Odisha Train Accident: ಕರ್ನಾಟಕದಲ್ಲಿ ತಪ್ಪಿತ್ತು ದುರಂತ; ಸಂಪರ್ಕ ಕ್ರಾಂತಿ ಆಘಾತದಿಂದ ಎಚ್ಚೆತ್ತಿದ್ದರೆ ತಪ್ಪುತ್ತಿತ್ತು ಒಡಿಶಾ ಅಪಘಾತ
ಕನ್ನಡ ಸುದ್ದಿ  /  ಕರ್ನಾಟಕ  /  Odisha Train Accident: ಕರ್ನಾಟಕದಲ್ಲಿ ತಪ್ಪಿತ್ತು ದುರಂತ; ಸಂಪರ್ಕ ಕ್ರಾಂತಿ ಆಘಾತದಿಂದ ಎಚ್ಚೆತ್ತಿದ್ದರೆ ತಪ್ಪುತ್ತಿತ್ತು ಒಡಿಶಾ ಅಪಘಾತ

Odisha Train Accident: ಕರ್ನಾಟಕದಲ್ಲಿ ತಪ್ಪಿತ್ತು ದುರಂತ; ಸಂಪರ್ಕ ಕ್ರಾಂತಿ ಆಘಾತದಿಂದ ಎಚ್ಚೆತ್ತಿದ್ದರೆ ತಪ್ಪುತ್ತಿತ್ತು ಒಡಿಶಾ ಅಪಘಾತ

Indian Railways: ಇನ್ನೇನು ರೈಲು ಹೊರಡಬೇಕು ಎನ್ನುವಷ್ಟರಲ್ಲಿ ಲೋಕೋ ಪೈಲಟ್‌ನ ಮುನ್ನೆಚ್ಚರಿಕೆಯಿಂದ ಎದುರಿನಿಂದ ಬರುತ್ತಿದ್ದ ಗೂಡ್ಸ್‌ ರೈಲು ಬರುತ್ತಿದ್ದುದನ್ನು ಗಮನಿಸಿದರು. ಸಿಗ್ನಲ್‌ ನೀಡಿದ್ದ ಮಾರ್ಗದಲ್ಲಿ ಹೋಗಿದ್ದರೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಬಹುದಿತ್ತು.

ಒಡಿಶಾದ ಬಾಲಾಸೋರ್‌ ರೈಲು ಅಪಘಾತ (ಎಡಚಿತ್ರ). ಹೊಸದುರ್ಗ ರೋಡ್ ರೈಲು ನಿಲ್ದಾಣ (ಬಲಚಿತ್ರ)
ಒಡಿಶಾದ ಬಾಲಾಸೋರ್‌ ರೈಲು ಅಪಘಾತ (ಎಡಚಿತ್ರ). ಹೊಸದುರ್ಗ ರೋಡ್ ರೈಲು ನಿಲ್ದಾಣ (ಬಲಚಿತ್ರ)

ಮೈಸೂರು: ಭಾರತೀಯ ರೈಲ್ವೆಯ ಮೈಸೂರು ವಿಭಾಗದಲ್ಲಿ ನಾಲ್ಕು ತಿಂಗಳ ಹಿಂದೆ ಭಾರೀ ರೈಲು ಅಪಘಾತವೊಂದು ತಪ್ಪಿತ್ತು. ಈ ಘಟನೆಯು ಒಡಿಶಾದಲ್ಲಿ ಸಂಭವಿಸಿದಂತಹ (Odisha Train Accident) ರೀತಿಯಲ್ಲೇ ಭಾರೀ ರೈಲು ದುರಂತವನ್ನೇ ಹೋಲುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಫೆಬ್ರುವರಿ 8, 2023ರಂದು ಬೀರೂರು-ರಾಮಗಿರಿ ಸೆಕ್ಷನ್‌ನ ಹೊಸದುರ್ಗ ಕ್ರಾಸ್‌ ನಿಲ್ದಾಣದಲ್ಲಿ ನಡೆದಿದ್ದ ಘಟನೆ ಕುರಿತು ನೈರುತ್ಯ ರೈಲ್ಷೆ ಮುಖ್ಯ ಕಾರ್ಯಾಚರಣೆ ಅಧಿಕಾರಿ (Chief Operation officer) ಹರಿಶಂಕರ್‌ ವರ್ಮ ಉನ್ನತ ಅಧಿಕಾರಿಗಳಿಗೆ ಬರೆದ ಪತ್ರ ಈಗ ಬಹಿರಂಗವಾಗಿದ್ದು, ಈ ಘಟನೆಯೂ ಇದೀಗ ಸಿಬಿಐ ತನಿಖೆಯ ವ್ಯಾಪಿಗೆ ಒಳಪಡುವ ಸಾಧ್ಯತೆ ಇದೆ.

ನೈರುತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ವಿಭಾಗಕ್ಕೆ ಸೇರಿದ ಹೊಸದುರ್ಗ ಕ್ರಾಸ್‌ ನಿಲ್ದಾಣದಲ್ಲಿ ಬೆಂಗಳೂರಿನಿಂದ ಹೊಸದಿಲ್ಲಿಗೆ ಹೋಗಬೇಕಿದ್ದ ಸಂಪರ್ಕ ಕ್ರಾಂತಿ ರೈಲು ಗೂಡ್ಸ್‌ ರೈಲಿಗೆ ಡಿಕ್ಕಿಯಾಗುವುದು ತಪ್ಪಿತ್ತು. ಅಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬೆಂಗಳೂರಿನಿಂದ ಅರಸೀಕೆರೆ-ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಸಂಪರ್ಕ ಕ್ರಾಂತಿ ರೈಲು ಹೊಸದಿಲ್ಲಿಗೆ ಹೊರಟಿತ್ತು. ಬೀರೂರಿನಿಂದ ಬರುತ್ತಿದ್ದ ರೈಲು ಸಿಗ್ನಲ್‌ ಆಧರಿಸಿ ಮುಖ್ಯ ಮಾರ್ಗದ ಬದಲು ಇನ್ನೊಂದು ಮಾರ್ಗಕ್ಕೆ ಬಂದಿತ್ತು. ಎಲೆಕ್ಟ್ರಾನಿಕ್‌ ಆಧರಿತ ಸಿಗ್ನಲ್‌ ನೀಡುವ ವ್ಯವಸ್ಥೆ ಇದ್ದರೂ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಅದನ್ನು ಉಲ್ಲಂಘಿಸಿದ್ದರು.

