ಸಂಪಾದಕೀಯ: ಜನರ ಹಣದಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಇಂಥ ವರ್ತನೆ ಅಕ್ಷಮ್ಯ, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು
ಕನ್ನಡ ಸುದ್ದಿ  /  ಕರ್ನಾಟಕ  /  ಸಂಪಾದಕೀಯ: ಜನರ ಹಣದಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಇಂಥ ವರ್ತನೆ ಅಕ್ಷಮ್ಯ, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು

ಸಂಪಾದಕೀಯ: ಜನರ ಹಣದಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಇಂಥ ವರ್ತನೆ ಅಕ್ಷಮ್ಯ, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು

ಆಗ ಕಾಂಗ್ರೆಸ್‌ನವರು ತಪ್ಪು ಮಾಡಿದ್ದರು ಎಂದು ಈಗ ಬಿಜೆಪಿ ಅದೇ ಹಾದಿ ತುಳಿಯುವುದು, ನೀವು ಮಾಡಿದ್ದು ಮತ್ತಿನ್ನೇನು ಎಂದು ಕಾಂಗ್ರೆಸ್‌ನವರು ಬಿಜೆಪಿಯನ್ನು ಪ್ರಶ್ನಿಸುತ್ತಾ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಆಕ್ಷೇಪಾರ್ಹ. ಜನರು ತಮ್ಮ ತೀರ್ಪು ಕೊಟ್ಟು ಆಗಿದೆ. ಈಗ ಅಧಿವೇಶನದಲ್ಲಿ ನಡೆಯಬೇಕಿರುವುದು ಉತ್ತಮ ಆಡಳಿತಕ್ಕೆ ಪೂರಕವಾದ ಆರೋಗ್ಯಕರ ಚರ್ಚೆ ಮಾತ್ರ.

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧ ಪ್ರವೇಶಿಸುವ ಮೊದಲು ಮೆಟ್ಟಿಲುಗಳಿಗೆ ತಲೆಯಿಟ್ಟು ನಮಸ್ಕರಿಸಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್.
ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧ ಪ್ರವೇಶಿಸುವ ಮೊದಲು ಮೆಟ್ಟಿಲುಗಳಿಗೆ ತಲೆಯಿಟ್ಟು ನಮಸ್ಕರಿಸಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಜನರಿಗೆ ಉತ್ತಮ ಆಡಳಿತವನ್ನು ಆರಿಸಿಕೊಳ್ಳುವುದಕ್ಕೆ ಇರುವ ಅವಕಾಶ ಎಂದೇ ಭಾವಿಸಲಾಗುತ್ತದೆ. ಅಂದರೆ ಮತದಾರರಿಗೆ ತಮ್ಮ ಪರವಾಗಿ ರಾಜ್ಯಭಾರ ಮಾಡಬಲ್ಲಂಥವರು ಈ ಬಾರಿ ಇವರಿರಲಿ ಎಂದೆನಿಸಬೇಕು. ಹಾಗೆ ಯಾವುದೋ ಒಂದು ಪಕ್ಷ ನೀಡುವ ಭರವಸೆ, ಹುಟ್ಟಿಸುವ ನಂಬಿಕೆ ಹಾಗೂ ಅದಕ್ಕೂ ಮುಂಚೆ ಅಧಿಕಾರ ನಡೆಸಿದವರ ಬಗ್ಗೆ ಇರುವ ಅಸಮಾಧಾನ- ಅತೃಪ್ತಿ ಹೀಗೆ ವಿವಿಧ ಕಾರಣಗಳಿಗೆ ತಮ್ಮ ಮತವನ್ನು ಒಂದು ಪಕ್ಷಕ್ಕೆ ಹಾಗೂ ಕೆಲವೊಮ್ಮೆ ಬಹಳ ನಂಬಿಕೆ ಇರಿಸಿದಂಥ ವ್ಯಕ್ತಿಗೆ ನೀಡುತ್ತಾರೆ. ಈಗ ಕರ್ನಾಟಕದ ವಿಚಾರಕ್ಕೇ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಜನಾದೇಶ ಸಿಕ್ಕಿದೆ. 'ಇದು ಎಲ್ಲ ಜಾತಿ, ಸಮುದಾಯದ ಜನರ ಆದೇಶ. ಎಲ್ಲರನ್ನೂ ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು' ಎಂದು ಚುನಾವಣೆ ಫಲಿತಾಂಶ ಬಂದ ದಿನವೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ಆದರೆ, ಈ ಬಾರಿ ಕರ್ನಾಟಕ ಚುನಾವಣೆಯಲ್ಲಿ ಸಿಕ್ಕ ಸ್ಪಷ್ಟ ಜನಾದೇಶದ ಮೇಲೆ ಕಾಂಗ್ರೆಸ್ ಪಕ್ಷದ ವರ್ತನೆ ಹಾಗೂ ಆ ನಂತರ ಪ್ರಮುಖ ವಿಪಕ್ಷವಾಗಿರುವ ಬಿಜೆಪಿಯ ಧೋರಣೆ ಗಮನಿಸುತ್ತಿದ್ದರೆ ಇಲ್ಲಿ ಒಂದು ನಿರ್ದಿಷ್ಟ ಸೈದ್ಧಾಂತಿಕ ವಿಚಾರಕ್ಕೆ ಮಹಾ ಕದನವೊಂದು ನಡೆಯುತ್ತಿರುವಂತೆ ಗೋಚರಿಸುತ್ತಿದೆ. ವಿಧಾನಸಭೆ ಅಧಿವೇಶನದಲ್ಲಿ ಐದು ಗ್ಯಾರಂಟಿಗಳ ಜಾರಿ ವಿಚಾರ, ಬಜೆಟ್ ಮೇಲಿನ ಚರ್ಚೆ, ಮಸೂದೆಗಳ ಮಂಡನೆ ಸೇರಿದಂತೆ ಯಾವುದೇ ವಿಷಯದ ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಬದಲಿಗೆ ಜಗಳ, ವೈಯಕ್ತಿಕ ಮಟ್ಟದ ಆರೋಪ- ಪ್ರತ್ಯಾರೋಪ, ಪ್ರತಿಭಟನೆಗಳು ಮುನ್ನೆಲೆಯಲ್ಲಿವೆ.

