Ration card: ಕರ್ನಾಟಕದಲ್ಲಿ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ರೇಷನ್ ಕಾರ್ಡ್ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
How to apply for ration card in karnataka: ಕರ್ನಾಟಕದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ, ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವೆಲ್ಲ ದಾಖಲೆಗಳು ಬೇಕು? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಲಾಗಿದೆ.

How to apply for ration card in karnataka: ಕರ್ನಾಟಕದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ, ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವೆಲ್ಲ ದಾಖಲೆಗಳು ಬೇಕು? ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಎಲ್ಲಿ ದೊರೆಯುತ್ತದೆ? ಅರ್ಜಿ ಸಲ್ಲಿಸುವಾಗ ಮನೆಯ ವಿದ್ಯುತ್ ಮೀಟರ್ ನಂಬರ್ ನೀಡುವುದು ಕಡ್ಡಾಯವೇ? ಮನೆಯ ಆಸ್ತಿ ತೆರಿಗೆ ನಂಬರನ್ನೂ ನೀಡಬೇಕೆ? ನಾನಿನ್ನೂ ಮದುವೆಯಾಗಿಲ್ಲ, ಆದರೆ ನನ್ನ ಮೂಲ ಕುಟುಂಬದಿಂದ ಬೇರೆಯಾಗಿರುತ್ತೇನೆ. ನಾನು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೇ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು.
ಕರ್ನಾಟಕದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಕಡ್ಡಾಯವಾಗಿ ಆಯಾ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬಹುದು. ನಗರ ಹಾಗೂ ಪಟ್ಟಣ ಪ್ರದೇಶದವರು ಖಾಸಗಿ ಕಂಪ್ಯೂಟರ್ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯಾ ಪ್ರದೇಶದ ತಾಲೂಕು ಕಛೇರಿ, ಆಹಾರ ಸಹಾಯಕ ನಿರ್ದೇಶಕರ ಕಛೇರಿ ಅಥವಾ ಉಪನಿರ್ದೇಶಕರ ಕಛೇರಿಗಳಲ್ಲಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ವೆಬ್‌ವಿಳಾಸ: ahara.karnataka.gov.in
ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರ ಬಳಿ ಇರಬೇಕಾದ ದಾಖಲೆಗಳು ಹಾಗೂ ಮಾಹಿತಿಗಳು ಯಾವುವು?
ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಬಳಿ ಈ ಕೆಳಕಂಡ ದಾಖಲೆಗಳು ಹಾಗೂ ಮಾಹಿತಿಯನ್ನು ಇಟ್ಟುಕೊಂಡಲ್ಲಿ ಆನ್‌ಲೈನ್ ಸಲ್ಲಿಕೆ ಮಾಡುವುದು ಸುಲಭವಾಗುತ್ತದೆ. ಆದರೆ, ಅರ್ಜಿ ಸಲ್ಲಿಸುವಾಗ ಕಛೇರಿಯಲ್ಲಿ ಯಾವುದೇ ದಾಖಲೆಗಳ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ.
ಎ) ಗ್ರಾಮಾಂತರ ಪ್ರದೇಶದವರು
ನಿಮ್ಮ ಗ್ರಾಮ ಪಂಚಾಯಿತಿ ಹೆಸರು, ನೀವು ವಾಸಿಸುವ ಮನೆ ವಿಳಾಸ, ಮನೆ ಆಸ್ತಿ ಸಂಖ್ಯೆ ವಿವರ, ವಿದ್ಯುತ್ ಸಂಪರ್ಕ ಬಿಲ್ಲಿನ ಪ್ರತಿ, ಕುಟುಂಬದ ಎಲ್ಲಾ ಸದಸ್ಯರ ಹೆಸರು, ಸದಸ್ಯರು ಅರ್ಜಿದಾರರ ಜತೆ ಹೊಂದಿರುವ ಸಂಬಂಧ, ಎಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ವಾರ್ಷಿಕ ವರಮಾನ ಮಾಹಿತಿ ನೀಡಬೇಕು. ಈಗ ಇರುವ ಮನೆಯಲ್ಲಿ ಎಷ್ಟು ಸಮಯದಿಂದ ಇದ್ದೀರಿ ಎಂಬ ಮಾಹಿತಿ, ಅಡುಗೆ ಅನಿಲ ಸರಬಾರಜಿನ ಇತ್ತೀಚಿನ ಬಿಲ್ ನೀಡಬೇಕು.
