ಹುಬ್ಬಳ್ಳಿ ಎನ್‌ಕೌಂಟರ್‍‌ನಲ್ಲಿ ಮೃತಪಟ್ಟ ವಲಸೆ ಕಾರ್ಮಿಕನ ಮರಣೋತ್ತರ ಪರೀಕ್ಷೆ ಮಾಡುವಂತೆ ಆದೇಶ ನೀಡಿದ ಹೈಕೋರ್ಟ್
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ ಎನ್‌ಕೌಂಟರ್‍‌ನಲ್ಲಿ ಮೃತಪಟ್ಟ ವಲಸೆ ಕಾರ್ಮಿಕನ ಮರಣೋತ್ತರ ಪರೀಕ್ಷೆ ಮಾಡುವಂತೆ ಆದೇಶ ನೀಡಿದ ಹೈಕೋರ್ಟ್

ಹುಬ್ಬಳ್ಳಿ ಎನ್‌ಕೌಂಟರ್‍‌ನಲ್ಲಿ ಮೃತಪಟ್ಟ ವಲಸೆ ಕಾರ್ಮಿಕನ ಮರಣೋತ್ತರ ಪರೀಕ್ಷೆ ಮಾಡುವಂತೆ ಆದೇಶ ನೀಡಿದ ಹೈಕೋರ್ಟ್

ಏಪ್ರಿಲ್ 13ರಂದು ಹುಬ್ಬಳ್ಳಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಪೊಲೀಸರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಬಿಹಾರ ಮೂಲದ ವಲಸೆ ಕಾರ್ಮಿಕನ ಮರಣೋತ್ತರ ಪರೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ (ಸಂಗ್ರಹ ಚಿತ್ರ - PTI)

ಬೆಂಗಳೂರು: ಏಪ್ರಿಲ್ 13ರಂದು ಹುಬ್ಬಳ್ಳಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಪೊಲೀಸರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಬಿಹಾರ ಮೂಲದ ವಲಸೆ ಕಾರ್ಮಿಕನ ಮರಣೋತ್ತರ ಪರೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ (ಏ. 15) ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆರೋಪಿ ರಿತೇಶ್ ಕುಮಾರ್ ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದಾನೆಂದು ಆತನನ್ನು ಸೆರೆಹಿಡಿಯುವ ಪ್ರಯತ್ನ ನಡೆಯುತ್ತಿತ್ತು. ಆದರೆ ಆತ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಲು ಆದೇಶಿಸಿದೆ. ಪೊಲೀಸ್ ಕ್ರಮದಿಂದ ಉಂಟಾಗುವ ಸಾವುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2014ರ ಮಾರ್ಗಸೂಚಿಗಳನ್ನು ಅನುಸರಿಸುವ ಅಗತ್ಯವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಒತ್ತಿ ಹೇಳಿದೆ.

ಮರಣೋತ್ತರ ಪರೀಕ್ಷೆ ನಡೆಸುವಂತೆ ಆದೇಶ

ಸ್ಥಳೀಯ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಪೀಠ ಆದೇಶಿಸಿದೆ. "ಕಾರ್ಯವಿಧಾನದುದ್ದಕ್ಕೂ ವೀಡಿಯೊಗ್ರಫಿ ಮಾಡಬೇಕು, ಮತ್ತು ಹೆಚ್ಚಿನ ತನಿಖೆಗಳಲ್ಲಿ ಸಂಭವನೀಯ ಬಳಕೆಗಾಗಿ ದೇಹದ ಮಾದರಿಗಳನ್ನು ಸಂರಕ್ಷಿಸಬೇಕು" ಎಂದು ನ್ಯಾಯಾಲಯ ಹೇಳಿದೆ. ಪಿಯುಸಿಎಲ್ ಪ್ರತಿನಿಧಿಸುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಮೃತರ ವಿರುದ್ಧದ ಆರೋಪಗಳ ಸ್ವರೂಪ ಮತ್ತು ಎನ್ಕೌಂಟರ್ ಸುತ್ತಲಿನ ಸಂದರ್ಭಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಈ ಹಂತದಲ್ಲಿ ಯಾವುದೇ ವಿರೋಧಿ ಹೇಳಿಕೆಗಳು ಇಲ್ಲದಿದ್ದರೂ, ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಶವದಹನ ಮಾಡದೇ ಇರಲು ಸೂಚಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅಪರಾಧ ತನಿಖಾ ಇಲಾಖೆ ತನಿಖೆ ನಡೆಸುತ್ತಿದೆ. ಶವವನ್ನು ದಹನ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಇಂತಹ ಸಂದರ್ಭದಲ್ಲಿ ದೇಹವನ್ನು ಸುಡುವುದಿಲ್ಲ ಬದಲಾಗಿ ಹೂಳಲಾಗುತ್ತದೆ ಎಂದು ಹೇಳಿದ್ದಾರೆ.

ಈ ಭರವಸೆಯನ್ನು ಗಮನಿಸಿದ ನ್ಯಾಯಪೀಠ, ಶವಸಂಸ್ಕಾರದ ಬಗ್ಗೆ ಅರ್ಜಿದಾರರ ಕಳವಳವು ಆಧಾರರಹಿತವಾಗಿದೆ ಎಂದು ಅಭಿಪ್ರಾಯಪಟ್ಟಿತು. ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ನೀಡಿದ್ದು, ಏಪ್ರಿಲ್ 24 ರೊಳಗೆ ಉತ್ತರಿಸುವಂತೆ ಸೂಚಿಸಿದೆ.

Suma Gaonkar

eMail
Whats_app_banner