Hubballi Crime: ರೈತರೇ ಎಚ್ಚರ, ಪಿಎಂ ಕುಸುಮ್-ಬಿ ಯೋಜನೆ ಹೆಸರಲ್ಲಿ ಹೀಗೂ ವಂಚಿಸ್ತಾರೆ ವಂಚಕರು
Hubballi Crime: ಪಿಎಂ ಕುಸುಮ್-ಬಿ ಯೋಜನೆ ಹೆಸರಿನಲ್ಲಿ ರೈತರಿಗೆ ನಕಲಿ ಅನುಮೋದನೆ ಪತ್ರ ರವಾನಿಸಿ ಹಣ ವಸೂಲಿ ಮಾಡಲು ವಂಚಕರು ಯತ್ನಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ: ಪಿಎಂ ಕುಸುಮ್-ಬಿ ಯೋಜನೆ ಹೆಸರಿನಲ್ಲಿ ರೈತರಿಗೆ ನಕಲಿ ಅನುಮೋದನೆ ಪತ್ರ ರವಾನಿಸಿ ಹಣ ವಸೂಲಿ ಮಾಡಲು ವಂಚಕರು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಂತಹ ಯಾವುದೇ ನಕಲಿ ಅನುಮೋದನೆ ಪತ್ರಗಳು, ಕರೆಗಳಿಗೆ ಸ್ಪಂದಿಸದಂತೆ ಹೆಸ್ಕಾಂ ಕೋರಿದೆ. ಹೆಸ್ಕಾಂ ವ್ಯಾಪ್ತಿಯ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದ ರೈತರೊಬ್ಬರಿಗೆ ವಂಚಕರು ಕುಸುಮ್-ಬಿ ಅನುಮೋದನೆಯ ನಕಲಿ ಪತ್ರ ಕಳುಹಿಸಿದ್ದಾರೆ.
ಕುಸುಮ್ ಬಿ ಯೋಜನೆಗೆ ನಿಮ್ಮ ಅರ್ಜಿ ಪುರಸ್ಕೃತಗೊಂಡಿದ್ದು, ನಿಮ್ಮ ಜಮೀನಿನಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಸಲು 3,150 ರೂ ಕಾನೂನು ಶುಲ್ಕ ಪಾವತಿಸಬೇಕಿದೆ. ಸೋಲಾರ್ ಪಂಪ್ ಅಳವಡಿಸಿದ ನಂತರ ಈ ಹಣವನ್ನು ನಿಮಗೆ ಮರು ಪಾವತಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ಪದೇ ಪದೆ ಕರೆ ಮಾಡಿ ಪತ್ರದಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆಗೆ ಹಣ ಪಾವತಿಸುವಂತೆ ಪೀಡಿಸಿರುವುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ಹೆಸ್ಕಾಂ, ಕುಸುಮ್-ಬಿ ಯೋಜನೆಯಡಿ ರೈತರಿಂದ ಯಾವುದೇ ರೀತಿಯ ಶುಲ್ಕ ಸ್ವೀಕರಿಸುವುದಿಲ್ಲ. ಇಂತಹ ಅನುಮೋದನೆ ಪತ್ರ ಹಾಗೂ ಕರೆಗಳನ್ನು ನಂಬಬೇಡಿ ಮತ್ತು ಅಂತಹ ಕರೆಗಳಿಗೆ ಸ್ಪಂದಿಸಬೇಡಿ. ಅಂತಹ ಕರೆಗಳು ಬಂದಲ್ಲಿ ಕೂಡಲೇ ಹೆಸ್ಕಾಂ ಸಹಾಯವಾಣಿ 1912 ಕ್ಕೆ ಕರೆ ಮಾಡಿ ಅಥವಾ ಸಮೀಪದ ಹೆಸ್ಕಾಂ ಕಚೇರಿಗೆ ದೂರು ನೀಡಿ ಎಂದು ರೈತರಲ್ಲಿ ಮನವಿ ಮಾಡಿದೆ.
ಮನೆಗಳ್ಳನ ಬಂಧನ: 6.45 ಲಕ್ಷ ಚಿನ್ನಾಭರಣ ವಶ
ಧಾರವಾಡ: ಇಲ್ಲಿನ ಶಹರ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ ಆರೋಪದ ಮೇಲೆ ಶಹರ ಠಾಣೆಯ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಗದಗ ಮೂಲದ ಸುನೀಲ್ ಸಂಜೀವಪ್ಪ ಮುಳಗುಂದ ಎಂಬಾತ ಬಂಧಿತ ಆರೋಪಿ. ಬಂಧಿತನಿಂದ 87 ಗ್ರಾಂ. ಚಿನ್ನದ ಮತ್ತು 507 ಗ್ರಾಂ. ಬೆಳ್ಳಿ ಸೇರಿ ಅಂದಾಜು 6.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಡಿಸೆಂಬರ್ 8 ರಂದು ಕವಲಗೇರಿ ರಸ್ತೆಯಲ್ಲಿರುವ ರಾಹುಲ್ ನಗರದ ಹತ್ತಿರದ ಉಮಾಕಾಂತ ಲಿಂಗಪ್ಪ ಕರ್ಚಗಟ್ಟಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಶಹರ ಠಾಣೆಗೆ ಸಲ್ಲಿಸಿದ ದೂರಿನ ಮೇರೆಗೆ ಎಸಿಪಿ ಪ್ರಶಾಂತ ಸಿದ್ಧನಗೌಡರ ಮಾರ್ಗದರ್ಶನದಲ್ಲಿ ತನಿಖೆ ನಡೆಯಿತು. ಪೊಲೀಸರು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿ ಪತ್ತೆ ಕಾರ್ಯ ಮುಂದುವರೆದಿದೆ.
ರಾಹುಲ್‌ರನ್ನು ಟೀಕಿಸುವುದಷ್ಟೇ ಬಿಜೆಪಿಯವರ ಕೆಲಸ
ಧಾರವಾಡ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ 10 ವರ್ಷಗಳ ಸಾಧನೆಯನ್ನು ಕೇಳಿದರೆ 70 ವರ್ಷಗಳ ಕತೆ ಹೇಳುತ್ತಾರೆ. ಮೂಲ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸುವುದಷ್ಟೆ ಬಿಜೆಪಿಯವರ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಪರ ಎಂದು ಹೇಳುತ್ತಾರೆ. ಆದರೆ, ಹಿಂದುಗಳು ಬಡತನದಲ್ಲಿಯೇ ಇದ್ದಾರೆ. ಪ್ರಧಾನಿ ಮೋದಿ ಅವರು ಹಿಂದುಗಳಿಗೆ ಕೆಲಸ ಕೊಟ್ಟಿದ್ದಾರಾ ಅಥವಾ ಉದ್ಯೋಗ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
