರಕ್ಷಣೆ ಪಡೆಯುವುದು ಹೇಗೆ, ಒಂದು ವೇಳೆ ವೈರಸ್ ದೃಢಪಟ್ಟರೆ ಚಿಕಿತ್ಸೆ ಹೇಗೆ, ಔಷಧಿ ಇದೆಯಾ ಹಾಗೂ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮೊದಲಿಗೆ ಸೋಂಕು ದೃಢಪಟ್ಟರೆ ಯಾವುದೇ ರೀತಿಯ ಆತಂಕ ಪಡುವ ಆಗತ್ಯ ಇಲ್ಲ. ಯಾರು ಕೂಡ ಭಯ ಭೀತರಾಗಬಾರದು. ಧೈರ್ಯದಿಂದ ಎದುರಿಸಬೇಕು. ಒಂದು ವೇಳೆ ನಿಮಗೆ ಸೋಂಕು ಇರುವುದು ದೃಢಪಟ್ಟರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿ ನಿಮಗೆ ಚಿಕಿತ್ಸೆ ನೀಡುವ ಮುನ್ನ ನಿಮ್ಮ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಲಾಗುತ್ತದೆ. ಇದರ ಜೊತೆಗೆ ನಿಮ್ಮ ಮೂಗು ಮತ್ತು ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಹೆಚ್ಎಂಪಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿಕೊಡುತ್ತಾರೆ.

ಹೆಚ್ಎಂಪಿ ಸೋಂಕಿಗೆ ಔಷಧಿ ಇದೆಯಾ?

ಹ್ಯೂಮನ್ ಮೆಟಾನ್ಯುಮೊ ವೈರಸ್‌ಗೆ ಚಿಕಿತ್ಸೆ ನೀಡುವಂತಹ ಯಾವುದೇ ರೀತಿಯ ನಿರ್ದಿಷ್ಟವಾದ ಆಂಟಿ ವೈರಸ್ ಔಷಧಿ ಇಲ್ಲ. ರೋಗಲಕ್ಷಣಗಳು ಗಂಭೀರವಾಗದಿದ್ದರೆ ಮನೆಯಲ್ಲೇ ಉಳಿದುಕೊಂಡು ಪ್ರಾಥಮಿಕ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಇಲ್ಲಿ ವೈದ್ಯರು ನಿಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಾರೆ. ಇದು ನಿಮ್ಮ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ.

ಒಂದು ವೇಳೆ ನೀವು ಉಸಿರಾಡಲು ಕಷ್ಟವಾಗುತ್ತಿದ್ದರೆ, ಆಮ್ಲಜನಕದ ವ್ಯವಸ್ಥೆಯನ್ನು ಮಾಡಿ ಉಸಿರಾಟದ ಸಮಸ್ಯೆ ಬಗೆಹರಿಸಲು ನೆರವಾಗುತ್ತಾರೆ. ಆ ಮೂಲಕ ನಿಮ್ಮ ದೇಹದಲ್ಲಿನ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಬಹಳಷ್ಟು ಸಾಧ್ಯತೆ ಇರುತ್ತದೆ.

ಹೆಚ್ಎಂಪಿವಿಗೆ ಆಂಟಿಬಯೋಟಿಕ್ ಅಗತ್ಯವಿದೆಯಾ?

ಬ್ಯಾಕ್ಟೀರಿಯಾಗಳಿಗೆ ಮಾತ್ರ ಆಂಟಿಬಯೋಟಿಕ್ (ಪ್ರತಿಜೀವಕಗಳು) ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ಹೆಚ್ಎಂಪಿ ವೈರಸ್ ಆಗಿರುವುದರಿಂದ ಆ್ಯಂಟಿಬಯೋಟಿಕ್ ಈ ವೈರಸ್‌ಗೆ ಪರಿಹಾರ ನೀಡುವುದಿಲ್ಲ. ಹೆಚ್ಎಂಪಿ ವೈರಸ್ ಬಾರದಂತೆ ತಡೆಗಟ್ಟಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಯಿರಿ.

ಹೆಚ್ಎಂಪಿ ವೈರಸ್ ತಡೆಗಟ್ಟುವುದು ಹೇಗೆ?

  • ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ. ಸೋಪ್ ಮತ್ತು ನೀರನ್ನು ಬಳಸಲು ಸಾಧ್ಯವಾಗದಿದ್ದರೆ ಹ್ಯಾಂಡ್‌ ಸ್ಯಾನಿಟೈಸರ್ ಬಳಸಬಹುದು
  • ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಗು ಮತ್ತು ಬಾಯಿಯನ್ನು ಖರ್ಚೀಪ್ ಅಥವಾ ಮಾಸ್ಕ್ ನಿಂದ ಮುಚ್ಚಿಕೊಳ್ಳಿ. ಸೀನುವಾಗ ಅಥವಾ ಕೆಮ್ಮುವಾಗ ಬಟ್ಟೆಯನ್ನು ಅಡ್ಡ ಇಟ್ಟುಕೊಳ್ಳಬೇಕು
  • ಶೀತ ಅಥವಾ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿರುವವರೊಂದಿಗೆ ಅಂತರವನ್ನು ಕಾಪಾಡಿಕೊಳ್ಳಿ
  • ಅನಾರೋಗ್ಯದಿಂದ ಬಳಲುತ್ತಿದ್ದರೆ ಬೇರೆಯವರೊಂದಿಗೆ ಇರುವುದನ್ನು ತಪ್ಪಿಸಿ. ಸಾಧ್ಯವಾದ ಮಟ್ಟಿಗೆ ಮುಖವಾಡ (ಮಾಸ್ಕ್) ಧರಿಸುವುದನ್ನು ಪರಿಗಣಿಸಿ.
  • ನಿಮ್ಮ ಮುಖ, ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸಿ
  • ಇತರರೊಂದಿಗೆ ಆಹಾರ ಅಥವಾ ತಿನ್ನುವ ಪಾತ್ರೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ

ವೈದ್ಯರನ್ನು ಭೇಟಿ ಮಾಡಿದಾಗ ನೀವು ಯಾವೆಲ್ಲಾ ಪ್ರಶ್ನೆಗಳಿಗೆ ಕೇಳಿ ನಿಮ್ಮ ಅನುಮಾನಗಳನ್ನ ಬಗೆಹರಿಸಿಕೊಳ್ಳಬೇಕು?

  • ಒಂದು ವೇಳೆ ವೈರಸ್ ಕಾಣಿಸಿಕೊಂಡರೆ ನಾನು ಯಾವ ಪ್ರತ್ಯಕವಾದ ಔಷಧಿಗಳನ್ನು ಬಳಸಬಹುದು
  • ಮನೆಯಲ್ಲೇ ರೋಗಲಕ್ಷಣಗಳಿಗೆ ಹೇಗೆ ಚಿಕಿತ್ಸೆ ಪಡೆಯಬಹುದು
  • ನಾನು ಯಾವ ತೀವ್ರ ರೋಗಲಕ್ಷಣಗಳನ್ನು ಗಮನಿಸಬೇಕು
  • ವೈರಸ್ ಬಂದರೆ ವಾಸಿಯಾಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು
  • ನಾನು ಬೇರೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು

ಹೀಗೆ ಹಲವು ರೀತಿಯ ಕ್ರಮಗಳ ಮೂಲಕ ಹೆಚ್ಎಂಪಿ ವೈರಸ್ ಹರಡುವುದನ್ನು ತಡೆಗಟ್ಟುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Whats_app_banner