ಸಿಟಿ ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ವಿನಯ ಕುಲಕರ್ಣಿ, ಯತ್ನಾಳ್ ಪ್ರಕರಣ ರದ್ದು; ರೇವಣ್ಣಗೂ ತಾತ್ಕಾಲಿಕ ರಿಲೀಫ್
ಕನ್ನಡ ಸುದ್ದಿ  /  ಕರ್ನಾಟಕ  /  ಸಿಟಿ ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ವಿನಯ ಕುಲಕರ್ಣಿ, ಯತ್ನಾಳ್ ಪ್ರಕರಣ ರದ್ದು; ರೇವಣ್ಣಗೂ ತಾತ್ಕಾಲಿಕ ರಿಲೀಫ್

ಸಿಟಿ ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ವಿನಯ ಕುಲಕರ್ಣಿ, ಯತ್ನಾಳ್ ಪ್ರಕರಣ ರದ್ದು; ರೇವಣ್ಣಗೂ ತಾತ್ಕಾಲಿಕ ರಿಲೀಫ್

High Court of Karnataka: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಸಿಟಿ ರವಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎಚ್​ಡಿ ರೇವಣ್ಣ ವಿರುದ್ಧದ ಪ್ರಕರಣದ ತಡೆ ಆದೇಶ ವಿಸ್ತರಿಸಿರುವ ನ್ಯಾಯಾಲಯ, ವಿನಯ ಕುಲಕರ್ಣಿ ಮತ್ತು ಯತ್ನಾಳ್ ವಿರುದ್ಧದ ಪ್ರಕರಣ ರದ್ದುಪಡಿಸಿದೆ.(ವರದಿ-ಎಚ್.‌ ಮಾರುತಿ)

ಸಿಟಿ ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ವಿನಯ ಕುಲಕರ್ಣಿ, ಯತ್ನಾಳ್ ಪ್ರಕರಣ ರದ್ದು; ರೇವಣ್ಣಗೂ ತಾತ್ಕಾಲಿಕ ರಿಲೀಫ್
ಸಿಟಿ ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ವಿನಯ ಕುಲಕರ್ಣಿ, ಯತ್ನಾಳ್ ಪ್ರಕರಣ ರದ್ದು; ರೇವಣ್ಣಗೂ ತಾತ್ಕಾಲಿಕ ರಿಲೀಫ್

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್‌ 19 ರಂದು ನಡೆದ ವಿಧಾನ ಪರಿಷತ್‌ ಅಧಿವೇಶನದಲ್ಲಿ ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ವಿರುದ್ಧ ದೂರು ಸಲ್ಲಿಸಿದ್ದು ಪೊಲೀಸರು ಎಫ್​ಐಆರ್‌ ದಾಖಲಿಸಿದ್ದರು. ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಗುರುವಾರ (ಜನವರಿ 30) ವಿಚಾರಣೆ ನಡೆಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಕರಣದಲ್ಲಿ ಸಾಕಷ್ಟು ವಿಚಾರಗಳು ಅಡಗಿರುವುದರಿಂದ ಅವುಗಳನ್ನೆಲ್ಲಾ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ವಿಚಾರಣೆ ನಡೆಸಬೇಕಿದೆ. ಏಕಾಏಕಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗದು ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರುವರಿ 20ಕ್ಕೆ ಮುಂದೂಡಿತು. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಮನ್ಸ್‌ ಜಾರಿಗೊಳಿಸಲು ನಿರ್ದೇಶನ ನೀಡಲಾಗಿದ್ದು ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ರವಿ ಪರ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ ಹಾಗೂ ಪ್ರಾಸಿಕ್ಯೂಷನ್ ಪರ ರಾಜ್ಯ ಪ್ರಾಸಿಕ್ಯೂಟರ್ ಬಿಎ ಬೆಳ್ಳಿಯಪ್ಪ ವಾದ ಮಂಡಿಸಿದರು. ನಾವದಗಿ ವಾದಿಸಿ ಸದನದ ಒಳಗೆ ನಡೆದಿರುವ ಪ್ರಕ್ರಿಯೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಸದನದ ಸದಸ್ಯರಿಗೆ ರಕ್ಷಣೆ ಇದೆ ಎಂದರು. ಬೆಳ್ಳಿಯಪ್ಪ ವಾದಿಸಿ ಸದನದ ಒಳಗೆ ನಡೆದ ಪ್ರಕ್ರಿಯೆಗಳನ್ನು ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಅನೇಕ ಪ್ರಕರಣಗಳಿವೆ. ನ್ಯಾಯಾಲಯಗಳು ತೀರ್ಪು ನೀಡಿರುವ ಉದಾಹರಣೆಗಳಿವೆ ಎಂದು ತಿಳಿಸಿದರು.

ಎಚ್​ಡಿ ರೇವಣ್ಣ ವಿರುದ್ಧದ ಪ್ರಕರಣ: ತಡೆ ಆದೇಶ ವಿಸ್ತರಣೆ

ಹಾಸನದ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದಡಿಯಲ್ಲಿ ಜೆಡಿಎಸ್‌ ಮುಖಂಡ, ಶಾಸಕ ಎಚ್​​ಡಿ ರೇವಣ್ಣ ವಿರುದ್ಧ ದೋಷಾರೋಪ ನಿಗದಿಪಡಿಸುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಪ್ರಕ್ರಿಯೆಗೆ ನೀಡಲಾಗಿದ್ದ ತಡೆ ಆದೇಶವನ್ನು ಹೈಕೋರ್ಟ್‌ ಫೆಬ್ರುವರಿ 7ರವರೆಗೆ ವಿಸ್ತರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಎಚ್‌ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ ವಿಚಾರಣೆ ನಡೆಸಿತು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ. ಅಲ್ಲಿಯವರೆಗೆ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ಸಾಕ್ಷಿ ಬೆದರಿಕೆ: ವಿನಯ ಕುಲಕರ್ಣಿ ವಿರುದ್ಧದ ಪ್ರಕರಣ ರದ್ದು

ಧಾರವಾಡ ಜಿಲ್ಲಾ ಪಂಚಾಯಿತಿಯ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆಗೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಪ್ರಕರಣವನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣ ರದ್ದುಪಡಿಸುವಂತೆ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪುರಸ್ಕರಿಸಿದ್ದಾರೆ. ಅಧಿಕಾರ ವ್ಯಾಪ್ತಿ ಇಲ್ಲದ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಆದ್ದರಿಂದ ತಾಂತ್ರಿಕ ಕಾರಣಗಳಿಗಾಗಿ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಯತ್ನಾಳ್ ವಿರುದ್ಧದ ಪ್ರಕರಣ ರದ್ದು

ಪಡಿತರ ಚೀಟಿ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಭಾಷಣ ಮಾಡಿದ ಆರೋಪದಡಿಯಲ್ಲಿ ಬಿಜೆಪಿ ಮುಖಂಡ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಈ ಸಂಬಂಧ ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಯತ್ನಾಳ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪುರಸ್ಕರಿಸಿ ಈ ಆದೇಶ ನೀಡಿದ್ದಾರೆ.

Whats_app_banner