ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ ಮುಂದುವರಿಕೆ; ನಾಳೆಯೂ ಶಾಲೆಗಳಿಗೆ ರಜೆ ಘೋಷಣೆ
ಭಾರಿ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಕೇಂದ್ರಗಳು, ಸರ್ಕಾರಿ/ ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ - ಪ್ರೌಢ ಶಾಲೆಗಳಿಗೆ ಅಕ್ಟೋಬರ್ 23ರ ಬುಧವಾರ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಈ ನಡುವೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಹೀಗಾಗಿ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ (ಅಕ್ಟೋಬರ್ 23ರ ಬುಧವಾರ) ಬೆಂಗಳೂರು ನಗರ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ/ ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ - ಪ್ರೌಢ ಶಾಲೆಗಳಿಗೆ ರಜೆಯನ್ನು ಘೋಷಿಸಿ ಆದೇಶ ಹೊರಡಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ ಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆ ಘೋಷಣೆ ಆಗಿಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ. ಆದರೆ, ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಉದ್ಯಾನ ನಗರಿ ಬೆಂಗಳೂರು ಪ್ರಸ್ತುತ ಹಿಂಗಾರು ಮಳೆಯ ಪರಿಣಾಮವನ್ನು ಎದುರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಕೆಲವೆಡೆ ಸಾಧಾರಣ ಮಳೆ ಸುರಿದರೆ ಇನ್ನೂ ಕೆಲವೆಡೆ ಭಾರಿ ಮಳೆಯಾಗಿದೆ. ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ. ಜನಜೀವನ ಅಸ್ತವ್ಯಸ್ತಗೊಂದಿದ್ದು, ರಸ್ತೆ ಪ್ರಯಾಣ ದುಸ್ತರವಾಗಿದೆ.
ಮಂಗಳವಾರವೂ ನಗರದ ಹಲವೆಡೆ ಮಳೆ ಸುರಿದಿದೆ. ಇಂದು (ಅಕ್ಟೋಬರ್ 22) ಭಾರಿ ಮಳೆಯಾಗಿದ್ದು, ಶಾಲೆಗೆ ಹೋಗಿದ್ದ ಮಕ್ಕಳು ಮಳೆಯ ಭಯದಲ್ಲೇ ಮನೆ ಸೇರಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ ಅಂದರೆ ಅಕ್ಟೋಬರ್ 23ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜಿಲ್ಲಾಧಿಕಾರಿ ಡಿಸಿ ಜಗದೀಶ್ ರಜೆ ಘೋಷಣೆ ಮಾಡಿದ್ದಾರೆ. ನಾಳೆ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಇರುವ ಕಾರಣ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ ಕೆಲವು ದಿನ ಮಳೆ
ಹಲವು ದಿನಗಳಿಂದ ಸುರಿಯುತ್ತಿರುವ ಮನೆಯಿಂದ ಈಗಾಗಲೇ ಸಿಲಿಕಾನ್ ಸಿಟಿ ಜನತೆ ರೋಸಿ ಹೋಗಿದ್ದಾರೆ. ಒಮ್ಮೆ ಮಳೆಯ ಅಬ್ಬರ ಕಡಿಮೆಯಾಗಲಿ ಎಂದು ಕಾಯುತ್ತಿದ್ದಾರೆ. ಆದರೆ ನಗರದಲ್ಲಿ ಇನ್ನೂ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಂಭವವಿದೆ.