ಹುಬ್ಬಳ್ಳಿ ಅತ್ಯಾಚಾರ–ಕೊಲೆ ಪ್ರಕರಣ; ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ ಘೋಷಣೆ
ಹುಬ್ಬಳ್ಳಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಬಿಹಾರ ಮೂಲದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಆತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ಹುಬ್ಬಳ್ಳಿ: 5 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆ ನಡೆದ 6 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಇದೀಗ ಮೃತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಏನಿದು ಘಟನೆ
ಕೊಪ್ಪಳ ಮೂಲಕ ದಿನಗೂಲಿ ಕಾರ್ಮಿಕರಾದ ಬಾಲಕಿಯ ತಂದೆ–ತಾಯಿ ಕೆಲಸಕ್ಕೆಂದು ಹೋದಾಗ ಮಗು ಮನೆಯ ಬಳಿ ಆಟವಾಡುತ್ತಿತ್ತು. ಆಗ ಚಾಕೊಲೇಟ್ ಕೊಡಿಸುವ ಆಸೆ ತೋರಿಸಿ ಕರೆದೊಯ್ದ ಬಿಹಾರ ಮೂಲದ ಆರೋಪಿ ಆಕೆಯ ಮೇಲೆ ಅತ್ಯಚಾರ ಎಸಗಿ ಕೊಲೆ ಮಾಡಿ ಪಾಳು ಬಿದ್ದ ಕಟ್ಟಡದಲ್ಲಿ ಎಸೆದು ಹೋಗಿದ್ದ. ಈ ಘಟನೆ ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ನಡೆದಿದೆ.
ಪ್ರಕರಣ ಸಂಬಂಧಿಸಿ ಶಾಸಕ ಪ್ರಸಾದ ಅಬ್ಬಯ್ಯ ಅವರೊಂದಿಗೆ ಕೆಎಂಸಿ–ಆರ್‌ಐ ಆಸ್ಪತ್ರೆಗೆ ಬಂದಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಸರ್ಕಾರದ ವತಿಯಿಂದ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಾಲಕಿ ಕುಟುಂಬಸ್ಥರಿಗೆ ಸ್ಲಂ ಬೋರ್ಡ್‌ನಿಂದ ಒಂದು ಮನೆ ನೀಡಲು ನಿರ್ಧಾರ ಮಾಡಲಾಗಿದೆ‘ ಎಂದು ಹೇಳಿದ್ದಾರೆ.
ಈ ಘಟನೆ ಜನಾಕ್ರೋಶಕ್ಕೆ ಕಾರಣವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಹುಡುಕಾಟ ಆರಂಭಿಸಿದ್ದರು. ಸಿಸಿ ಟಿವಿ ದ್ರಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದರು. ಆದರೆ ಈ ಕಾರ್ಯಚರಣೆ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಆ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆ ಪಿಎಸ್‌ಐ ಅನ್ನಪೂರ್ಣ ಹಾರಿಸಿದ್ದ ಗುಂಡು ಆರೋಪಿ ರಿತೇಶ್ ಕುಮಾರ್ ಎದೆಗೆ ತಾಕಿ ಗಾಯವಾಗಿತ್ತು. ಆತನನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದ.
