ನಿಮ್ಮ ಬಾಳೆ ತೋಟಗಳಲ್ಲಿ ಮಂಗಗಳ ಹಾವಳಿಯೇ, ಬಾಳೆಗೊನೆಯನ್ನು ರಕ್ಷಿಸಲು ಈ ತಂತ್ರ ಮಾಡಬಹುದು: ರಾಜೀವ್‌ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ನಿಮ್ಮ ಬಾಳೆ ತೋಟಗಳಲ್ಲಿ ಮಂಗಗಳ ಹಾವಳಿಯೇ, ಬಾಳೆಗೊನೆಯನ್ನು ರಕ್ಷಿಸಲು ಈ ತಂತ್ರ ಮಾಡಬಹುದು: ರಾಜೀವ್‌ ಹೆಗಡೆ ಬರಹ

ನಿಮ್ಮ ಬಾಳೆ ತೋಟಗಳಲ್ಲಿ ಮಂಗಗಳ ಹಾವಳಿಯೇ, ಬಾಳೆಗೊನೆಯನ್ನು ರಕ್ಷಿಸಲು ಈ ತಂತ್ರ ಮಾಡಬಹುದು: ರಾಜೀವ್‌ ಹೆಗಡೆ ಬರಹ

ಮಂಗಗಳ ಹಾವಳಿಯಿಂದ ತೋಟಗಾರಿಕೆ ಬೆಳೆಯನ್ನು ಪಡೆಯಲು ಕಷ್ಟವೇ. ಇದಕ್ಕಾಗಿ ದೇಸಿ ಹಾಗೂ ಸ್ಥಳೀಯ ಕೆಲವು ತಂತ್ರಗಳನ್ನು ಬಳಸುವುದು ಅನಿವಾರ್ಯವೂ ಹೌದು. ಅಂತಹ ಮಾದರಿಗಳನ್ನು ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವ ಲೇಖಕ ರಾಜೀವ್‌ ಹೆಗಡೆ ತಿಳಿಸಿದ್ದಾರೆ.

ಬಾಳೆಗೊನೆಯನ್ನು ಮಂಗಗಳಿಂದ ರಕ್ಷಿಸಿಕೊಳ್ಳಲು ಈ ತಂತ್ರ ಬಳಸುವುದು ಒಳ್ಳೆಯದು.,
ಬಾಳೆಗೊನೆಯನ್ನು ಮಂಗಗಳಿಂದ ರಕ್ಷಿಸಿಕೊಳ್ಳಲು ಈ ತಂತ್ರ ಬಳಸುವುದು ಒಳ್ಳೆಯದು.,

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಮಗೆ ರಾಜಕಾರಣಿಗಳ ಕಾಟ ಅಷ್ಟೊಂದಿಲ್ಲ. ಆದರೆ ಮಂಗಗಳ ಉಪಟಳವನ್ನು ಸಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಂಗಗಳ ನಿಯಂತ್ರಣಕ್ಕೆ ಪಾರ್ಕ್‌ ಮಾಡುತ್ತೇವೆ ಎಂದು ರಾಜಕಾರಣಿಗಳು ಅಲ್ಲಿಯ ರೈತರಿಗೆ ಮಂಗನ ಟೋಪಿ ಹಾಕಿ ಮಾಯವಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಮಂಗಗಳು ಮನುಷ್ಯರ ಮೇಲೆ ದಾಳಿ ನಡೆಸಿ ರಾಜಕಾರಣಿಗಳ ರೀತಿಯಲ್ಲೇ ಲೂಟಿ ಮಾಡುವುದರಲ್ಲಿ ಸಂಶಯವಿಲ್ಲ.

