ಹೆಬ್ಬಾಳ ಜಂಕ್ಷನ್‌ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿ; ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಹನ ಸಂಚಾರದ ಹಾದಿ ಸುಗಮ
ಕನ್ನಡ ಸುದ್ದಿ  /  ಕರ್ನಾಟಕ  /  ಹೆಬ್ಬಾಳ ಜಂಕ್ಷನ್‌ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿ; ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಹನ ಸಂಚಾರದ ಹಾದಿ ಸುಗಮ

ಹೆಬ್ಬಾಳ ಜಂಕ್ಷನ್‌ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿ; ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಹನ ಸಂಚಾರದ ಹಾದಿ ಸುಗಮ

ಹೆಬ್ಬಾಳ ಜಂಕ್ಷನ್‌ನಲ್ಲಿ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿ ಸೂಚಿಸಿರುವ ಕಾರಣ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರದೊಳಗೆ ವಾಹನ ಸಂಚಾರಕ್ಕೆ ಹಾದಿ ಸುಗಮವಾಗಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಹೆಬ್ಬಾಳ ಜಂಕ್ಷನ್‌ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿಸಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಹನ ಸಂಚಾರದ ಹಾದಿ ಸುಗಮವಾಗಲಿದೆ. (ಸಾಂಕೇತಿಕ ಚಿತ್ರ)
ಹೆಬ್ಬಾಳ ಜಂಕ್ಷನ್‌ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿಸಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಹನ ಸಂಚಾರದ ಹಾದಿ ಸುಗಮವಾಗಲಿದೆ. (ಸಾಂಕೇತಿಕ ಚಿತ್ರ) (BTP)

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ ನಲ್ಲಿ ರೈಲ್ವೇ ಹಳಿಗಳ ಮೇಲೆ ಗರ್ಡರ್‌ ಗಳನ್ನು ಅಳವಡಿಸಲು ನೈಋತ್ಯ ರೈಲ್ವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸಿರು ನಿಶಾನೆ ತೋರಿಸಿದೆ. ಯಶವಂತಪುರ- ಒಮಲೂರು ವಿಭಾಗವನ್ನು ಸಂಪರ್ಕಿಸುವ ಹೆಬ್ಬಾಳ ರೈಲ್ವೇ ಮಾರ್ಗದಲ್ಲಿ 33.5 ಮೀಟರ್‌ ಗರ್ಡರ್‌ ಅಳವಡಿಕೆಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಬಿಡಿಎ ತಿಳಿಸಿದೆ.ಇದರಿಂದ ರೈಲ್ವೇ ಹಳಿಗಳ ಮೇಲೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಹಾದಿ ಸುಗಮವಾಗಲಿದೆ.

ಹೆಬ್ಬಾಳ ಜಂಕ್ಷನ್‌ ಗರ್ಡರ್‌ ಅಳವಡಿಸಲು ನೈಋತ್ಯ ರೈಲ್ವೇ ಸಮ್ಮತಿ

ನೈಋತ್ಯ ರೈಲ್ವೇ ಇಲಾಖೆಯ ಅನುಮತಿಗಾಗಿ ಬಿಡಿಎ ದೀರ್ಘ ಅವಧಿಯಿಂದ ಕಾಯುತ್ತಿತ್ತು. ಗರ್ಡರ್‌ ಗಳನ್ನು ಅಳವಡಿಸಲು ಮೇ 17 ರಿಂದ 20 ರವರೆಗೆ ನೈಋತ್ಯ ರೈಲ್ವೇಯು ಈ ಮಾರ್ಗದಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ. ಮಧ್ಯರಾತ್ರಿ 3 ಗಂಟೆಯವರೆಗೆ ಕಾಮಗಾರಿ ನಡೆಯಲಿದೆ. ಈ ನಾಲ್ಕು ದಿನಗಳಲ್ಲಿ ಈ ಅವಧಿಯಲ್ಲಿ ಹೆಬ್ಬಾಳ ಮೇಲ್ಸೇತುವೆಯನ್ನು ಭಾಗಶಃ ಮುಚ್ಚುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ರೂಪಿಸಲಿದೆ.

ಸಂಚಾರಿ ಪೊಲೀಸರ ಮೂಲಕ ಬಿಡಿಎ ವಿಮಾನ ನಿಲ್ದಾಣ ಕಡೆಯಿಂದ ಬಿ ಇಎಲ್‌ ವೃತ್ತ ಅಥವಾ ನಾಗಾವಾರ ಕಡೆಗೆ ಚಲಿಸುವ ವಾಹನಗಳ ಮಾರ್ಗವನ್ನು ನಿಯಂತ್ರಿಸಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಹನ ಸಂಚಾರದ ಹಾದಿ ಸುಗಮ

ಹೆಬ್ಬಾಳ ಜಂಕ್ಷನ್‌ ನಲ್ಲಿ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ಮೇಖ್ರಿ ವೃತ್ತದ ಕಡೆಗೆ ಕನಿಷ್ಠ ಒಂದು ಮಾರ್ಗವನ್ನಾದರೂ ಸಂಚಾರಕ್ಕೆ ಮುಕ್ತಗೊಳಿಸಲು ಸಂಚಾರಿ ಪೊಲೀಸರ ಅನುಮತಿಗಾಗಿ ಕಾಯಲಾಗುತ್ತಿದೆ. ಗರ್ಡರ್‌ ಅಳವಡಿಲಸು ಈಗ ಅನುಮತಿ ಸಿಕ್ಕಿದೆ. ಗರ್ಡರ್‌ ಗಳನ್ನು ಈಗಾಗಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ಇರಿಸಲಾಗಿದೆ.

