ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ; ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ
Hubballi LPG Blast: ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಅಯ್ಯಪ್ಪ ಮಾಲಾಧಾರಿಗಳ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
Hubballi LPG Blast: ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಅಯ್ಯಪ್ಪ ಮಾಲಾಧಾರಿಗಳ ಪೈಕಿ ನಿಜಲಿಂಗಪ್ಪ ಬೇಪುರಿ ಹಾಗೂ ಸಂಜಯ ಸವದತ್ತಿ ಅವರು ನಿನ್ನೆಯಷ್ಟೇ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇಂದು ರಾಜು ಮುಗಿರಿ (16) ಎಂಬ ಯುವಕ ಮೃತಪಟ್ಟಿದ್ದಾನೆ. ಇದರೊಂದಿಗೆ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ; ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಘೋಷಣೆ
ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ ಪ್ರಕರಣದ ಘಟನೆಯನ್ನು ರಾಜ್ಯ ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ. ಉಳಿದ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಅವರನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಂದು (ಡಿಸೆಂಬರ್ 27) ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ&ಆರ್‌ಐ)ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಅಯ್ಯಪ್ಪ ಮಾಲಾಧಾರಿಗಳ ಶರೀರ ಶೇಕಡ 60 ರಿಂದ 90 ರಷ್ಟು ಸುಟ್ಟಿವೆ. ಅವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸಲಾಗುತ್ತಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಅಲ್ಲದೇ ಕುಟುಂಬಸ್ಥರಿಗೆ ಸರ್ಕಾರದಿಂದ ಸಹಾಯ ಹಸ್ತ ನೀಡಲಾಗುವುದು. ಮೃತರ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಡಿಸಿಪಿಗಳಾದ ರವೀಶ್ ಸಿಆರ್, ಮಹಾನಿಂಗ ನಂದಗಾವಿ, ಕೆಎಂಸಿಆರ್‌ಐ ನಿರ್ದೇಶಕ ಡಾ ಎಸ್ಎಫ್ ಕಮ್ಮಾರ, ಹುಬ್ಬಳ್ಳಿ ಶಹರ ತಹಶೀಲ್ದಾರ ಕಲಗೌಡ ಪಾಟೀಲ ಸೇರಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ; ಏನಿದು ದುರಂತ
ಇಲ್ಲಿನ ಉಣಕಲ್‌ನ ಅಚ್ಚವ್ವ ಕಾಲೋನಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೇ ಗುರುವಾರ (ಡಿಸೆಂಬರ್ 26) ಮುಂಜಾನೆ ಮೃತಪಟ್ಟಿದ್ದಾರೆ. ಮೃತ ಅಯ್ಯಪ್ಪ ಮಾಲಾಧಾರಿಗಳನ್ನು ಅಜ್ಜಾಸ್ವಾಮಿ ಅಲಿಯಾಸ್ ನಿಂಗಪ್ಪ ಬೇಪಾರಿ (58) ಹಾಗೂ ಸಂಜಯ ಸವದತ್ತಿ (20) ಎಂದು ಗುರುತಿಸಲಾಗಿದೆ.
ಇನ್ನುಳಿದ ಗಾಯಾಳುಗಳಾದ ರಾಜು ಹರ್ಲಾಪುರ (21), ವಿನಾಯಕ ಬಾತಕೇರ (12), ಪ್ರಕಾಶ ಬಾರಕೇರ (42), ಮಂಜು ತೋರದ (22), ಪ್ರವೀಣ ಚಲವಾದಿ (24), ತೇಜಸ್ ರೆಡ್ಡಿ (26) ಮತ್ತು ಶಂಕರ ರಾಯನಗೌಡ್ರ (29) ಇವರುಗಳ ಸ್ಥಿತಿ ಇನ್ನೂ ಗಂಭೀರವಾಗಿದೆ. ಅಯ್ಯಪ್ಪ ಮಾಲಾಧಾರಿಗಳು ರಾತ್ರಿ ಊಟ ಮುಗಿಸಿಕೊಂಡು ಸಣ್ಣ ಕೋಣೆಯಲ್ಲಿ ಮಲಗಿದ್ದಾಗ ಸಿಲಿಂಡರ್ ಸ್ಫೋಟಗೊಂಡು 9 ಜನ ಗಾಯಗೊಂಡಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂದಿ ಸಾಕಾಣಿಕೆದಾರನಿಗೆ ಖಾರದ ಪುಡಿ ಎರಚಿ ಕೊಲೆ
ಹುಬ್ಬಳ್ಳಿಯ ಹೊರವಲಯದ ಗದಗ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಸ್ಯಾಮ್ಯುಯಲ್ (38) ಎಂಬಾತನೇ ಕೊಲೆಗೀಡಾದ ವ್ಯಕ್ತಿಯಾಗಿದ್ದು, ಈತ ಹಂದಿ ಸಾಕಾಣಿಕೆ ಮಾಡುತ್ತಿದ್ದನು. ಗುರುವಾರ ರಾತ್ರಿ ಗದಗ ರಸ್ತೆಯಲ್ಲಿ ಸ್ಯಾಮ್ಯುಯಲ್ ಕಣ್ಣಿಗೆ ಖಾರದ ಪುಡಿಯನ್ನು ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.