ಬಿ) ನಗರ/ಪಟ್ಟಣ ಪ್ರದೇಶದವರು
1. ನೀವು ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ
2. ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ (ಬಿ.ಬಿ.ಎಂ.ಪಿ ಪ್ರದೇಶ)ದವರು ಆಗಿದ್ದರೆ ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ (ಇದನ್ನು ಸುಲಭವಾಗಿ ತಿಳಿಯಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯವರನ್ನು ಸಂಪರ್ಕಿಸಿ, ಇಲ್ಲವೇ ನಿಮ್ಮ ನೆರೆಹೊರೆಯವರಲ್ಲಿ ಈಗಾಗಲೇ ಲಭ್ಯವಿರುವ ಪಡಿತರ ಚೀಟಿಯನ್ನು ನೋಡಿ ತಿಳಿಯಿರಿ).
3. ನಿಮ್ಮ ಮನೆಯ ವಿದ್ಯುತ್ ಬಿಲ್, (ವಿದ್ಯುತ್ ಸಂಪರ್ಕವಿಲ್ಲದವರು ವಿದ್ಯುತ್ ಸಂಪರ್ಕವಿಲ್ಲವೆಂದು ಅರ್ಜಿಯಲ್ಲಿ ಘೋಷಿಸಬೇಕು.)
4. ನಿಮ್ಮ ನಿವಾಸದ ಪೂರ್ಣ ವಿಳಾಸ, (ಕಡ್ಡಾಯವಾಗಿ ಅಂಚೆಪಿನ್ ಕೋಡ್‍ನೊಂದಿಗೆ). ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಮಾಹಿತಿ ನೀಡಬೇಕು.
5. ಕುಟುಂಬದ ಸದಸ್ಯರ ವಿವರ, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
7. ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆಯನ್ನು ನೀಡುವುದು.
8. ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ.
9. ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ/ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ.
(ವಿ.ಸೂ: ಮೇಲೆ ಪಟ್ಟಿ ಮಾಡಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಮಾತ್ರ ನೀವು ಆನ್ ಲೈನ್ ಮೂಲಕ ಅರ್ಜಿಸಲ್ಲಿಸುವ ಕೆಲಸ ಯಾವುದೇ ತಪ್ಪಿಲ್ಲದೇ ಮಾಡಬಹುದು. ಈ ದಾಖಲೆಗಳನ್ನು ಕಛೇರಿಗೆ ಸಲ್ಲಿಸುವ ಅಗತ್ಯವಿಲ್ಲ. ನಿಮ್ಮ ಸ್ಥಳ ತನಿಖೆಗೆ ಬಂದಾಗ ಇವುಗಳನ್ನು ಹಾಜರಪಡಿಸುವುದು ಕಡ್ಡಾಯ).
4) ಅರ್ಜಿ ಸಲ್ಲಿಸುವಾಗ ಮನೆಯ ವಿದ್ಯುತ್ ಮೀಟರ್ ನಂಬರ್ ನೀಡುವುದು ಕಡ್ಡಾಯವೇ?
ಹೌದು. ನಿಮ್ಮ ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್.ಆರ್.ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ. ವಿದ್ಯುತ್ ಸಂಪರ್ಕ ನಿಮ್ಮ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿರಲು ಅಥವಾ ನಿಮ್ಮ ಮನೆ ಮಾಲೀಕರ ಹೆಸರಿನಲ್ಲಿರಲಿ, ಅದೇ ಆರ್.ಆರ್.ನಂಬರ್ ನೀಡುವುದು ಕಡ್ಡಾಯ. ತಮ್ಮ ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್ ಸಂಪರ್ಕ ಇಲ್ಲ / ತಮ್ಮ ಮನೆಗೆ ಅಧಿಕೃತ ವಿದ್ಯುತ್ ಮೀಟರ್ ಇಲ್ಲ / ತಮ್ಮದು ಭಾಗ್ಯಜ್ಯೋತಿ ಸಂಪರ್ಕ / ತಮ್ಮದು ಗ್ರೂಪ್ ಕ್ವಾರ್ಟರ್ಸ್ ಆಗಿದ್ದು ಎಲ್ಲರಿಗೂ ಸಾಮಾನ್ಯ ಮೀಟರ್ ಇದೆ., ಹೀಗೆ ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.