ಆದರೆ ಈ ಜಂಕ್ಷನ್‌ ನಲ್ಲಿ ಹಾದು ಹೋಗುವ ರೈಲ್ವೇ ಮಾರ್ಗದಲ್ಲಿ ನಿರಂತರವಾಗಿ ಪ್ಯಾಸೆಂಜರ್‌ ಮತ್ತು ಗೂಡ್ಸ್‌ ರೈಲುಗಳ ಸಂಚಾರವಿರುತ್ತದೆ. ಅನೇಕ ಸುತ್ತುಗಳ ಮಾತುಕತೆಯ ನಂತರ ನೈಋತ್ಯ ರೈಲ್ವೇ ಒಪ್ಪಿಕೊಂಡಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟು ಏಳು ಗರ್ಡರ್‌ ಗಳನ್ನು ಅಳವಡಿಸಬೇಕಾಗಿರುತ್ತದೆ. ಮೊದಲ ಮೂರು ದಿನಗಳಲ್ಲಿ ಎರಡು ಗರ್ಡರ್‌ ಗಳನ್ನು ಅಳವಡಿಸಿದರೆ ಮೂರನೇ ದಿನ ರೈಲ್ವೇ ಟ್ರ್ಯಾಕ್‌ ಮೇಲೆ ಒಂದು ಗರ್ಡರ್‌ ಅನ್ನು ಅಳವಡಿಸಲಾಗುತ್ತದೆ. ಈ ಕಾರ್ಯಾಚರಣೆಗೆ ಎಂಟು ಕ್ರೇನ್‌ ಗಳನ್ನು ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಕಾಮಗಾರಿ ಸ್ಥಳದಲ್ಲಿ ಪೂರ್ವಭಾವಿ ಕೆಲಸಗಳು ನಡೆಯುತ್ತಿವೆ. ರೈಲ್ವೇ ಹಳಿಗಳ ಮೇಲೆ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಕಳೆದ ವರ್ಷವೇ ಬಿಡಿಎ ನೈಋತ್ಯ ರೈಲ್ವೇಯನ್ನು ಸಂಪರ್ಕಿಸಿತ್ತು. ನೈಋತ್ಯ ರೈಲ್ವೇಯು ಯಾವುದೇ ಹಾನಿ ಮಾಡದೆ ರ‍್ಯಾಂಪ್ ಅಳವಡಿಸಲು ಒಪ್ಪಿಗೆ ನೀಡಿತ್ತು ಎಂದು ಬಿಡಿಎ ಮೂಲಗಳು ತಿಳಿಸಿವೆ.

ಭವಿಷ್ಯದಲ್ಲಿ ಹೆಬ್ಬಾಳ ಜಂಕ್ಷನ್‌ ನಲ್ಲಿ ಬೆಂಗಳೂರು ಉಪನಗರ ರೈಲ್ವೇ ಯೋಜನೆಯ ಮಾರ್ಗವೂ ಸೇರಿ 6 ರೈಲ್ವೇ ಮಾರ್ಗಗಳು ನಿರ್ಮಾಣವಾಗಲಿವೆ. 33.5 ಮೀಟರ್‌ ಗರ್ಡರ್‌ ಜತೆಗೆ ಭವಿಷ್ಯದ ರೈಲ್ವೇ ಮಾರ್ಗದ ವಿಸ್ತರಣೆಗೆ ಸಹಾಯವಾಗುವಂತೆ ಬಿಡಿಎ 18 ಅಡಿ ಉದ್ದದ ಗರ್ಡರ್‌ ಅನ್ನೂ ಅಳವಡಿಸಲಿದೆ. ಹೊಸ ರ‍್ಯಾಂಪ್ ಕೆ.ಆರ್.ಪುರ ಲೂಪ್ ಜತೆ ವಿಲೀನಗೊಳ್ಳಲಿದೆ. ನಂತರ ಸಮೀಪದ ಅರಣ್ಯ ಪ್ರದೇಶದಲ್ಲಿ ಲೂಪ್‌ ಜತೆ ಸಂಪರ್ಕ ಸಾಧಿಸಲಿದೆ. ಈ ಮಾರ್ಗದಲ್ಲಿ ಎಸ್ಟೀಮ್‌ ಮಾಲ್‌ ಮತ್ತು ತುಮಕೂರು ರಸ್ತೆಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.