ಒಂದು ದಶಕಗಳ ಹಿಂದೆ ನಡೆದಿದ್ದ ನನ್ನ ಮದುವೆಗೆ ಸುಮಾರು ಒಂದೂವರೆ ಸಾವಿರ ಜನರಾಗಿದ್ದರು. ನಾವು ಪೇಟೆಯಿಂದ ತರಕಾರಿ ತರದೇ, ನಮ್ಮ ತೋಟ, ಕಾಡಿನಲ್ಲಿ ಸಿಗುವ ತರಕಾರಿ, ಸೊಪ್ಪು, ಕಾಯಿಯನ್ನು ತಂದು ಅಡುಗೆ ಮಾಡಿಸಿದ್ದೆವು. ಹಲಸು, ಮಾವು, ಬಾಳೆಯ ಜತೆಗೆ ಇತರ ಸೊಪ್ಪುಗಳು ನಮ್ಮ ಅಡುಗೆ ಮನೆಯಲ್ಲಿ ತುಂಬಿದ್ದವು. ಆದರೆ ಒಂದು ದಶಕ ಕಳೆಯುವುದರೊಳಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಲೆನಾಡಿನ ಬಹುತೇಕರ ಮನೆಯಲ್ಲಿ ಸಣ್ಣ ಹಬ್ಬ-ಹರಿದಿನದ ಪ್ರಸಾದ, ನೈವೇದ್ಯಕ್ಕೂ ಪೇಟೆಯಿಂದ ಬಾಳೆ ಹಣ್ಣನ್ನು ತರುವಂತಾಗಿದೆ. ಮನೆ ತೋಟದಲ್ಲಿನ ಸೂಜು ಮೆಣಸನ್ನು ಎಳೆಯ ಎಲೆಯ ಹಂತದಲ್ಲೇ ಮಂಗಳು ತಿಂದು ಹಾಳು ಮಾಡುತ್ತಿವೆ. ಲಿಂಬು, ಬಾಳೆ, ಮಾವು ಸೇರಿ ಇತರ ಯಾವುದೇ ತರಕಾರಿಯ ಮಿಡಿ ಬಿಟ್ಟಾಗಲೇ ಅದನ್ನು ಹಾಳು ಮಾಡುತ್ತಿವೆ. ದೈನಂದಿನ ಊಟಕ್ಕೂ ಪೇಟೆಯಿಂದ ತರಕಾರಿ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಪ್ರತಿ ವಾರವೂ ಪೇಟೆಗೆ ಜೀಪಿನಲ್ಲಿ ಬಾಳೆ ಹಣ್ಣು ತೆಗೆದುಕೊಂಡು ಹೋಗುತ್ತಿದ್ದ ದಿನವನ್ನು ನಮ್ಮ ಮನೆಯಲ್ಲಿ ನಾನು ನೋಡಿದ್ದೆ. ಆದರೆ ಕೆಲ ವರ್ಷಗಳ ಹಿಂದೆ ನಮ್ಮ ಮನೆಯಲ್ಲಿನ ಪೂಜೆಗೂ ದುಡ್ಡು ಕೊಟ್ಟು ತರುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಂತದಲ್ಲಿ ನನ್ನ ತಂದೆ ದತ್ತಾತ್ರೇಯ ಹೆಗಡೆ ಅವರು ಒಂದು ಸಣ್ಣ ಉಪಾಯ ಮಾಡಿದ್ದಾರೆ. ಇದು ನಿಮ್ಮ ಮನೆಯಲ್ಲೂ ನೆರವಿಗೆ ಬರಬಹುದು ಎನ್ನುವ ಕಾರಣಕ್ಕೆ ಈ ಬರಹ ಹಂಚಿಕೊಳ್ಳುತ್ತಿದ್ದೇನೆ.

ಬಾಳೆಗೆ ಮುಳ್ಳಿನ ತಂತಿ!