5). ಮನೆಯ ಆಸ್ತಿ ತೆರಿಗೆ ನಂಬರನ್ನೂ ನೀಡಬೇಕೆ?
ಹೌದು. ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಗ್ರಾಮಪಂಚಾಯಿತಿ ನೀಡಿರುವ ಆಸ್ತಿ ತೆರಿಗೆ ನಂಬರನ್ನು ನೀಡಬೇಕು. ನಿಮ್ಮ ಮನೆಗೆ ಆಸ್ತಿ ತೆರಿಗೆ ನಂಬರ್ ಇಲ್ಲದಿದ್ದರೆ ನಿಮ್ಮ ಮನೆಯಿರುವ ಜಾಗದ ಸರ್ವೇ ನಂಬರನ್ನು ಕಡ್ಡಾಯವಾಗಿ ನೀಡಬೇಕು. ಇದು ನಿಮಗೆ ಗೊತ್ತಿಲ್ಲದಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಿಂದ/ಗ್ರಾಮಲೆಕ್ಕಿಗರಿಂದ ಪಡೆಯಿರಿ. ನಗರ/ಪಟ್ಟಣ ಪ್ರದೇಶದವರೂ ತಮ್ಮ ನಿವಾಸದ ಆಸ್ತಿ ತೆರಿಗೆ ನಂಬರ್ ಲಭ್ಯವಿಲ್ಲದೆ ಇದ್ದರೆ ನೀಡಬೇಕು. ಆದರೆ ನಗರ/ಪಟ್ಟಣ ಪ್ರದೇಶದವರು ತಮ್ಮ ಮನೆ ವಿದ್ಯುತ್ ಆರ್.ಆರ್. ವಿವರ ನೀಡುವುದು ಮಾತ್ರ ಕಡ್ಡಾಯ. ತಮ್ಮ ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್ ಸಂಪರ್ಕ ಇಲ್ಲ / ತಮ್ಮ ಮನೆಗೆ ಅಧಿಕೃತ ವಿದ್ಯುತ್ ಮೀಟರ್ ಇಲ್ಲ / ತಮ್ಮದು ಭಾಗ್ಯಜ್ಯೋತಿ ಸಂಪರ್ಕ / ತಮ್ಮದು ಗ್ರೂಪ್ ಕ್ವಾರ್ಟರ್ಸ್ ಆಗಿದ್ದು ಎಲ್ಲರಿಗೂ ಸಾಮಾನ್ಯ ಮೀಟರ್ ಇದೆ., ಹೀಗೆ ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.
7) ನಾನಿನ್ನೂ ಮದುವೆಯಾಗಿಲ್ಲ, ಆದರೆ ನನ್ನ ಮೂಲ ಕುಟುಂಬದಿಂದ ಬೇರೆಯಾಗಿರುತ್ತೇನೆ. ನಾನು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೇ?
ಹೌದು, ಸಲ್ಲಿಸಬಹುದು, ಆದರೆ ನೀವು ನಿಮ್ಮ ಮೂಲ ಕುಟುಂಬದ ಪೋಷಕರು ಈಗ ವಾಸಿಸುತ್ತಿರುವ ಪೂರ್ಣ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಹಾಗೂ ನೀವು ಮೂಲ ಕುಟುಂಬದಿಂದ ಬೇರೆಯಾಗಿದ್ದು, ಆ ಪಡಿತರ ಚೀಟಿಯಿಂದ ನಿಮ್ಮ ಹೆಸರನ್ನು ಬೇರ್ಪಡಿಸಿರುವ Deletion Certificate (ವರ್ಜಿತ ಪ್ರಮಾಣ ಪತ್ರ) ಸರ್ಟಿಫಿಕೇಟ್ ಒದಗಿಸಬೇಕು.
8) ನಾವು ಬೇರೆ ಊರಿಂದ ಬಂದಿದ್ದೇವೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೆ?
ಸಲ್ಲಿಸಬಹುದು, ಆದರೆ ನಿಮ್ಮ ಈ ಹಿಂದೆ ಇದ್ದ ಪಡಿತರ ಚೀಟಿಯನ್ನು ಸರೆಂಡರ್ ಮಾಡಿರುವ ಸರ್ಟಿಫಿಕೇಟ್ ಸಲ್ಲಿಸಬೇಕು.