ಇನ್ನೇನು ರೈಲು ಹೊರಡಬೇಕು ಎನ್ನುವಷ್ಟರಲ್ಲಿ ಲೋಕೋ ಪೈಲಟ್‌ನ ಮುನ್ನೆಚ್ಚರಿಕೆಯಿಂದ ಎದುರಿನಿಂದ ಬರುತ್ತಿದ್ದ ಗೂಡ್ಸ್‌ ರೈಲು ಬರುತ್ತಿದ್ದುದನ್ನು ಗಮನಿಸಿದರು. ರೈಲು ಮಾರ್ಗ ಬದಲಿಸಿತು. ಸಿಗ್ನಲ್‌ ನೀಡಿದ್ದ ಮಾರ್ಗದಲ್ಲಿ ಹೋಗಿದ್ದರೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಬಹುದಿತ್ತು. ಪೈಲಟ್‌ನ ಮುನ್ನೆಚ್ಚರಿಕೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿತ್ತು ಎಂದು ಪತ್ರದಲ್ಲಿ ವರ್ಮ ವಿವರಿಸಿದ್ದಾರೆ.

ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ರೈಲು ಹೊರಡುವ ಮುನ್ನ ನೀಡುವ ಸಿಗ್ನಲ್‌ಗಳು ಗೊಂದಲಕ್ಕೆ ಕಾರಣವಾಗುತ್ತಿದೆ. ರಿಲೇ ರೂಂ ಮೂಲಕವೇ ಮಾಹಿತಿ ನೀಡುವ ಬದಲು ಇಂಟರ್‌ ಲಾಕಿಂಗ್‌ ಹೊರಗಡೆಗೆ ಬಳಸಲು ಹೇಗೆ ಸಾಧ್ಯ? ಕೋಟ್ಯಂತರ ರೂ. ವೆಚ್ಚ ಮಾಡಿ ರೈಲ್ವೆ ಇಲಾಖೆಯ ವಿಶ್ವದರ್ಜೆಯ ಎಲೆಕ್ಟ್ರಾನಿಕ್‌ ಆಧರಿತ ಲೈನ್‌ ಸಿಗ್ನಲ್‌ ವ್ಯವಸ್ಥೆ ರೂಪಿಸಲಾಗಿದೆ. ತಂತ್ರಜ್ಞಾನ ಆಧರಿತ ಇಂತಹ ಸೇವೆ ಸುರಕ್ಷತೆಗೆ ಒತ್ತು ನೀಡುವ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಮಂಡಳಿಯು ರಿಲೇ ರೂಂಗಳನ್ನು ಹೇಗೆ ಬಳಕೆ ಮಾಡಬೇಕು. ರೈಲುಗಳ ಸಂಚಾರದಲ್ಲಿ ರಿಲೇ ರೂಂಗಳ ಪಾತ್ರವೇ ಮುಖ್ಯ ಎನ್ನುವುದಕ್ಕೆ ಮಾನದಂಡಗಳನ್ನು ರೂಪಿಸಿದೆ. ರಿಲೇರೂಂ ತೆರೆಯುವುದಕ್ಕೂ ಅದರದ್ದೇ ಆದ ನಿಯಮಗಳಿವೆ. ಹೀಗಿದ್ದಾಗ್ಯೂ ಆಗುತ್ತಿರುವ ಗೊಂದಗಳನ್ನುಸರಿಪಡಿಸಿ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅಪಘಾತ ರಹಿತ ವಲಯಗಳನ್ನಾಗಿ ರೂಪಿಸಲು ನನ್ನ ಈ ಸಲಹೆಗಳನ್ನು ಪೂರಕ ನೆಲೆಯಲ್ಲಿ ಸ್ವೀಕರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಘಟನೆ ನಡೆದದ್ದು ನಿಜ. ಯಾವುದೇ ಅನಾಹುತ ಆಗದೇ ಇದ್ದುದರಿಂದ ವಿಭಾಗದ ಹಂತದಲ್ಲೇ ಬಗೆಹರಿದಿತ್ತು. ಅಲ್ಲದೇ ವಿಚಾರಣೆ ನಡೆಸಿದ್ದಾಗ ಸಿಬ್ಬಂದಿ ದುರುದ್ದೇಶದಿಂದ ಮಾಡದೇ ಇರುವುದು ತಿಳಿದಿತ್ತು. ಮಾಹಿತಿ ಸಂವಹನ ಕೊರತೆ ಹಾಗೂ ತಂತ್ರಜ್ಞಾನ ಬಳಕೆ ಗೊಂದಲದಿಂದ ಆಗಿರುವುದು ಗೊತ್ತಾಗಿತ್ತು. ಈಗ ಒಡಿಶಾ ಘಟನೆ ಹಿನ್ನೆಲೆಯಲ್ಲಿ ಹೊಸದುರ್ಗ ಕ್ರಾಸ್‌ ಘಟನೆ ಕುರಿತಾಗಿಯೂ ತನಿಖೆಯಾಗಬಹುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Whats_app_banner