ಕನ್ನಡ ಸುದ್ದಿ  /  Karnataka  /  Ht Kannada Editorial On Rain Woes Of Karnataka Rain Problems Of Bengaluru Suggestions To Improve City Planning Dmg

ಸಂಪಾದಕೀಯ: ಮರೆತೇ ಹೋಗುತ್ತಿದೆ ಮಳೆ ಎಂಬ ಸಂಭ್ರಮ, ಈಗ ಮಳೆಯೆಂದರೆ ಕಣ್ಮುಂದೆ ಬರುವುದು ಸಂಕಟವಷ್ಟೇ

ಬೆಂಗಳೂರನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಮೊದಲು ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳು, ಇಲಾಖೆಗಳ ನಡುವೆ ಸಮನ್ವಯ ಮೂಡಿಸುವ ಕೆಲಸ ಮಾಡಲಿ. ನಗರ ಯೋಜನಾ ವಿಭಾಗದ ಅಧಿಕಾರಿಗಳ ವಿಶೇಷ ಸಭೆಗಳನ್ನು ನಿಯಮಿತವಾಗಿ ನಡೆಸಿ ಕಿವಿಹಿಂಡದಿದ್ದರೆ ಪರಿಸ್ಥಿತಿ ಇನ್ನೆಷ್ಟು ವರ್ಷ ಕಳೆದರೂ ಸುಧಾರಿಸದು.

ಬೆಂಗಳೂರು ನಗರದಲ್ಲಿ ಮಳೆ (ಸಂಗ್ರಹ ಚಿತ್ರ)
ಬೆಂಗಳೂರು ನಗರದಲ್ಲಿ ಮಳೆ (ಸಂಗ್ರಹ ಚಿತ್ರ) (PTI)

ಬೆಂಗಳೂರಿನಂಥ ಮಹಾನಗರಗಳಲ್ಲಿ ಮಳೆ ಬಂದರೆ ಸಂಭ್ರಮಿಸುವವರು ಬಹಳ ಕಡಿಮೆ. ಬೆಳಿಗ್ಗೆ ಆಫೀಸಿನ ಧಾವಂತ, ಸಂಜೆಗೆ ಮನೆಗೆ ಹೋಗುವ ಆತುರ, ಮಧ್ಯಾಹ್ನಕ್ಕೆ ಬಂದರೆ ಮನೆ ಸೇರಲು ಆಗದು. ಹೀಗೆ ಬಹುತೇಕ ಬೆಂಗಳೂರು ನಿವಾಸಿಗಳಿಗೆ ಮಳೆರಾಯನೆಂದರೆ ಬೇಡದ ಅತಿಥಿ. ಆದರೆ ಜನರ ಕಷ್ಟಸುಖ ನೋಡಿ ತನ್ನ ಕೆಲಸ ಮಾಡುತ್ತಾನೆಯೇ ಮಳೆರಾಯ? ಎಂದಿಗೂ ಇಲ್ಲ. ಬರಬೇಕು ಎನಿಸಿದಾಗ ಬಂದ, ಹೋಗಬೇಕು ಎನಿಸಿದಾಗ ಹೋದ. ಜನರು ಸಂಭ್ರಮಿಸಿದರೂ, ಬೈದುಕೊಂಡರೂ ಅದರಿಂದ ಮಳೆರಾಯನಿಗೆ ಆಗಬೇಕಾದ್ದು ಏನೂ ಇಲ್ಲ. ಅವನಿಗೆ ಬೆಂಗಳೂರು ದೊಡ್ಡದಲ್ಲ, ಕಲಬುರ್ಗಿ ಸಣ್ಣದಲ್ಲ.