9)ಅರ್ಜಿ ಸಲ್ಲಿಸುವಾಗ ನನ್ನ ವರಮಾನದ ವಿವರ ನೀಡಬೇಕೆ?
ಹೌದು, ನೀವು ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಉದ್ಯೋಗ ಮತ್ತು ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ವರಮಾನವನ್ನು ಕಡ್ಡಾಯವಾಗಿ ಘೋಷಣೆ ಮಾಡಬೇಕು.
10) ನಾವು ಬಾಡಿಗೆ ಮನೆಯಲ್ಲಿದ್ದೇವೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೆ?
ಹೌದು, ಸಲ್ಲಿಸಿ, ಆದರೆ ನೀವು ಪಾವತಿಸುತ್ತಿರುವ ಮಾಸಿಕ ಬಾಡಿಗೆಯನ್ನು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡುವುದನ್ನು ಮರೆಯಬಾರದು.
10. ನನ್ನ ಬಳಿ ನಾನು ಇತ್ತೀಚೆಗೆ ಪಡೆದಿರುವ ಆಧಾರ್ ಕಾರ್ಡ್ ನಂಬರಿದೆ ಅದನ್ನು ನೀಡಬೇಕೆ?
ಹೌದು. ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ನಂಬರಿದ್ದರೆ ಕಡ್ಡಾಯವಾಗಿ ಅದನ್ನು ಸಹ ಅರ್ಜಿ ಸಲ್ಲಿಸುವಾಗ ನೀಡಿ.
12) ನನ್ನ ಮನೆಯ ಆಸ್ತಿ ತೆರಿಗೆ ನಂಬರನ್ನು ನೀಡಬೇಕೆ?
ಹೌದು, ನಿಮ್ಮ ಮನೆಯ ಆಸ್ತಿ ತೆರಿಗೆ ನಂಬರನ್ನು ನೀಡಿದರೆ ಬೇರೆ ಯಾರೂ ನಿಮ್ಮ ಅರಿವಿಲ್ಲದೆ ನಿಮ್ಮ ಮನೆಯ ವಿಳಾಸದಲ್ಲಿ ಇನ್ನೊಂದು ಪಡಿತರ ಚೀಟಿ ಪಡೆಯುವುದನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಾಗುವುದು.
13) ನಾನು ಅರ್ಜಿಯಲ್ಲಿ ಭರ್ತಿ ಮಾಡುವ ವಿವರದ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ನೀಡಬೇಕೆ?
ಹೌದು, ನೀವು ಅರ್ಜಿಯಲ್ಲಿ ನೀಡುವ ಎಲ್ಲಾ ವಿವರಗಳ ಬಗ್ಗೆ ನಿಮ್ಮಲ್ಲಿರುವ ಮೂಲ ದಾಖಲೆಗಳನ್ನು ಆಹಾರ ನಿರೀಕ್ಷಕರು ನಿಮ್ಮ ಅರ್ಜಿ ಪರಿಶೀಲನೆ ಪ್ರಯುಕ್ತ ಸ್ಥಳ ತನಿಖೆಗಾಗಿ ಬಂದಾಗ ಕಡ್ಡಾಯವಾಗಿ ಪರಿಶೀಲನೆಗೆ ಹಾಜರುಪಡಿಸಬೇಕು.
14) ನನ್ನ ಹುಟ್ಟಿದ ದಿನಾಂಕ ತಿಳಿಸಬೇಕೆ?
ಹೌದು, ನಿಮ್ಮ ಮತ್ತು ಎಲ್ಲಾ ಕುಟುಂಬ ಸದಸ್ಯರ ಹುಟ್ಟಿದ ದಿನಾಂಕವನ್ನು ಕಡ್ಡಾಯವಾಗಿ ಭರ್ತಿ ಮಾಡಿ. ಒಂದು ವೇಳೆ ನಿಜವಾದ ದಿನಾಂಕ ಗೊತ್ತಿಲ್ಲದಿದ್ದರೆ, ಹುಟ್ಟಿದ ವರ್ಷವನ್ನು ಭರ್ತಿ ಮಾಡುವುದಂತೂ ಕಡ್ಡಾಯ.
ಮಾಹಿತಿ ಕೃಪೆ: ahara.karnataka.gov.in