ಆರಂಭದಲ್ಲಿ ಬಾಳೆ ಕೊನೆಗೆ ಎರಡು-ಮೂರು ಚೀಲಗಳನ್ನು ಸುತ್ತಿಟ್ಟು ಮಂಗನಿಂದ ರಕ್ಷಿಸುವ ಪ್ರಯತ್ನ ಮಾಡಿದರು. ಕೆಲವೇ ದಿನಗಳಲ್ಲಿ ಅದೊಂದು ವಿಫಲ ಯತ್ನ ಎನ್ನುವುದು ಸಾಬೀತಾಯಿತು. ಆಗ ನನ್ನ ತಂದೆಯು ಬೇಲಿಗೆ ಹಾಕುವ ಮುಳ್ಳಿನ ತಂತಿಯ ನೆರವನ್ನು ಪಡೆದರು. ಬಾಳೆ ಕೊನೆಗೆ ಚೀಲವನ್ನು ಹಾಕುವುದರ ಜತೆಗೆ, ಮುಳ್ಳಿನ ತಂತಿಯನ್ನು ಮೂರು ರೀತಿಯಲ್ಲಿ ಕಟ್ಟಿದರು. ಅದರಿಂದ ಮಂಗಗಳಿಗೆ ಬಾಳೆ ಕೊನೆಯ ಮೇಲೆ ಕೂರುವುದು ಹಾಗೂ ಅದಕ್ಕೆ ಕೈ ಅಥವಾ ಬಾಯಿ ಹಾಕುವುದು ಕಷ್ಟವಾಗುತ್ತದೆ. ಆರಂಭಿಕ ದಿನಗಳಲ್ಲಿ ಒಂದು ಅಥವಾ ಎರಡು ಸಾಲಿನ ತಂತಿಯನ್ನು ಕಟ್ಟುತ್ತಿದ್ದರು. ಆದರೆ ದಿನ ಕಳೆದಂತೆ ಮಂಗಗಳು ಕೂಡ ನಮ್ಮ ರೀತಿಯಲ್ಲೇ ಅಧ್ಯಯನ, ಆಲೋಚನೆ ಮಾಡುತ್ತಿರುವುದರಿಂದ ಈಗ ನಾಲ್ಕು ಸುತ್ತು ತಂತಿಯನ್ನು ಕಟ್ಟುತ್ತಿದ್ದಾರೆ. ಅದರ ಜೊತೆಗೆ ಮೇಲೆ ಹಾಗೂ ಕೆಳಗೆ ಕೂಡ ಒಂದು ಸುತ್ತು ತಂತಿಯನ್ನು ಕಟ್ಟುತ್ತಿದ್ದಾರೆ. ಈ ರೀತಿ ತಂತಿಯನ್ನು ಹಾಕಿದ ಯಾವುದೇ ಬಾಳೆ ಕೊನೆಯನ್ನು ಇಲ್ಲಿಯವರೆಗೆ ಮಂಗ ತಿಂದಿಲ್ಲ. ಒಂದು ಹಂತಕ್ಕೆ ಈ ಪ್ರಯೋಗವು ನಮ್ಮ ಮನೆಯಲ್ಲಿ ಯಶಸ್ವಿಯಾಗಿದೆ. ಆದರೆ ಇದೇ ಪ್ರಯೋಗವನ್ನು ಇತರ ತರಕಾರಿ ಹಾಗೂ ಗಿಡಗಳಿಗೆ ಮಾಡಲು ಆಗುವುದಿಲ್ಲ.

ಅಂದ್ಹಾಗೆ ಒಮ್ಮೆ ಈ ತಂತಿಯ ಮಿನಿ ಬೇಲಿಯನ್ನು ನೀವು ಮಾಡಿದರೆ ಒಂದಿಷ್ಟು ವರ್ಷಗಳ ಕಾಲ ಮರು ಬಳಕೆ ಮಾಡಬಹುದು. ಆದರೆ ಕೆಲಸ ಮುಗಿದ ಬಳಿಕ ಸರಿಯಾಗಿ ಇರಿಸಬೇಕಷ್ಟೆ. ಪದೇಪದೆ ಬಳಕೆ ಮಾಡಲು ಸಾಧ್ಯವಾಗುವುದರಿಂದ ಖರ್ಚಿನ ಲೆಕ್ಕದಲ್ಲೂ ಕಾರ್ಯಸಾಧು ಎನ್ನಬಹುದು. ಸಧ್ಯದ ಮಟ್ಟಿಗೆ ಮಂಗನಿಂದ ಬಾಳೆ ಕೊನೆಯನ್ನು ರಕ್ಷಿಸಿಕೊಳ್ಳಲು ಇದೊಂದು ಸರಳ ಉಪಾಯ ಎಂದು ನನಗನಿಸಿದೆ.

ಕೋತಿಗಳಿಂದ ಕೃಷಿ ಉತ್ಪನ್ನಗಳ ರಕ್ಷಣೆಗೆ ನಿಮ್ಮ ಬಳಿ ಇಂತಹ ಯಾವುದಾದರೂ ಒಳ್ಳೆಯ ತಂತ್ರಗಳಿದ್ದರೆ ದಯವಿಟ್ಟು ಕಾಮೆಂಟ್‌ನಲ್ಲಿ ಅಥವಾ ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಆ ಮೂಲಕ ಮಲೆನಾಡಿನ ಕೃಷಿಕರ ಜೀವನವನ್ನು ಉತ್ತಮಗೊಳಿಸಿ.