ಟ್ರೆಂಡಿಂಗ್​ ಸುದ್ದಿ

ಆದರೆ ಮಳೆ ಎನ್ನುವುದು ನಗರವಾಸಿಗಳ ಪಾಲಿಗೆ ಸಂಭ್ರಮವಾಗಿ ಉಳಿದೇ ಇಲ್ಲ. ಕರ್ನಾಟಕದ ಯಾವುದೇ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು, ಅಷ್ಟೇಕೆ ದೊಡ್ಡ ಪಟ್ಟಣಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದು ಸುಮ್ಮನೆ ಒಮ್ಮೆ ಸುತ್ತಾಡಿದರೂ ತಿಳಿಯುತ್ತದೆ. ಐದು-ಹತ್ತು ವರ್ಷಗಳ ಹಿಂದೆ ಸರಾಗವಾಗಿ ಚರಂಡಿ ಸೇರುತ್ತಿದ್ದ, ಆ ಮೂಲಕ ಕೆರೆ ಸರಪಳಿಗಳ ಭಾಗವಾಗುತ್ತಿದ್ದ ಮಳೆನೀರಿಗೆ ಈಗ ರಸ್ತೆಯೇ ದೊಡ್ಡ ಚರಂಡಿ. ಏಕೆಂದರೆ ಕರ್ನಾಟಕದ ಬಹುಪಾಲು ನಗರ-ಪಟ್ಟಣಗಳಲ್ಲಿ ಕಳೆದ ಐದು ವರ್ಷಗಳಲ್ಲಿ ರಸ್ತೆಗಳು ರಿಪೇರಿಯಾಗಿವೆ, ವಿಸ್ತರಣೆಯಾಗಿವೆ.

ರಸ್ತೆಗಳು ಈಗ ತಲುಪಿರುವ ಪರಿಸ್ಥಿತಿ ನೋಡಿದರೆ ರಿಪೇರಿ-ವಿಸ್ತರಣೆ ಮಾಡುವ ಸಂದರ್ಭದಲ್ಲಿ ನಗರಾಡಳಿತ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಲ್ಲಿ 'ಮುಂದೆಂದೂ ಈ ಊರಿನಲ್ಲಿ ಮಳೆಯೇ ಬರುವುದಿಲ್ಲ' ಎಂಬ ಮನೋಭಾವವೇ ವಿಜೃಂಭಿಸಿರುವಂತೆ ಭಾಸವಾಗುತ್ತದೆ. ಅಭಿವೃದ್ಧಿಯ ನೆಪದಲ್ಲಿ ರಸ್ತೆ ದೊಡ್ಡದಾಯಿತು, ಬಹುತೇಕ ರಸ್ತೆಗಳ ಪಕ್ಕದಲ್ಲಿಯೇ ಇದ್ದ ಮಳೆಗಾಲುವೆಯಂಥ ಚರಂಡಿಗಳನ್ನು ಕ್ರಾಂಕ್ರೀಟ್ ಸ್ಲಾಬ್ ಹಾಕಿ ಮುಚ್ಚಲಾಯಿತು.

ಅಭಿವೃದ್ಧಿಯ ವೇಗ ಎಷ್ಟು ತೀವ್ರವಾಗಿದೆ ಎಂದರೆ ರಾಜ್ಯದ ನಗರ, ಪಟ್ಟಣ, ಹಳ್ಳಿಗಳ ಗಲ್ಲಿಗಲ್ಲಿಗಳೂ ಈಗ ಕಾಂಕ್ರೀಟ್ ರಸ್ತೆ ಪಡೆದಿವೆ. ಕಾಂಕ್ರಿಟ್ ರಸ್ತೆಗಳನ್ನು ಅಭಿವೃದ್ಧಿಯ ಮಾನದಂಡ ಎಂದುಕೊಂಡರೆ ಕರ್ನಾಟಕ ಇದರಲ್ಲಿ ಬಹಳ ಮುಂದಿದೆ. ಕಿತ್ತುಹೋದ ರಸ್ತೆಗಳನ್ನು ಭ್ರಷ್ಟಾಚಾರದ ಮಾನದಂಡ ಎಂದುಕೊಂಡರೆ ಕರ್ನಾಟಕದ ಸ್ಥಾನವು ಅದರಲ್ಲಿಯೂ ಮೊದಲ ಸಾಲಿನಲ್ಲಿಯೇ ಇರುತ್ತದೆ. ಪ್ರಮುಖ ರಸ್ತೆಗಳಷ್ಟೇ ಅಲ್ಲ, ಮನೆ ಮುಂದಿನ ಒಳರಸ್ತೆಗಳಲ್ಲಿಯೂ ನೀರು ಚರಂಡಿ ಸೇರದೆ ಬೀದಿಯಲ್ಲಿಯೇ ನಿಲ್ಲುತ್ತದೆ, ಹರಿಯುತ್ತದೆ ಎನ್ನುವುದನ್ನು ನೀವು ಎಂಜಿನಿಯರಿಂಗ್ ವೈಫಲ್ಯದ ಮಾನದಂಡ ಎಂದುಕೊಂಡರೆ ಕರ್ನಾಟಕದ ಬಹುತೇಕ ಎಲ್ಲ ಹಳ್ಳಿ-ಪಟ್ಟಣ-ನಗರಗಳಲ್ಲಿಯೂ ಸಾಕಷ್ಟು ಸಾಕ್ಷ್ಯಗಳು ಕಣ್ಣಿಗೆ ರಾಚುತ್ತವೆ.

