ಬೆಂಗಳೂರಲ್ಲಿ ಭಾನುವಾರವೂ ಮುಂದುವರಿದ ಭಾರಿ ಮಳೆ: ತಗ್ಗು ಪ್ರದೇಶಗಳು ಜಲಾವೃತ
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾನುವಾರ ಸಂಜೆಯೂ ಮತ್ತೆ ಮಳೆಯಾಗಿದೆ. ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಬಹಳಷ್ಟು ಜನರು ತೊಂದರೆ ಅನುಭವಿಸಿದ್ದರು. ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಸುಮಾರು 40 ಮಿ.ಮೀ ಮಳೆಯಾಗಿದೆ. ರಾಜ್ಯ ರಾಜಧಾನಿಯ ಕೆಲವು ಭಾಗಗಳಲ್ಲಿ ಮರದ ಕೊಂಬೆಗಳು ನೆಲಕ್ಕುರುಳಿವೆ. ನಗರದ ಸಾಯಿ ಲೇಔಟ್‌ನಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಸಂಜೆಯ ಮಳೆಯಿಂದಾಗಿ ಮತ್ತೆ ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಗಿದೆ.
ಪ್ರವಾಹಕ್ಕೆ ಸಿಲುಕಿದ ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿವೆ. ವಾಹನಗಳು ಭಾಗಶಃ ಮುಳುಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಕೂಡ ಹಾನಿಯಾಗಿದೆ. ಕೆಳಮಹಡಿ ಮತ್ತು ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ, ತೊಂದರೆಗೊಳಗಾದ ಕುಟುಂಬಗಳನ್ನು ಹತ್ತಿರದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಮುಚ್ಚಿದ ಚರಂಡಿಗಳು ಇದಕ್ಕೆ ಕಾರಣ ಮತ್ತು ಅಧಿಕಾರಿಗಳಿಗೆ ಪದೇ ಪದೇ ದೂರು ನೀಡುವುದನ್ನು ಮುಂದುವರಿಸಿದರೂ, ಚರಂಡಿ ನಿರ್ವಹಣೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ, ವಿಶೇಷವಾಗಿ ಮಲೆನಾಡು ಪ್ರದೇಶ ಮತ್ತು ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ, ಸಣ್ಣ ಸಂಚಾರ ದಟ್ಟಣೆ ಮತ್ತು ದುರ್ಬಲ ಮರಗಳು ನೆಲಕ್ಕುರುಳುವ ಸಾಧ್ಯತೆಯಿದೆ. ಹೆಚ್ಚಿನ ಮಳೆಯಾಗುವ ಸೂಚನೆ ನೀಡಿರುವ ಜಿಲ್ಲೆಗಳ ಜನರು ಸುರಕ್ಷಿತವಾಗಿರುವಂತೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.