ಮಧುಬಲೆ ವಿವಾದ ರಾಹುಲ್ ಗಾಂಧಿ ಅಂಗಳಕ್ಕೆ ಶಿಫ್ಟ್; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಕ್ಕೆ ಈ ಸಂಚು ರೂಪಿಸಲಾಗಿತ್ತೇ?
Honey Trap Issue: ಸದ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಮಧುಬಲೆ (ಹನಿಟ್ರ್ಯಾಪ್) ವಿಚಾರ ರಾಜೀವ್ ಗಾಂಧಿ ಅಂಗಳಕ್ಕೆ ಶಿಫ್ಟ್ ಆಗಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಕ್ಕೆ ಈ ಸಂಚು ರೂಪಿಸಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಮಧುಬಲೆ ಪ್ರಯತ್ನ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಹನಿಟ್ರ್ಯಾಪ್ (Honey Trap Issue) ಹಿಂದಿನ ಕಾಣದ ಕೈ ಯಾರದ್ದು ಎನ್ನುವುದು ಸ್ಪಷ್ಟವಾಗಿಲ್ಲವಾದರೂ ಸಂಪುಟದಲ್ಲಿ ನಂ-2 ಸ್ಥಾನದಲ್ಲಿರುವ ಸಚಿವರತ್ತ ಬೊಟ್ಟು ಮಾಡಿ ತೋರಿಸಲಾಗುತ್ತದೆ. ಅವರ ‘ಹಲೋ‘ ಹೇಳಿಕೆ ಅವರತ್ತಲೇ ಬೊಟ್ಟು ಮಾಡಿ ತೋರಿಸುತ್ತಿರುವುದು ಶಂಕೆಗೆ ಇಂಬು ನೀಡಿದೆ.
ಸಚಿವ ಕೆ. ಎನ್. ರಾಜಣ್ಣ ಮತ್ತು ಅವರ ಪುತ್ರ ವಿಧಾನಪರಿಸತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಧುಬಲೆ ವಿವರಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಈ ವಿವಾದವನ್ನು ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವರಿಷ್ಠರ ಅಂಗಳಕ್ಕೆ ದಾಟಿಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಜೇಂದ್ರ ತಮ್ಮ ಮತ್ತು ತಮ್ಮ ತಂದೆಯ ವಿರುದ್ಧ ಮಧುಬಲೆ ಪ್ರಯತ್ನವನ್ನು ಯಾರು ಮಾಡಿರಬಹುದು ಎಂಬ ಬಗ್ಗೆ ಡಿಜಿಟಲ್ ಸಾಕ್ಷ್ಯವನ್ನು ಒದಗಿಸಿದ್ದಾರೆ. ಪ್ರಭಾವಿ ಸಚಿವರೇ ಕಾರಣ ಎನ್ನುವ ಅಂಶವನ್ನೂ ರಾಜೇಂದ್ರ ಸಿಎಂ ಗಮನಕ್ಕೆ ತಂದಿದ್ದಾರೆ.
ತಮ್ಮ ತಂದ ಪ್ರತಿನಿಧಿಸುವ ಮಧುಗಿರಿಯಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ರಾಜೇಂದ್ರ ಈ ದುಷ್ಕೃತ್ಯದ ಹಿಂದಿರುವ ಮಾಸ್ಟರ್ ಮೈಂಡ್‌ಗೆ ಕುಟುಂಬ ಎನ್ನುವುದಿಲ್ಲವೇ? ನಮ್ಮ ಮೇಲೆ ಮಧುಬಲೆ ಪ್ರಯತ್ನವನ್ನು ಏಕೆ ಮಾಡಿದರು ಎಂದು ಗುಡುಗಿದ್ದಾರೆ. ಈ ಪ್ರಕರಣ ಕುರಿತು ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ನಡೆಯುವುದಾಗಿ ರಾಜೇಂದ್ರ ಹೇಳಿದ್ದಾರೆ.
ರಾಜಕೀಯ ಲಾಭಕ್ಕಾಗಿ ಪಕ್ಷದ ಹಿರಿಯ ಮುಖಂಡರನ್ನು ಮಧುಬಲೆ (ಹನಿಟ್ರ್ಯಾಪ್) ಎಂಬ ಖೆಡ್ಡಾಗೆ ಕೆಡವಲು ಹಿರಿಯ ಸಚಿವರೊಬ್ಬರು ಸಂಚು ರೂಪಿಸಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡಲು ಮುಖ್ಯಮಂತ್ರಿಗಳ ಆಪ್ತರಾದ ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ ಇಬ್ಬರೂ ದೆಹಲಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಜತೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೂ ದೂರು ನೀಡಲು ನಿರ್ಧರಿಸಿದ್ದರು.
ರಾಜಣ್ಣ ಮತ್ತು ಜಾರಕಿಹೊಳಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಹೊಸ ಸುದ್ದಿಯೇನಲ್ಲ. ಅವಕಾಶ ನೀಡಿದರೆ ಪಕ್ಷವನ್ನು ಮುನ್ನಡೆಸುವುದಾಗಿ ಇವರಿಬ್ಬರೂ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಇವರನ್ನು ನಿಯಂತ್ರಿಸಲೆಂದೇ ಮಧುಬಲೆ ಸಂಚು ರೂಪಿಸಲಾಗಿದೆ ಎನ್ನಲಾಗುತ್ತಿದೆ. ನಂ-2
ಸಚಿವರು ತಮಗೆ ಅಡ್ಡಿಯಾಗುತ್ತಿವವರ ವಿರುದ್ಧ ಈ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದರು. ಈ ಹಿಂದೆಯೂ ಅವರು ಇದೇ ಪ್ರಯತ್ನ ನಡೆಸಿ ಸಕ್ಸಸ್ ಕಂಡಿದ್ದರು ಎಂದು ಅವರ ವಿರೋಧಿಗಳು ಹೇಳುತ್ತಿದ್ದಾರೆ.
ಪಕ್ಷದ ಹೈಕಮಾಂಡ್ ಈಗಾಲೇ ತಮ್ಮದೇ ಆದ ಮೂಲಗಳಿಂದ ಖಚಿತ ಮಾಹಿತಿಯನ್ನು ತರಿಸಿಕೊಂಡಿದೆ. ಈ ವಿವಾದಕ್ಕೆ ಯಾರು ಕಾರಣ? ಬಿಜೆಪಿ ಹೇಗೆ ಲಾಭ ಮಾಡಿಕೊಳ್ಳಲು ಮತ್ತು ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಹವಣಿಸುತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದೆ ಎಂದು ಕೆಪಿಸಿಸಿ ಮುಖಂಡರೊಬ್ಬರು ಹೇಳುತ್ತಾರೆ.
ಇನ್ನು ಮಧುಬಲೆ ಕುರಿತು ದೂರು ನೀಡುವ ಬಗ್ಗೆ ರಾಜಣ್ಣ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಆಪ್ತ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ? ಆ ನಂ.2 ಪ್ರಭಾವಿ ಸಚಿವರ ಪಾತ್ರವೇನು? ಸಿದ್ದರಾಮಯ್ಯ ಅವರ ಪಾತ್ರವೇನು? ಮಧುಬಲೆ ರೂವಾರಿ ಎನ್ನಲಾದ ಪ್ರಭಾವಿ ಸಚಿವರಿಗೆ ತಿರುಗುಬಾಣವಾಗಲಿದೆಯೇ ಕಾದು ನೋಡಬೇಕು.
