ಹುಬ್ಬಳ್ಳಿ 5 ವರ್ಷದ ಬಾಲಕಿ ಕೊಲೆ ಪ್ರಕರಣ : ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣಾ ಅವರನ್ನು ಕೊಂಡಾಡಿದ ಜನರು
ಅಶೋಕನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಯತ್ನ ಮಾಡಿ ಬಳಿಕ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಎನ್‌ಕೌಂಟರ್ ಮಾಡಿದ್ದಾರೆ.

ಹುಬ್ಬಳ್ಳಿ : ಅಶೋಕನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಯತ್ನ ಮಾಡಿ ಬಳಿಕ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಅಶೋಕನಗರ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಎನ್‌ಕೌಂಟರ್ ಮಾಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಪಿಎಸ್‌ಐ ಅನ್ನಪೂರ್ಣಾ ಅವರನ್ನು ಸಾಕಷ್ಟು ಜನ ಕೊಂಡಾಡುತ್ತಿದ್ದಾರೆ.
ಹುಬ್ಬಳ್ಳಿ, ಧಾರವಾಡದ ಮಹಾನಗರದ ಇತಿಹಾಸದಲ್ಲಿ ನಡೆದ ಮೊದಲ ಎನ್‌ಕೌಂಟರ್ ಕೂಡ ಇದಾಗಿದೆ. ಈ ಹಿಂದೆ ಹಲವು ಬಾರಿ ಗೋಲಿಬಾರ್ ಆಗಿವೆ. ರೌಡಿಗಳ ಕಾಲಿಗೆ ಗುಂಡೇಟು ಬಿದ್ದಿವೆ. ಆದರೆ, ಈ ರೀತಿ ಎನ್‌ಕೌಂಟರ್ ಆಗಿರಲಿಲ್ಲ. ಭಾನುವಾರ ಬಾಲಕಿಯ ಕೊಲೆ ಮಾಡಿದ ಆರೋಪಿ ತಪ್ಪಿಸಿಕೊಳ್ಳುವಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ, ಈ ವೇಳೆ , ಲೇಡಿ ಪಿಎಸ್‌ಐ ಆರೋಪಿಯನ್ನು ಎನ್‌ಕೌಂಟರ್ ಮಾಡಿದ್ದಾರೆ. ಈವರೆಗೆ ರಾಜ್ಯದಲ್ಲಿ ಯಾವ ಮಹಿಳಾ ಪೊಲೀಸ್ ಅಧಿಕಾರಿ ಮಾಡದ ಸಾಹಸವನ್ನು ಇವರು ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪಿಎಸ್‌ಐ ಅನ್ನಪೂರ್ಣಾ ಹಿನ್ನೆಲೆ : ಅಶೋಕನಗರ ಪೊಲೀಸ್ ಠಾಣೆಯ ಪಿಎಸ್‌ಐ ಅನ್ನಪೂರ್ಣ ಆರ್ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನವರು. 2012ರ ಬ್ಯಾಚ್‌ನ ಅಧಿಕಾರಿಯಾಗಿರುವ ಇವರು, ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ, ಇದೀಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಪರಾರಿಯಾಗುವಾಗ ಹಲ್ಲೆಗೊಳಗಾಗಿರುವ ಅವರು, ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
25ಕ್ಕೂ ಹೆಚ್ಚು ಆರೋಪಿಗಳ ಕಾಲಿಗೆ ಗುಂಡೇಟು: ಅವಳಿನಗರದ ಇತಿಹಾಸದಲ್ಲಿಯೇ ಕಳೆದೆರಡು ದಶಕದಲ್ಲಿ ಮೊದಲ ಬಾರಿಗೆ ಪೊಲೀಸರಿಂದ ಆರೋಪಿಯೊಬ್ಬನ ಎನ್‌ಕೌಂಟರ್ ನಡೆದಿದೆ. ಬಾಲಕಿ ಕೊಲೆ ಆರೋಪಿ ರಿತೇಶ ಗುಂಡೇಟಿಗೆ ಬಲಿಯಾಗಿದ್ದಾನೆ. ಇದರಿಂದ ಅಪರಾಧ ಕೃತ್ಯ ಎಸಗುವವರಿಗೆ ಒಂದು ದೊಡ್ಡ ಸಂದೇಶ ರವಾನೆ ಮಾಡಿದಂತಾಗಿದೆ ಎಂದು, ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಶ್ಲಾಘನೆ ವ್ಯಕ್ತವಾಗುತ್ತಿದೆ.
ಬಾಲಕಿ ಅಪಹರಣ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಾಲಕಿ ಅಪಹರಿಸಿ ನೀಚ ಕೃತ್ಯ ಎಸಗಿರುವ ಆರೋಪಿ ಬಿಹಾರ ಮೂಲದ ರಿತೇಶನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲು ಬಾಲಕಿಗೆ ಆಮಿಷ ತೋರಿಸಿ ಗೇಟಿನ ಆಚೆಯಿಂದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಜನರನ್ನು ನಿಯಂತ್ರಣ ಮಾಡಲಾಗದ ಪರಸ್ಥಿತಿ ನಿರ್ಮಾಣವಾಗಿತ್ತು.

ವಿಭಾಗ