ರಾಜ್ಯದಲ್ಲಿ ಮತ್ತೆ ಮಳೆರಾಯನ ಅಬ್ಬರ, ಕಳೆದ ತಿಂಗಳು ವಾಡಿಕೆಗಿಂತ ಕಡಿಮೆ ಮಳೆ ದಾಖಲು; ದಸರಾ ಉದ್ಘಾಟನೆಗೂ ಅಡ್ಡಿಯಾಗುತ್ತಾನಾ ವರುಣ?
Heavy rain in Karnataka: ಅಕ್ಟೋಬರ್ 1ರಂದು ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕು ಪಡೆದಿದೆ. ಇತ್ತೀಚೆಗೆ ಮಳೆಯೇ ಕಾಣದ ಕೆಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಮುಂದಿನ 4-5 ದಿನಗಳಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಅಲ್ಲದೆ, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಭಾರೀ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ ರಾಜ್ಯದ ಜನತೆಗೂ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದೆ.
ಇಂದು ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ಮಂಡ್ಯ, ಮೈಸೂರು, ಹಾಸನ, ತುಮಕೂರಿನಲ್ಲಿ ಅತ್ಯಧಿಕ ಮಳೆಯಾಗಲಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಗುಡುಗು ಸಹಿತ ಮಳೆ ಕಾಣಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ವರುಣನ ಅಬ್ಬರ ಮತ್ತಷ್ಟು ಜೋರು ಇರಲಿದೆ. ಅಲ್ಲದೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಗ್ಗಿದ್ದ ಮಳೆಯ ಪ್ರಮಾಣ ಹೆಚ್ಚಾಗಿದೆ. ಬೆಳೆಗಳು ಕೈ ತಪ್ಪಿ ಹೊಗುತ್ತಿವೆ ಎಂಬ ಆತಂಕಕ್ಕೆ ಸಿಲುಕಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಈ ಹಿಂದಿಗಿಂತಲೂ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31° C ಮತ್ತು 21° C ಸೆಲ್ಸಿಯಸ್ ಇರಬಹುದು. ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಮಳೆಯ ಭೀತಿ ಇದೆ. ಶೇ 78ರಂದು ಮಳೆ ಸುರಿಯವ ಸಂಭವನೀಯತೆ ಇದೆ. ಶೇ 47ರಷ್ಟು ಚಂಡಮಾರುತದ ಸಾಧ್ಯತೆ ಇದೆ. ಆದರೆ ರಾತ್ರಿ ವೇಳೆ ಶೇ 87ರಷ್ಟು ಮಳೆಯ ಪ್ರಮಾಣ ಹೆಚ್ಚಿರಲಿದೆ. ಅಲ್ಲದೆ, ಗಾಳಿಯ ವೇಗ ಗಂಟೆಗೆ 22 ಕಿ.ಮೀ ಇರಲಿದೆ.
ಸೆಪ್ಟೆಂಬರ್ 30ರಂದು ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಸುರಿದಿದೆ?
ತುಮಕೂರು ಜಿಲ್ಲೆಯ ವೈಎನ್ ಹೊಸಕೋಟೆಯಲ್ಲಿ ಸೆಪ್ಟೆಂಬರ್ 30 ರಂದು ಅತ್ಯಧಿಕ ಮಳೆಯ ಪ್ರಮಾಣ ದಾಖಲಾಗಿದೆ. 15 ಸೆಂ.ಮೀ ಮಳೆ ಸುರಿದಿದೆ. ಇನ್ನು ಗದಗ ಜಿಲ್ಲೆಯ ನರಗುಂದದಲ್ಲಿ 9 ಸೆಂ.ಮೀ ಮಳೆಯಾಗಿದೆ. ದಾವಣಗೆರೆ, ಧಾರವಾಡದಲ್ಲಿ 5 ಸೆಂ.ಮೀ ಮಳೆ ಸುರಿದಿದೆ. ಕಳಸ, ಮಣಿ, ಮಧುಗಿರಿ, ಹಿರಿಯೂರು, ಹರಪನಹಳ್ಳಿ, ಚಿತ್ರದುರ್ಗ, ಪಾವಗಡ, ಬರಗೂರು, ಗೇರುಸೊಪ್ಪ, ಮಿಡಿಗೇಶಿ, ಹಾರಂಗಿ, ಕುಡಿತಿನಿ, ಶ್ರವಣಬೆಳಗೊಳ, ಕುಂದಗೋಳ, ಹುಬ್ಬಳ್ಳಿ, ಸುಳ್ಯ, ಬೆಳ್ತಂಗಡಿ, ಕೂಡಲಸಂಗಮ, ಕುಷ್ಟಗಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಯಾವ ತಿಂಗಳಲ್ಲಿ ಎಷ್ಟು ಮಳೆ ಸುರಿದಿದೆ?
1. 2024ರ ಮುಂಗಾರು ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ವಾಡಿಕೆ 199 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 203 ಮಿ.ಮೀ ಮಳೆ ಸುರಿದಿದೆ.
2. 2024ರ ಮುಂಗಾರು ಜುಲೈನಲ್ಲಿ ಶೇ 51ರಷ್ಟು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. 271 ಮಿ.ಮೀ ಮಳೆಯಾಗಬೇಕಿತ್ತು. ಆದರೆ 409 ಮಿ.ಮೀ ಮಳೆಯಾಗಿದೆ.
3. ಆಗಸ್ಟ್ನಲ್ಲಿ 220 ಮಿ.ಮೀ ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ 7ರಷ್ಟು ಹೆಚ್ಚಳ ಅಂದರೆ 236 ಮಿ.ಮೀ ಮಳೆಯಾಗಿದೆ. ಮಲೆನಾಡಿನಲ್ಲಿ ಈ ತಿಂಗಳು ತುಂಬಾ ಕಡಿಮೆ ಮಳೆಯಾಗಿದೆ.
4. ಆದರೆ ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಈ ತಿಂಗಳು ಪೂರ್ತಿ 161 ಮಿ.ಮೀ ವರುಣ ಅಬ್ಬರಿಸಬೇಕಿತ್ತು. ಆದರೆ ಶೇ 19ರಷ್ಟು ಮಳೆಯ ಕೊರತೆಯಾಗಿದೆ. ಅಂದರೆ ಸೆಪ್ಟೆಂಬರ್ನಲ್ಲಿ ಬಂದಿದ್ದೇ 130 ಮಿ.ಮೀ ಮಳೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ.
5. 2024ರ ಜೂನ್ನಿಂದ ಸೆಪ್ಟೆಂಬರ್ ತನಕ ಶೇ 15 ರಷ್ಟು ಮಳೆ ವಾಡಿಕೆಗಿಂತ ಹೆಚ್ಚು ಸುರಿದಿದೆ. ಈ ಅವಧಿಯಲ್ಲಿ 852 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 977 ಮಿ.ಮೀ ಮಳೆಯಾಗಿದೆ.