Gruha Jyoti Registration: ಹೊಸ ಮನೆ ಕಟ್ಟಿಸಿ ಗೃಹಜ್ಯೋತಿ ಯೋಜನೆಗೆ ಇನ್ನೂ ಹೆಸರು ಸೇರಿಸಿಲ್ಲವಾ, ನೋಂದಣಿ ಮಾಡಿಸಲು ಹೀಗೆ ಮಾಡಿ
Gruha Jyoti Registration: ಹೊಸದಾಗಿ ಮನೆ ನಿರ್ಮಿಸಿದ್ದರೆ ಇಲ್ಲವೇ ಹೊಸ ಮನೆಗೆ ಬಾಡಿಗೆಗೆ ಹೋಗಿದ್ದರೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಏನು ಮಾಡಬೇಕು. ಇಲ್ಲಿದೆ ವಿವರ.

Gruha Jyoti Registration: ಕರ್ನಾಟಕ ಸರ್ಕಾರ ಎರಡು ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಕೂಡ ಒಂದು. 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್ ಪಡೆಯುವ ಯೋಜನೆ ಬಹುತೇಕ ಎರಡು ವರ್ಷದಿಂದ ಚಾಲ್ತಿಯಲ್ಲಿದೆ. ಈಗಾಗಲೇ ಕರ್ನಾಟಕದಲ್ಲಿ ಶೇ. 96ರಷ್ಟು ಮಂದಿ ಯೋಜನೆಗೆ ನೋಂದಣಿ ಮಾಡಿಸಿಕೊಂಡು ಗೃಹಜ್ಯೋತಿ ಯೋಜನೆ ಉಪಯೋಗ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡವರು ಈಗಾಗಲೇ ಇದ್ದ ಮನೆ ಬದಲಿಸಿದ್ದರೆ, ಇಲ್ಲವೇ ಹೊಸ ಮನೆ ಕಟ್ಟಿಕೊಂಡು ಹೋಗಿದ್ದರೆ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ ಹೀಗೆ ಒಮ್ಮೆ ನೋಂದಣಿ ಮಾಡಿಸಿ ಈಗ ಬದಲಿ ಮನೆ ಇಲ್ಲವೇ ಸ್ವಂತ ಮನೆಗೆ ನೋಂದಣಿ ಮಾಡಿಸಿಕೊಂಡರೆ 200 ಯೂನಿಟ್‌ವರೆಗೂ ವಿದ್ಯುತ್ ಬಳಕೆಗೆ ಅವಕಾಶವಿಲ್ಲ. 57 ರಿಂದ 58 ಯೂನಿಟ್ ಮಾತ್ರ ಬಳಸಬಹುದು. ಕಳೆದ ವರ್ಷವೇ ಸರ್ಕಾರ ಈ ಬದಲಾವಣೆ ಮಾಡಿದೆ. ಹೆಚ್ಚಿನ ಪಾಲು ಗ್ರಾಹಕರು 200 ಯೂನಿಟ್‌ವರೆಗೂ ಸೌಲಭ್ಯ ಪಡೆಯುತ್ತಿದ್ದಾರೆ.
ಕರ್ನಾಟಕ ವಿದ್ಯುತ್ ಇಲಾಖೆಯ ವಿಭಾಗವಾರು ಇರುವ ವಿದ್ಯುತ್ ವಿತರಣೆ ಕಂಪೆನಿಗಳ ಮೂಲಕ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶದಿದೆ. ಇದಕ್ಕಾಗಿ ನಿಮ್ಮ ಊರಿನ ವಿದ್ಯುತ್ ವಿತರಣೆ ಕಂಪೆನಿಗಳ ಕಚೇರಿಗೆ ಹೋದರೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲವೇ ಸೇವಾ ಸಿಂಧು ಪೋರ್ಟಲ್ ಬಳಸಿಯೂ ಯೋಜನೆಗೆ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ನೋಂದಣಿ ಮಾಡಿಸಿಕೊಂಡು ಮನೆ ಬದಲಾವಣೆ ಮಾಡಿದ್ದರೆ ಇಲ್ಲವೇ ಹೊಸ ಮನೆ ಕಟ್ಟಿಸಿದ್ದರೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವುದು ಸೂಕ್ತ. ಹೊಸ ಮನೆಯಾಗಿದ್ದರೆ ಆ ಮನೆಗೆ ಪ್ರತ್ಯೇಕ ಆರ್‌ಆರ್ ಸಂಖ್ಯೆ ಬರುವುದರಿಂದ ನೋಂದಣಿ ಮಾಡಿಸಿಕೊಂಡರೆ ಮಾತ್ರ ಗೃಹಜ್ಯೋತಿ ಯೋಜನೆ ವ್ಯಾಪ್ತಿಗೆ ಬರಲು ಅವಕಾಶ ಸಿಗಲಿದೆ. ಬಾಡಿಗೆ ಮನೆ ಬದಲಾವಣೆ ಮಾಡಿದ್ದು ಈ ಹಿಂದೆ ಅದೇ ಮನೆಯಲ್ಲಿದ್ದವರು ನೋಂದಣಿ ಮಾಡಿಸಿ ಯೋಜನೆ ಚಾಲ್ತಿಯಲ್ಲಿದ್ದರೆ ಅದನ್ನೇ ಮುಂದುವರೆಸಬಹುದು. ಹೊಸದಾಗಿ ನೋಂದಣಿ ಮಾಡಿಸಲು ಹೋದರೆ ಯೂನಿಟ್ ಬಳಕೆ ಮಿತಿ ಕಡಿಮೆಯಾಗಲಿದೆ.
ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ನೋಂದಣಿ ಮಾಡಿಸಕೊಂಡಿರುವ ಗ್ರಾಹಕರ https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.
ನೀವು ಅದೇ ಊರಿನಲ್ಲಿ ಮನೆ ಬದಲಿಸಿದ್ದರೆ, ಅಥವಾ ಊರನ್ನೇ ಬದಲಿಸಿದ್ದರೆ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಆರ್.ಆರ್. ನಂಬರ್ ವಿವರ ಪರಿಶೀಲಿಸಿ ಸೇರಿಸಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್ ಜತೆ ಲಿಂಕ್ ಆಗಿರದ ಆರ್ .ಆರ್. ನಂಬರ್‌ಗೆ ಲಿಂಕ್ ಮಾಡಲು ಅವಕಾಶವಿದೆ. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎನ್ನುವುದು ಅಧಿಕಾರಿಗಳು ನೀಡಿರುವ ವಿವರಣೆ.
2023ರ ಜೂನ್ 6ರಂದು, ಕರ್ನಾಟಕ ಸರ್ಕಾರವು ಗೃಹ ಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಪಡೆಯುವ ಸೂಚನೆಗಳನ್ನು ಬಿಡುಗಡೆ ಮಾಡಿತು. ಈ ಯೋಜನೆಯ ಲಾಭ ಪಡೆಯಲು ಮತ್ತು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಲು, ವ್ಯಕ್ತಿಗಳು ಈಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ಯೋಜನೆಯು ವಸತಿ ಉದ್ದೇಶಗಳಿಗಾಗಿ ಮಾತ್ರ, ಮತ್ತು ಗ್ರಾಹಕರು ಉಚಿತ ಯೂನಿಟ್ ಮಿತಿಯನ್ನು ಮೀರಿದರೆ, ಹೆಚ್ಚುವರಿ ಬಳಕೆಗೆ ಅವರಿಗೆ ಬಿಲ್ ಮಾಡಲಾಗುತ್ತದೆ. ಆದಾಗ್ಯೂ, ಒಟ್ಟು ಬಳಸುವ ಯೂನಿಟ್‌ಗಳು ಯೋಜನೆಯಿಂದ ನಿರ್ದಿಷ್ಟಪಡಿಸಿದ ಅರ್ಹ ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಗ್ರಾಹಕರು ಯಾವುದೇ ಬಿಲ್‌ಗಳನ್ನು ಸ್ವೀಕರಿಸುವುದಿಲ್ಲ ಮತ್ತು ಅವರ ವಿದ್ಯುತ್ ಅನ್ನು ಯಾವುದೇ ವೆಚ್ಚವಿಲ್ಲದೇ ಒದಗಿಸಲಾಗುತ್ತದೆ.
ಹೀಗೆ ಮಾಡಿ
- ಹೊಸದಾಗಿ ನೋಂದಣಿ ಇಲ್ಲವೇ ಬದಲಿ ಮನೆಗೆ ನೋಂದಣಿ ಮಾಡಿಸಲು ಅವಕಾಶವಿದೆ
- ಸಮೀಪದ ವಿದ್ಯುತ್ ಕಚೇರಿಗೆ ಹೋಗಿ
- ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿ
- ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಕಡ್ಡಾಯ
- ವಿದ್ಯುತ್ ಬಳಕೆಯ ಆರ್‌ಆರ್ ಸಂಖ್ಯೆಯೂ ಬೇಕು
- ಇವರೆಡನ್ನು ಆಧರಿಸಿ ವಿದ್ಯುತ್ ಕಂಪೆನಿಯವರೇ ನೋಂದಣಿ ಮಾಡಿಸಿಕೊಡಲಿದ್ದಾರೆ
- ಇಲ್ಲದೇ ಇದ್ದರೆ ಸೇವಾ ಸಿಂಧು ಆಪ್ ಅನ್ನು ಬಳಸಿ ಆನ್‌ಲೈನ್ ಮೂಲಕವೇ ನೀವು ಅಪ್‌ಡೇಟ್ ಮಾಡಬಹುದು.