ವಿಧಾನಸಭೆ ಅಧಿವೇಶನಗಳು ಜನರ ಹಿತವನ್ನು ಚರ್ಚಿಸಲು ವೇದಿಕೆ ಆಗಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಯಾ ಪಕ್ಷಗಳ ಸಿದ್ಧಾಂತವನ್ನು ಚರ್ಚೆ ಮಾಡುವ, ವೈಯಕ್ತಿಕ ಆರೋಪ- ಪ್ರತ್ಯಾರೋಪಗಳು, ಯಾವುದು ಐತಿಹಾಸಿಕ ಘಟನೆ ಅಥವಾ ವ್ಯಕ್ತಿಯ ಬಗ್ಗೆ ಸರಿ- ತಪ್ಪುಗಳನ್ನು ತಮ್ಮ ಹಿನ್ನೆಲೆಯ ಆಧಾರದಲ್ಲಿ ತೀರ್ಪು ಕೊಡುವಂಥ ಸ್ಥಳವಾಗುತ್ತಿದೆ. ಈ ಎಲ್ಲ ವಿಚಾರಗಳೂ ಈ ಬಾರಿ ಇನ್ನೊಂದು ಎತ್ತರಕ್ಕೆ ಏರುವಂತೆ ಕಾಣುತ್ತಿದೆ.

ಎಡ- ಬಲ ಸಿದ್ಧಾಂತಗಳು ಹಾಗೂ ಆಯಾ ಪಕ್ಷಗಳ ವೋಟ್ ಬ್ಯಾಂಕ್, ಆಯಾ ರಾಜಕೀಯ ಪಕ್ಷಗಳ ಒಲವು- ನಿಲವು ಇವುಗಳೇನಿದ್ದರೂ ವಿಧಾನಸಭೆಯ ಆಚೆಗಿನ ಚರ್ಚೆಯ ವಿಷಯಗಳಾಗಬೇಕು. ಅಭಿಪ್ರಾಯ ಭೇದಗಳು, ಆಕ್ಷೇಪಗಳು ಏನೇ ಇದ್ದರೂ ಅದನ್ನು ಮಾತಿನ ಮೂಲಕವೇ ದಾಖಲಿಸಬೇಕು ಹಾಗೂ ಜನರಿಗೂ ಹಾಗೇ ದಾಟಿಸಬೇಕು. ಯಾವುದೇ ಚರ್ಚೆ, ಮಸೂದೆಯ ಮಂಡನೆ, ಅದಕ್ಕೆ ಸಿಗುವ ಒಪ್ಪಿಗೆ- ವಿರೋಧ, ಆಕ್ಷೇಪ ಈ ಎಲ್ಲವೂ ಮಾತುಗಳಲ್ಲೇ ದಾಖಲಾಗಬೇಕು ಮತ್ತು ಜನರಿಗೂ ಅದು ಗೊತ್ತಾಗಬೇಕು. ಈ ವಿಷಯದಲ್ಲಿ ಕರ್ನಾಟಕದ ಮಟ್ಟಿಗೆ ಈ ಜನಪ್ರತಿನಿಧಿಗಳ ವರ್ತನೆ ಅಕ್ಷಮ್ಯ.