ಮಳೆಯನ್ನು ಒಂದು ಸಮಸ್ಯೆಯಾಗಿಸುವಲ್ಲಿ ಅಭಿವೃದ್ಧಿ, ಭ್ರಷ್ಟಾಚಾರ ಮತ್ತು ಎಂಜಿನಿಯರಿಂಗ್ ವೈಫಲ್ಯದ ಜೊತೆಗೆ ಜನರ ಅಸೀಮ ನಿರ್ಲಕ್ಷ್ಯವೆಂಬ ಮತ್ತೊಂದು ಅಂಶದ ಕೊಡುಗೆಯೂ ದೊಡ್ಡದು. ಮಳೆ ಬಂದಾಗ ರಸ್ತೆ ತುಂಬೆಲ್ಲಾ ನೀರು ಹರಿದು ವಿಶ್ವವಿದ್ಯಮಾನವಾಗುವ ಬೆಂಗಳೂರು ನಗರ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುತ್ತದೆ. ಆದರೆ ಮಳೆ ಸುರಿಯುವಾಗ ಅದರ ನೀರು ಸಂಗ್ರಹಿಸಿಕೊಳ್ಳಬೇಕೆಂಬ, ನೀರಿನ ಕಾಳಜಿ ಮಾಡಬೇಕೆಂಬ ವ್ಯವಧಾನ ಇರುವವರ ಸಂಖ್ಯೆ ಬಹುಕಡಿಮೆ. ಕೆಲವರು ನಾಮಕಾವಾಸ್ತೆ ಅಳವಡಿಸಿಕೊಂಡಿದ್ದಾರಾದರೂ ಫಿಲ್ಟರ್ ನಿರ್ವಹಣೆಯ ಉಸಾಬರಿಯೇ ಬೇಡವೆಂದು ಚರಂಡಿಗೆ ಬಿಡುವುದೇ ಹೆಚ್ಚು.

ಇಂಥದ್ದನ್ನೆಲ್ಲಾ ಜನರ ಗಮನಕ್ಕೆ ತಂದು, ತಾಕೀತು ಮಾಡಿ, ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಮನೆಗಳಲ್ಲಿ ಅಳವಡಿಸಲು ಒತ್ತಾಯಿಸಬೇಕಿದ್ದ ಬಿಬಿಎಂಪಿ ಏನು ಮಾಡುತ್ತಿದೆ ಎಂದು ನೀವು ಕೇಳಬಹುದು. ಬೇಸಿಗೆಯಲ್ಲಿ ರಾಜಕಾಲುವೆಯ ಹೂಳೆತ್ತುವುದು, ಮಳೆಗಾಲದಲ್ಲಿ ಅಂಡರ್‌ಪಾಸ್‌ಗಳಿಗೆ ಪಂಪ್ ಇರಿಸಿ ನೀರೆತ್ತುವುದು, ಅದು ಬಿಟ್ಟರೆ ಅಕ್ರಮ ಕಟ್ಟಡಗಳನ್ನು ಗುರುತಿಸುವುದು, ಆಗಾಗ ಕೋರ್ಟ್‌ ತಪರಾಕಿ ಕೊಟ್ಟಾಗ ಕಟ್ಟಡ ಮಾಲೀಕರಿಗೆ ನೊಟೀಸ್ ಕೊಟ್ಟು ಬೆದರಿಸಿ ಬೆಚ್ಚಗಾಗಿಸಿಕೊಳ್ಳುವುದು. ಇಷ್ಟೆಲ್ಲಾ ಕೆಲಸಗಳ ಮಧ್ಯೆ ಜನರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸಮಯವಾದರೂ ಎಲ್ಲಿ ಸಿಗಬೇಕು? ಅಧಿಕಾರಿಗಳ ಪಾಲಿಗೆ ಮಳೆ ಎನ್ನುವುದು ಇತ್ತೀಚೆಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ.