ಕೊನೆಯದಾಗಿ: ಕೆಲ ವರ್ಷಗಳ ಹಿಂದೆ ಮಧ್ಯ ಪ್ರದೇಶದಲ್ಲಿ ಕಾಡು ದನದ ರೀತಿಯ ಪ್ರಾಣಿಯ ಹಾವಳಿ ಹೆಚ್ಚಾದಾಗ ಅದನ್ನು ಹೊಡೆಯಲು ಅಲ್ಲಿಯ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ ಕರ್ನಾಟಕದ ಮಲೆನಾಡಿನ ಕೃಷಿಕರ ಜೀವನವನ್ನು ನಾಶ ಮಾಡುತ್ತಿರುವ ಮಂಗಗಳನ್ನು ಹೊಡೆಯಲು ನಮ್ಮ ಸರ್ಕಾರ ಅನುಮತಿ ನೀಡುತ್ತಿಲ್ಲ. ಮರಗಳ ಲೂಟಿ, ರೆಸಾರ್ಟ್‌ಗೆ ಅವಕಾಶ ಕೊಡುವ ಅರಣ್ಯ ಇಲಾಖೆಯ ಸಿಬ್ಬಂದಿ, ಮಂಗನನ್ನು ಹೊಡೆದಿರುವುದು ಗೊತ್ತಾದರೆ ರೈತರ ಬಳಿ ವಸೂಲಿಗೆ ಬಂದು ಕೂರುತ್ತಾರೆ. ಹಣ ಕೊಟ್ಟಿಲ್ಲವೆಂದರೆ ಬಡ ರೈತರ ವಿರುದ್ಧ ದೂರು ದಾಖಲಿಸುವುದರಲ್ಲಿ ಸಂಶಯವೇ ಇಲ್ಲ. ಅಂದ್ಹಾಗೆ ನೀವು ಕಾಡನ್ನು ನಾಶ ಮಾಡಿದ್ದರಿಂದ, ಅತಿಕ್ರಮಣ ಮಾಡಿದ್ದರಿಂದ ಮಂಗಗಳು ತೋಟಕ್ಕೆ ದಾಳಿ ಮಾಡುತ್ತಿವೆ ಎಂದು ಉಪನ್ಯಾಸವನ್ನು ದಯವಿಟ್ಟು ನೀಡಬೇಡಿ. ಈಗ ನಮ್ಮೂರಿನಲ್ಲಿ ರೈತರಿಗೆ ಕಾಟ ಕೊಡುತ್ತಿರುವ ಬಹುತೇಕ ಮಂಗಗಳು ನಗರ ಪ್ರದೇಶಗಳಿಂದ ನಮ್ಮ ಕಾಡಿಗೆ ತಂದು ಬಿಟ್ಟಿರುವುದರಿಂದ ಆಗುತ್ತಿರುವ ಸಮಸ್ಯೆಯಾಗಿದೆ. ನಮ್ಮೂರಿನಲ್ಲಿ ಕಾಡು ಉಳಿಸಿಕೊಂಡಿರುವುದೇ ನಮಗೆ ಶಾಪವಾಗಿ ಪರಿಣಮಿಸಿದೆ. ʼಕತ್ತಲೆ ಕಾನುʼ ಪ್ರದೇಶದಲ್ಲಿ ಬದುಕುತ್ತಿರುವ ರೈತರ ಕೂಗು ಮಲೆನಾಡಿನಿಂದ ಹೊರಗೇ ಕೇಳಿಸತ್ತಿಲ್ಲ. ಇಲ್ಲವಾದಲ್ಲಿ ಈ ಆಕ್ರಂದನವನ್ನು ಕೇಳಿಸಿಕೊಳ್ಳುವ ಸೂಕ್ಷ್ಮತೆಯನ್ನು ನಮ್ಮ ಆಡಳಿತ ವ್ಯವಸ್ಥೆ ಕಳೆದುಕೊಂಡಿದೆ. ಈ ಬಗ್ಗೆ ಸರ್ಕಾರವು ಗಂಭೀರವಾಗಿ ಆಲೋಚಿಸದಿದ್ದರೆ ಮುಂದೊಂದು ದಿನ ಮಲೆನಾಡಿನಲ್ಲಿ ಈ ರಾಜಕಾರಣಿಗಳ ಬದಲಿಗೆ ಮಂಗಗಳೇ ರಾಜಕೀಯ ನಡೆಸಬಹುದು. ಈ ಮಾತು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಈಗಾಗಲೇ ಹಲವು ಮನೆಗಳೊಳಗೆ ಮಂಗಗಳು ನುಗ್ಗಿ ದಾಂಧಲೆ ಮಾಡಿದ ಉದಾಹರಣೆಗಳಿವೆ.

-ರಾಜೀವ್‌ ಹೆಗಡೆ, ಲೇಖಕ.

 

Whats_app_banner