ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ, ತೊಗರಿ-ಹತ್ತಿ ಬೆಳೆಗೆ ರೋಗದ ಭೀತಿ; ರೋಗ ಬಾಧೆ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿ ಹೇಳಿದ್ದೇನು?
Agriculture: ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಆದರೆ ಈ ಮಳೆಯು ಈ ಭಾಗದ ರೈತರಿಗೆ ತಲೆನೋವು ತಂದಿಟ್ಟಿದೆ. ತೊಗರಿ, ಹತ್ತಿ ಮತ್ತು ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳಿಗೆ ರೋಗ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಕೃಷಿ ವಿಜ್ಞಾನಿ ಪರಿಹಾರ ಕೊಟ್ಟಿದ್ದಾರೆ ನೋಡಿ.
ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮತ್ತೆ ಹೆಚ್ಚಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜೋರು ಮಳೆ ಸುರಿಯುತ್ತಿದೆ. ಆದರೆ, ಈ ಮಳೆ ಉತ್ತರ ಕರ್ನಾಟಕದವರ ಅನ್ನದಾತರಿಗೆ ತಲೆ ನೋವು ತಂದಿಟ್ಟಿದೆ. ಅತಿಯಾದ ಮಳೆಯ ಕಾರಣ ಕೈಗೆ ಬರುವ ಬೆಳೆ ಕೈ ತಪ್ಪುವ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಎದೆಯೆತ್ತರಕ್ಕೆ ಬೆಳೆದ ಗಿಡಗಳಿಗೆ ರೋಗಗಳು ಕಾಣಿಸಿಕೊಳ್ಳುವ ಭೀತಿಯೂ ಶುರುವಾಗಿದೆ.
ಬಾಗಲಕೋಟೆ, ಬಿಜಾಪುರ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಯನ್ನು ಅಪಾರ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಬೆಳೆ ನೀರು ಪಾಲು ಅಥವಾ ರೋಗಳಿಗೆ ಬಲಿಯಾಗಲಿವೆ ಎಂಬುದು ರೈತರ ಭಯದ ಮಾತು. ಹೀಗಾಗೋದೇಕೆ? ಇಲ್ಲಿದೆ ವಿವರ.
ಈ ಭಾಗದಲ್ಲಿ ಎರೆಮಣ್ಣು ಅಥವಾ ಕಪ್ಪು ಮಣ್ಣಿನ ಭೂಮಿ ಹೆಚ್ಚು. ಜಾಸ್ತಿ ಮಳೆಯಾದಷ್ಟೂ ಇಲ್ಲಿನ ಈ ಮಣ್ಣಿಗೆ ನೀರನ್ನು ಹೆಚ್ಚಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುತ್ತದೆ. ಹೀಗಾಗಿ ತೇವಾಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಈ ತೇವಾಂಶ 10 ರಿಂದ 15 ದಿನಗಳ ಕಾಲ ಇರುತ್ತದೆ. ಇದರಿಂದ ಕಾಂಡ ಕೊಳೆರೋಗ, ಬೇರು ಕೊಳೆ ರೋಗ, ಮೊಗ್ಗು, ಹೂವು, ಕಾಯಿ ಉದುರುವುದು, ಗಿಡಗಳು ವಾಲುತ್ತವೆ.
ಕಾಂಡ ಕೊಳೆ ರೋಗವು ಮೆಣಸಿನಕಾಯಿ ಅಂದರೆ ಬ್ಯಾಡಗಿ, ಬ್ಯಾಡಗಿ ಡಬ್ಬು ಮೆಣಸಿನಕಾಯಿ, ಕಡ್ಡಿ ಮೆಣಸಿನಕಾಯಿ, ಗುಂಟೂರು ಖಾರದ ಮೆಣಸಿನಕಾಯಿ, ತೊಗರಿ ಬೆಳೆಗಳನ್ನು ಹೆಚ್ಚು ಬಾಧಿಸುತ್ತದೆ. ಉಳಿದ ಬೆಳೆಗಳಲ್ಲೂ ಬೇರು ಕೊಳೆ ರೋಗ ಜೊತೆಗೆ ಮೊಗ್ಗು ಹೂವು, ಕಾಯಿ ಉದುರುವಿಕೆ, ಗಾಳಿ ಜೋರಾಗಿ ಬೀಸಿದರೆ ಗಿಡ ವಾಲುವುದು ಕಂಡು ಬರುತ್ತಿದೆ. ಹೀಗಾಗಿ ಮಳೆಯಿಂದ ಹಲವು ಸಮಸ್ಯೆ ಎದುರಾಗುತ್ತಿವೆ.
