Koppal Rain: ಕೊಪ್ಪಳದಲ್ಲಿ ಭಾರೀ ಮಳೆ: ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು ಮಹಿಳೆಯರು
ಕಳೆದ ಮೂರು ದಿನಗಳಿಂದ ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿರುವ ಘಟನೆ ಶನಿವಾರ ನಡೆದಿದೆ.
ಕೊಪ್ಪಳ: ಕಳೆದ ಮೂರು ದಿನಗಳಿಂದ ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿರುವ ಘಟನೆ ಶನಿವಾರ ನಡೆದಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆಯರನ್ನು ಸಂಕನೂರು ಗ್ರಾಮದ ಭುವನೇಶ್ವರಿ ಪಾಟೀಲ್ (40), ಗಿರಿಜವ್ವ ಕಲ್ಲನಗೌಡ ಮಾಲಿ ಪಾಟೀಲ್(32), ವೀಣಾ ಮಾಲಿ ಪಾಟೀಲ್ (19) ಹಾಗೂ ಪವಿತ್ರ ಸಿದ್ದಯ್ಯ ಪಾಟೀಲ್ (40) ಎಂದು ಗುರುತಿಸಲಾಗಿದೆ.
ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ್ದ ಮಹಿಳೆಯರು ಮರಳಿ ಮನೆಗೆ ಬರುವಾಗ ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.\ ಸುದ್ದಿ ತಿಳಿಯುತ್ತಲೆ ಸಂಕನೂರು ಗ್ರಾಮಕ್ಕೆ ತಹಶೀಲ್ದಾರ ಶ್ರೀಶೈಲ್ ತಳವಾರ,ಯಲಬುರ್ಗಾ ಸಿಪಿಐ, ಪಿಎಸ್ಐ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ಮೂವರ ಮೃತದೇಹ ಸಿಕ್ಕಿದ್ದು, ಇನ್ನೋರ್ವ ಮಹಿಳೆಯ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಘಟನೆ ಬಗ್ಗೆ ತಿಳಿದು ಸಚಿವ ಹಾಲಪ್ಪ ಆಚಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸಚಿವರು ಬರುತ್ತಿದ್ದಂತೆ ಗ್ರಾಮಸ್ಥರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ವಾತಾವರಣ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಇನ್ನು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಮನೆ ಕುಸಿದು ಬಿದ್ದು ವೃದ್ಧನೋರ್ವ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಮೃತ ವೃದ್ಧನನ್ನು ಮರಿಯಪ್ಪ ಚಿನಿವಾಲ್ (60) ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ಮರಿಯಪ್ಪ ಹಾಗೂ ಕುಟುಂಬಸ್ಥರು ಮಲಗಿದ್ದ ವೇಳೆ ಏಕಾಏಕಿ ಮನೆ ಕುಸಿದು ಬಿದ್ದಿದೆ. ಮನೆಯ ಅವಶೇಷಗಳಡಿ ಸಿಲುಕಿ ಮರಿಯಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರೀಲ್ಸ್ ಮಾಡುತ್ತಿದ್ದ ವೇಳೆ ಚೆಕ್ ಡ್ಯಾಂಗೆ ಬಿದ್ದು ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ನಿನ್ನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಗನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಹರಿಹರದ ಆಶ್ರಯ ಬಡಾವಣೆಯ ಪವನ್ (25) ಹಾಗೂ ಪ್ರಕಾಶ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ನೇಹಿತರಾಗಿದ್ದು, ರೀಲ್ಸ್ ಮಾಡುವ ವೇಳೆ ದುರಂತ ಸಂಭವಿಸಿದೆ. ರೀಲ್ಸ್ ಮಾಡುವ ವೇಳೆ ನೀರಿಗೆ ಬಿದ್ದ ಪ್ರಕಾಶ್ನನ್ನು ರಕ್ಷಿಸಲು ಪವನ್ ಕೂಡ ಕೆಳಗಿಳಿದಿದ್ದು ಬಳಿಕ ಇಬ್ಬರೂ ನೀರುಪಾಲಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತುಂಬಿ ಹರಿಯುತ್ತಿದ್ದ ಕೆರೆ ಬಳಿ ರೀಲ್ಸ್ ಮಾಡಲು ಹೋಗಿ ಯುವತಿಯೋರ್ವಳು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಮೃತ ಯುವತಿಯನ್ನು ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ಎಂಎ ಪದವೀದರೆ ಅಮೃತ (22) ಎಂದು ಗುರುತಿಸಲಾಗಿದೆ. ಜಂಬಿಗೆ ಮರದಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅಮೃತ ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಇನ್ನೊಬ್ಬ ಯುವತಿ ಜೊತೆ ಕೆರೆ ಬಳಿ ಬಂದಿದ್ದಳು.
ಜೊತೆಯಲ್ಲಿ ಬಂದಿದ್ದ ಯುವತಿ ಕೈಗೆ ಮೊಬೈಲ್ ಕೊಟ್ಟು ವಿಡಿಯೋ ಮಾಡುವಂತೆ ಹೇಳಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು. ಈ ವೇಳೆ ಕಾಲು ಜಾರಿ ಅಮೃತಾ ಕೆರೆಗೆ ಬಿದ್ದು ಮೃತಪಟ್ಟಿದ್ದಳು.