ನೀವು ಮಸೂದೆ ಪ್ರತಿ ಹರಿದಿದ್ದಿರಿ, ನಾವು ಮಾಡಿದರೆ ತಪ್ಪೇನು? ನೀವು ಸಭಾಧ್ಯಕ್ಷರನ್ನು ಹಿಡಿದು ಎಳೆದಾಡಿದ್ದಿರಿ, ನಾವು ಮಾಡಿದರೆ ತಪ್ಪೇನು? ನೀವೂ ಗದ್ದಲ ಎಬ್ಬಿಸಿದ್ದಿರಿ, ನಾವು ಮಾಡಿದರೆ ಏನೀಗ? ಹೀಗೇ ಆಡಳಿತ ಪಕ್ಷ- ವಿಪಕ್ಷದವರು ಇಬ್ಬರೂ ತಮ್ಮ ವರ್ತನೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಜನರ ಹಣದಲ್ಲಿ ಆಗುವ ಸರ್ಕಾರ, ಸದನ, ಅಧಿವೇಶನ ನಡೆಯುವ ರೀತಿ ಇದೇನಾ? ಅಧಿವೇಶನದ ನೇರಪ್ರಸಾರ ಆಗುತ್ತದೆ. 'ಜನರಿಗಾಗಿಯೇ ನಾವು ಬದುಕುತ್ತಿದ್ದೇವೆ,' ಎಂದು ಮತ ಕೇಳುವಾಗ ಕಣ್ಣೀರು ಸುರಿಸುವವರಿಗೆ ಹೀಗೆ ಅಧಿವೇಶನದಲ್ಲಿ ಗೌಜು- ಗದ್ದಲ ಆಗಿ, ಜನರ ಸಮಸ್ಯೆಗಳೇ ಚರ್ಚೆ ಆಗದೆ ಹೋದಾಗ ಮನಸ್ಸಿನಲ್ಲಿ ಅಪರಾಧೀಭಾವ ಕಾಡಬೇಕಿತ್ತು ಅಲ್ಲವೇ?

ವೈಯಕ್ತಿಕ ದ್ವೇಷಗಳನ್ನು ಸಾಧಿಸುವುದಕ್ಕೆ, ರಾಜಕೀಯ ಪಕ್ಷಗಳಾಗಿ ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೀಗೆ ವಿಧಾನಸಭೆ ಅಧಿವೇಶನವನ್ನು ಬಲಿ ಕೊಡುವುದು ಖಂಡಿತಾ ಸರಿಯಲ್ಲ. ಇಂಥ ಪ್ರವೃತ್ತಿಯನ್ನು ಕರ್ನಾಟಕದ ಜನರು ಒಪ್ಪುವುದೂ ಇಲ್ಲ. ಆಗ ಕಾಂಗ್ರೆಸ್‌ನವರು ತಪ್ಪು ಮಾಡಿದ್ದರು ಎಂದು ಈಗ ಬಿಜೆಪಿ ಅದೇ ಹಾದಿ ತುಳಿಯುವುದು, ನೀವು ಮಾಡಿದ್ದು ಮತ್ತಿನ್ನೇನು ಎಂದು ಕಾಂಗ್ರೆಸ್‌ನವರು ಬಿಜೆಪಿಯನ್ನು ಪ್ರಶ್ನಿಸುತ್ತಾ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಆಕ್ಷೇಪಾರ್ಹ ಪ್ರವೃತ್ತಿ. ಜನರು ತಮ್ಮ ತೀರ್ಪು ಕೊಟ್ಟು ಆಗಿದೆ. ಈಗ ಅಧಿವೇಶನದಲ್ಲಿ ನಡೆಯಬೇಕಿರುವುದು ಉತ್ತಮ ಆಡಳಿತಕ್ಕೆ ಪೂರಕವಾದ ಆರೋಗ್ಯಕರ ಚರ್ಚೆ ಮಾತ್ರ.

Whats_app_banner