ಮಾನ್ಸೂನ್ ಬೇಗ ಆರಂಭವಾದ ಕಾರಣ, ಬಿತ್ತನೆಯೂ ಬೇಗ ಮಾಡಲಾಗಿತ್ತು. ಬೆಳೆಯೂ ಉತ್ತಮವಾಗಿತ್ತು. ಇದರೊಂದಿಗೆ ಉತ್ತಮ ಫಸಲಿನ ನಿರೀಕ್ಷೆಯಲ್ಲೂ ಇದ್ದರು. ಆದರೆ ಫಸಲು ಕೊಡುವ ಸಮಯಕ್ಕೆ ಸರಿಯಾಗಿ ಮಳೆಯ ಆರ್ಭಟ ಹೆಚ್ಚಾಗಿದ್ದು ಅದೆಲ್ಲಾ ಕೈತಪ್ಪಿ ಹೋಗುವ ಆತಂಕವಾಗಿದೆ. ಇದೀಗ ಹಲವು ರೋಗಗಳು ಕಾಣಿಸಿಕೊಳ್ಳದಂತೆ ಇರಲು ಕೃಷಿ ವಿಜ್ಞಾನಿ ಸಲಹೆ ನೀಡಿದ್ದಾರೆ. ಅವು ಈ ಮುಂದಿನಂತಿವೆ.
ರೋಗ ತಡೆಗಟ್ಟಲು ಪರಿಹಾರ
- ಅತಿ ಹೆಚ್ಚು ಮಳೆಯಿಂದ ಹತ್ತಿ ಮತ್ತು ತೊಗರಿಯಲ್ಲಿ ಬೇರು ಕೊಳೆ ರೋಗದ ಹಾವಳಿ ಹೆಚ್ಚಾಗಿದ್ದು, ಇದನ್ನು ಹತೋಟಿ ತರಲು 2 ಗ್ರಾಂ ಕಾರ್ಬನ್ಡೈಜಿಮ್ ಶೇ 50ರಷ್ಟು ಡಬ್ಲ್ಯುಯನ್ನ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡವನ್ನು ನೆನೆಸಬೇಕು (ಡ್ರೆಂಚಿಂಗ್).
- ಅತಿಯಾದ ಮಳೆಯಿಂದ ತೊಗರಿಯಲ್ಲಿ ಕಾಂಡ ಮಚ್ಚೆ ರೋಗ ಕಂಡು ಬರುತ್ತಿದೆ. ಇದರ ಹತ್ತೋಟಿಗಾಗಿ 2 ಗ್ರಾಂ ಮೆಟಾಲಾಕ್ಸಿಲ್ ಎಂಝಡ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಂಪೂರ್ಣ ಕಾಂಡ ಭಾಗದಿಂದ ಬೇರಿಗೆ ತೊಯ್ಯುವಂತೆ ಸಿಂಪಡಿಸಬೇಕು.
- ಹೊಲದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಗಳ ಮುಖಾಂತರ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗುವಂತೆ ಮಾಡಬೇಕು. ರಾಸಾಯನಿಕ ಸಿಂಪರಣೆಯನ್ನು ಮತ್ತು ನೀರು ಹಾಯಿಸುವುದನ್ನು ಮುಂದೂಡಬೇಕು.
- ಕಟಾವು ಮಾಡಿದ ಹೆಸರು ಹಾಗೂ ಇನ್ನಿತರ ಬೆಳೆಗಳ ರಾಶಿಯನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಬೇಕು.
ರೈತರಿಗೆ ಅರಿವು ಕಾರ್ಯಕ್ರಮ
ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿತ್ತಿವೆ. ರೋಗಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದಾರೆ. ಅತಿಯಾದ ಮಳೆಯಿಂದ ಬೆಳೆಗಳ ಮೇಲಾದ ಪರಿಣಾಮ ಮತ್ತು ಮಾರ್ಗೋಪಾಯಗಳ ಕುರಿತು ತಿಳಿಸಿದ್ದಾರೆ.
ಮಾಹಿತಿ: ಶಾಂತಪ್ಪ ದುತ್ತರಗಾಂವಿ, ಕೃಷಿ ವಿಜ್ಞಾನಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ.