ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು
Bengaluru Crime: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿದ ನಾಲ್ವರು ಮಹಿಳೆಯರು ಸೇರಿ 6 ಮಂದಿಯನ್ನು ಬಂಧನ ಮಾಡಲಾಗಿದೆ. 2 ಲಕ್ಷ ಲಂಚ ಪಡೆಯುತ್ತಿದ್ದಾಗ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

ಬೆಂಗಳೂರು: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ 6 ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಲಕ್ಷ್ಮಿ, ಲೀಲಾವತಿ, ಗೀತಾ, ಮಂಜುಳಾ, ಹರೀಶ್, ವೆಂಕಟೇಶ್ ಬಂಧಿತ ಆರೋಪಿಗಳು.
ರಾಪಿಡೊ ಚಾಲಕ ಸುರೆಂದ್ರ ಕುಮಾರ್ಗೆ 34 ವರ್ಷಗಳಾದರೂ ಮದುವೆಯಾಗಿರಲಿಲ್ಲ. ಸುರೆಂದ್ರಗೆ ರಾಪಿಡೊ ಬುಕ್ ಮಾಡಿದ ಮಂಜುಳ ಪರಿಚಯವಾಗಿತ್ತು. ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಸಂತ್ರಸ್ತ ಯುವಕ ತಾನು ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದು ಕನ್ಯೆ ಇದ್ದರೆ ಹೇಳಿ ಎಂದು ಹೇಳಿದ್ದರು.
ನಂತರ ಜನವರಿ 20 ರಂದು ಮಂಜುಳಾ ಯುವಕನಿಗೆ ಕರೆ ಮಾಡಿ ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು. ಮಂಜುಳ ಸ್ನೇಹಿತೆ ಹೆಬ್ಬಾಳದ ವಿಜಯಲಕ್ಷ್ಮಿ ಮನೆಗೆ ಸಂತ್ರಸ್ತ ಯುವಕ ಹೋಗಿರುತ್ತಾರೆ. ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ವಿಜಯಲಕ್ಷ್ಮಿ ಪರಿಚಯ ಮಾಡಿಸುತ್ತಾಳೆ.
ಟೀ ತರುತ್ತೇನೆ ಎಂದು ಹೇಳಿ, ಯುವಕನಿಂದ ಕಮೀಷನ್ ಹಣ ಪಡೆದು ವಿಜಯಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳೆ. ಆ ಸಂದರ್ಭದಲ್ಲಿ ಮನೆಯಲ್ಲಿ ಯುವಕ ಮತ್ತು ಲೀಲಾವತಿ ಇಬ್ಬರೇ ಇರುತ್ತಾರೆ. ಈ ಸಂದರ್ಭದಲ್ಲಿ ಪೊಲೀಸರ ಹೆಸರಿನಲ್ಲಿ ಗೀತಾ, ಹರೀಶ್ ಮತ್ತು ವೆಂಕಟೇಶ್ ಮನೆಗೆ ಬರುತ್ತಾರೆ.
ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಾ ಎಂದು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಸಂತ್ರಸ್ತ ಆರೋಪಿಗಳಿಗೆ ಪೋನ್ಪೇ ಮೂಲಕ 50 ಸಾವಿರ ಹಣ ಕಳುಹಿಸಿದ್ದಾನೆ. ತಾನು ಮೋಸ ಹೋಗಿರುವುದು ಅರಿವಾದ ಬಳಿಕ ಯುವಕ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು 6ಆರೋಪಿಗಳನ್ನು ಬಂಧಿಸಿದ್ದಾರೆ.
ಲೋಕಾ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು
ಲಂಚ ಪಡೆಯುತ್ತಿದ್ದ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವ ಪ್ರಕರಣ ದೇವನಹಳ್ಳಿಯಲ್ಲಿ ನಡೆದಿದೆ. ಜಮೀನಿನ ಪೌತಿ ಖಾತೆ ಮಾಡಿಕೊಡಲು 2.25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳಾದ ಸುನೀಲ್ ಮತ್ತು ಮಡಿವಾಳಪ್ಪ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ನಿವಾಸಿ ಗೌತಮ್ ಎಂಬುವವರು ತಮ್ಮ ಪತ್ನಿಯ ಸಂಬಂಧಿಯೊಬ್ಬರ ಜಮೀನಿನ ಪೌತಿ ಖಾತೆ ಮಾಡಿಸಲು ದೇವನಹಳ್ಳಿಯ ವಿಜಯಪುರ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಜಮೀನಿನ ಸ್ಥಳ ಮಹಜರು ನಡೆಸಿದ್ದ ಅಧಿಕಾರಿಗಳು ವರದಿ ನೀಡಲು ರೂ.2.25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಗೌತಮ್ ದೂರು ನೀಡಿದ್ದು, ಲೋಕಾಯುಕ್ತ ಎಸ್‌ಪಿ ಪವನ್ ನೆಜ್ಜೂರ್ ನೇತೃತ್ವದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ದೂರುದಾರರು ಶುಕ್ರವಾರ ಸುನೀಲ್ ಮತ್ತು ಮಡಿವಾಳಪ್ಪಗೆ ಲಂಚ ನೀಡುವಾಗ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಹಣ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಜೆ ರಮೇಶ್ ತಿಳಿಸಿದ್ದಾರೆ.