ದಿಕ್ಕುದೆಸೆಯಿಲ್ಲದ ಅಭಿವೃದ್ಧಿಯ ಅನೂಹ್ಯ ವೇಗ, ಕಣ್ಣೆದುರೇ ಕಣ್ಮುಚ್ಚುತ್ತಿರುವ ಕೆರೆಗಳು, ಮಣ್ಣೇ ಇಲ್ಲದ ಕಾಂಕ್ರಿಟ್ ರಸ್ತೆಗಳು, ಮಳೆ ಬರಬಹುದು ಎನ್ನುವುದನ್ನೇ ಮರೆತ ನಗರ ಯೋಜನಾ ಎಂಜಿನಿಯರ್‌ಗಳು, ನಲ್ಲಿ ತಿರುಗಿಸಿದಾಗ ನೀರು ಬಂದರಷ್ಟೇ ಸಾಕು ಎನ್ನುವ ಧೋರಣೆಯ ಜನತೆ ಇದ್ದಾಗ ಮಳೆರಾಯನನ್ನು ಒಲಿಸಿಕೊಳ್ಳುವ ವ್ಯವಧಾನ ಯಾರಿಗೆ ತಾನೆ ಇರಲು ಸಾಧ್ಯ? ಮಳೆ ಬಂದರೂ ಕಷ್ಟ, ಬಾರದಿದ್ದರೆ ಕೇಳುವುದೇ ಬೇಡ. ಬಂದರೆ ವರುಣಾರ್ಭಟ, ಹೋದರೆ ಕರುಣೆಯಿಲ್ಲದ ವರುಣ ದೇವ. ಒಟ್ಟಿನಲ್ಲಿ ಜನರಿಂದ ಬೈಗುಳ ತಿನ್ನಲು ಮಳೆರಾಯ ಸದಾ ಸಿದ್ಧನಿರಬೇಕು.

ನಗರ ವಿನ್ಯಾಸದ ಯೋಜನೆಗಳು ಸುಧಾರಿಸುವವರೆಗೆ ಕರ್ನಾಟಕದ ಈ ಪರಿಸ್ಥಿತಿ ಬದಲಾಗುವುದಿಲ್ಲ. ಕಟ್ಟಡ-ರಸ್ತೆಗಳ ವಿನ್ಯಾಸವನ್ನು ಭೂ ಮೇಲ್ಮೈಗೆ ಅನುಗುಣವಾಗಿ ಅಳವಡಿಸಬೇಕು. ನೀರು ಹರಿಯುವ ಮಾರ್ಗ ತಡೆ ರಹಿತವಾಗಿರಬೇಕು ಎಂಬ ತೀರಾ ಸಾಮಾನ್ಯ ಸಂಗತಿಗೆ ಬೆಲೆ ಕೊಟ್ಟರೆ ಮಾತ್ರ ನಾವು 'ಬಾ ಮಳೆಯೇ ಬಾ' ಎಂದು ಸಂಭ್ರಮಿಸಲು ಸಾಧ್ಯ. ಇಲ್ಲದಿದ್ದರೆ 'ಯಾಕಾದರೂ ಮಳೆ ಬಂತೋ' ಎಂಬ ಹಳಹಳಿಕೆಯೇ ಶಾಶ್ವತವಾಗಿ ಸಂಭ್ರಮದ ಆಯಾಮವನ್ನೇ ಮರೆಯಬೇಕಾಗುತ್ತದೆ.

ಬೆಂಗಳೂರನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಮೊದಲು ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎ ಸೇರಿದಂತೆ ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳು, ಇಲಾಖೆಗಳ ನಡುವೆ ಸಮನ್ವಯ ಮೂಡಿಸುವ ಕೆಲಸ ಮಾಡಲಿ. ಬೆಂಗಳೂರು ಒಂದು ಮಾದರಿಯಾದರೆ ಅದನ್ನು ಕರ್ನಾಟಕದ, ಭಾರತದ ಇತರ ನಗರಗಳು ಸುಲಭವಾಗಿ ಅನುಸರಿಸುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಪ್ರಯತ್ನಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ನಗರ ಯೋಜನಾ ವಿಭಾಗದ ಅಧಿಕಾರಿಗಳ ವಿಶೇಷ ಸಭೆಗಳನ್ನು ಇವರಿಬ್ಬರೂ ನಿಯಮಿತವಾಗಿ ನಡೆಸಿ ಕಿವಿಹಿಂಡದಿದ್ದರೆ ಪರಿಸ್ಥಿತಿ ಇನ್ನೆಷ್ಟು ವರ್ಷ ಕಳೆದರೂ ಸುಧಾರಿಸದು.

(ಸಂಪಾದಕೀಯದ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆ, ಪ್ರತಿಕ್ರಿಯೆಗಳಿಗೆ ಸ್ವಾಗತ. ನಮ್ಮ ಇಮೇಲ್ ವಿಳಾಸ: ht.kannada@htdigital.in)