ಧಾರವಾಡ: ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಕೇಸ್; 18 ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನರ ಬಂಧನ
Anganwadi Food Scam: ಧಾರವಾಡದಲ್ಲಿ ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಮಾಡಿದ ಪ್ರಕರಣದಲ್ಲಿ 18 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ 26 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 329 ಚೀಲ ಆಹಾರ ವಸ್ತು ವಶಪಡಿಸಿಕೊಂಡಿದ್ದಾರೆ.

Anganwadi Food Scam: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಂಗನವಾಡಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೊಡಬೇಕಾಗಿದ್ದ ಅಂಗನವಾಡಿ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 18 ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನರನ್ನು ಬಂಧಿಸಿದ್ದಾರೆಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹೇಳಿದರು.
ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಕೇಸ್
ಧಾರವಾಡ ಹಳೇಗಬ್ಬರ ಹೊರವಲಯದ ಗೋಡೌನ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಅಂಗನವಾಡಿ ಪೌಷ್ಠಿಕ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಪ್ರಯತ್ನ ನಡೆದಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ತಂಡ ಫೆ 15 ರಂದು ಸಂಜೆ 4.30ಕ್ಕೆ ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗನವಾಡಿ ಆಹಾರವನ್ನು ವಶಪಡಿಸಿಕೊಂಡರು. ಈ ಕೇಸ್ ಸಂಬಂಧ 18 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 26 ಜನರನ್ನು ಬಂಧಿಸಲಾಗಿದೆ.
ಧಾರವಾಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಕಮಲವ್ವ ಅವರು ಕಸಬಾಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು, ಗೋಡೌನ್ ಮಾಲೀಕ, ಬಾಡಿಗೆ ವಾಹನ ಮಾಲೀಕ, ಚಾಲಕ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ 26 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಸಬಾಪೇಟ ಠಾಣೆಯಲ್ಲಿ ಪ್ರಕರಣ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ್ ಪತಿ ಫಾರುಖ್ ಗೆ ಸೇರಿದ ಗಬ್ಬೂರು ಬಳಿ ಗೋದಾಮಿನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಂಗನವಾಡಿಯ ಪೊಷ್ಠಿಕ ಆಹಾರ ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಅಂಗನವಾಡಿಯ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ 26 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದರು.
18 ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನರ ಬಂಧನ
ಬೋಲೆರೋ ವಾಹನ ಮಾಲಕ ಶಿವಕುಮಾರ ದೇಸಾಯಿ, ವಾಹನ ಚಾಲಕ ಬಸವರಾಜ ಭದ್ರಶೆಟ್ಟಿ, ಗೋಡೌನ ಮಾಲೀಕ ನೇಕಾರನಗರದ ಮೊಹ್ಮದಗೌಸ ಖಲೀಪಾ, ಬಾಡಿಗೆದಾರ ಗೌತಮ ಸಿಂಗ ಠಾಕೂರ, ಮಂಜುನಾಥ ಮಾದರ, ಫಕ್ಕೀರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ, ಅಂಗನವಾಡಿ ಕಾರ್ಯಕರ್ತೆಯರಾದ ಶಮೀಮಬಾನು ಮುಜಾವರ, ಶಮೀಮಬಾನು ದಾರುಗಾರ, ಬೀಬಿ ಆಯಿಷಾ ಕಾರಿಗಾರ, ರೇಷ್ಮಾ ವಡ್ಡ, ಶಾಹೀನ ಚಕ್ಕೇಹಾರಿ, ಪೈರೋಜಾ ಮುಲ್ಲಾ ಬೀಬಿಆಯಿಷಾ ಶೇಖ, ಮೆಹಬೂಬಿ ಹುಲ್ಯಾಳ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ , ಮೀನಾಕ್ಷಿ ಬೇಟಗೇರಿ, ಹೀನಾಕೌಸರ ನರಗುಂದ, ಹೀನಾಕೌಸರ ಮೇಸ್ತ್ರಿ ಶೀಲಾ ಹಿರೇಮಠ, ಶ್ರುತಿ ಕೊಟಬಾಗಿ, ಪರವೀನಬಾನು ಖಲೀಪ, ರೇಣುಕಾ ಕಮಲದಿನ್ನಿ ಗಂಗಮ್ಮ ಪಾಂಡರೆ ಮುಂತಾದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೊಲೆರೋ ವಾಹನದಲ್ಲಿ ಮತ್ತು ಗೋಡೌನ್‌ನಲ್ಲಿದ್ದ ಸುಮಾರು ನಾಲ್ಕು ಲಕ್ಷ ಮೌಲ್ಯದ ಒಟ್ಟು 329 ಚೀಲಗಳಲ್ಲಿದ್ದ 8 ಟನ್ 84 ಕೆ.ಜಿ. ಆಹಾರ ಪದಾರ್ಥಗಳನ್ನು ಜಪ್ತ ಮಾಡಿದ್ದು, ಇದರ 4 ಲಕ್ಷ ಮತ್ತು 3 ಲಕ್ಷ ಮೌಲ್ಯದ ಒಂದು ಬೊಲೆರೋ ವಾಹನವನ್ನು ಜಪ್ತ ಮಾಡಲಾಗಿದೆಯಲ್ಲದೇ ಅಲ್ಲದೇ ಆರೋಪಿತರ ಮೊಬೈಲ್ ಪೋನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ರವೀಶ ಸಿ.ಆರ್. ಇದ್ದರು.
