ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ; ದಾವಣಗೆರೆ ಮಾಯಕೊಂಡ ಬಳಿ ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ ಗಿರೀಶ್‌
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ; ದಾವಣಗೆರೆ ಮಾಯಕೊಂಡ ಬಳಿ ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ ಗಿರೀಶ್‌

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ; ದಾವಣಗೆರೆ ಮಾಯಕೊಂಡ ಬಳಿ ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ ಗಿರೀಶ್‌

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ತಲೆಮರೆಸಿಕೊಂಡು ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದ. ದಾವಣಗೆರೆ ಮಾಯಕೊಂಡ ಬಳಿ ಮಹಿಳೆಯ ಕೊಲೆಗೆ ಯತ್ನಿಸಿ, ಸಾರ್ವಜನಿಕರಿಂದ ಹಲ್ಲೆಗೊಳಗಾಗಿ ರೈಲ್ವೆ ಪೊಲೀಸರಿಗೆ ಆರೋಪಿ ಗಿರೀಶ್‌ ಸೆರೆ ಸಿಕ್ಕಿದ್ದಾನೆ.

ಹುಬ್ಬಳ್ಳಿ ಅಂಜಲಿ (ಬಲ ಚಿತ್ರ) ಕೊಲೆ ಪ್ರಕರಣ; ದಾವಣಗೆರೆ ಮಾಯಕೊಂಡ ಬಳಿ ರೈಲ್ವೆ ಪೊಲೀಸರಿಗೆ  ಆರೋಪಿ ಗಿರೀಶ್‌ (ಎಡ ಚಿತ್ರ) ಸೆರೆ ಸಿಕ್ಕಿದ್ದಾನೆ.
ಹುಬ್ಬಳ್ಳಿ ಅಂಜಲಿ (ಬಲ ಚಿತ್ರ) ಕೊಲೆ ಪ್ರಕರಣ; ದಾವಣಗೆರೆ ಮಾಯಕೊಂಡ ಬಳಿ ರೈಲ್ವೆ ಪೊಲೀಸರಿಗೆ ಆರೋಪಿ ಗಿರೀಶ್‌ (ಎಡ ಚಿತ್ರ) ಸೆರೆ ಸಿಕ್ಕಿದ್ದಾನೆ.

ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿ ಗಿರೀಶ್ ಸಾವಂತ ಅಲಿಯಾಸ್ ವಿಶ್ವನಾಥ (21) ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪರಾರಿಯಾಗುತ್ತಿದ್ದ ವೇಳೆ ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕೊಲೆಗೆತ್ನಿಸಿದ ಗಿರೀಶ್‌ನನ್ನು ಹಿಡಿದ ರೈಲ್ವೆ ಪ್ರಯಾಣಿಕರು, ಆತನ ಮೇಲೆ ಹಲ್ಲೆ ನಡೆಸಿದಾಗ ಅವರಿಂದ ತಪ್ಪಿಸಲು ಮಾಯಕೊಂಡ ಸಮೀಪ ರೈಲಿನಿಂದ ಹೊರಹಾರಿ ಗಂಭೀರಗಾಯಗೊಂಡು ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿತ್ತು.

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದ ಆರೋಪಿ ಗಿರೀಶ್‌, ಮೈಸೂರು ಹೋಗಿ ಅಲ್ಲಿಂದ ಗೋವಾ, ಮಹಾರಾಷ್ಟ್ರ ಕಡೆಗೆ ಹೋಗಿ ತಲೆಮರೆಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿಕೊಂಡಿದ್ದ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದ ಆರೋಪಿ ಗಿರೀಶ್ ಸೆರೆ ಸಿಕ್ಕಿದ್ದು ಹೀಗೆ

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ ಕೊಲೆ ಆರೋಪಿ ಗಿರೀಶ್‌ ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದ. ಇದೇ ವೇಳೆ ತುಮಕೂರಿನಿಂದ ರೈಲು ಏರಿದ್ದ ಮಹಿಳೆ ಆತನ ಬಳಿ ಜಗಳಕ್ಕೆ ಇಳಿದಿದ್ದಳು. ಆತ ಮಹಿಳೆಯರನ್ನು ನೋಡುವ ದೃಷ್ಟಿ ಸರಿ ಇಲ್ಲ ಎಂದು ವಾಕ್ಸಮರ ನಡೆಸಿದ್ದಳು.

ಇದಾಗಿ ಕೆಲ ಹೊತ್ತಿನ ನಂತರ ಆಕೆ ರೈಲಿನ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಆಕೆ ಹೊರಬರುವುದನ್ನು ಕಾಯುತ್ತಿದ್ದ ಗಿರೀಶ್‌. ಆಕೆ ಬಾಗಿಲು ತೆರೆದ ಕೂಡಲೇ ಚಾಕುವಿನಿಂದ ಆಕೆಗೆ ಇರಿಯಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಆಕೆ ಕಿರುಚಿಕೊಂಡಿದ್ದು, ಕೂಡಲೇ ಪ್ರಯಾಣಿಕರು ಅಲ್ಲಿಗೆ ಹೋಗಿದ್ದರು. ಗಿರೀಶ್‌ನನ್ನು ಹಿಡಿದು ಆಕೆಯ ಮೇಲೆ ನಡೆಯಬಹುದಾಗಿದ್ದ ಮಾರಣಾಂತಿಕ ಹಲ್ಲೆ ತಪ್ಪಿಸಿದ್ದರು. ಆದಾಗ್ಯೂ ಮಹಿಳೆಯ ಎಡ ಕೈಗೆ ಚಾಕುವಿನಿಂದ ಇರಿದ ಗಾಯವಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ರೈಲ್ವೆ ಪ್ರಯಾಣಿಕರಿಂದ ಥಳಿತಕ್ಕೆ ಒಳಗಾದ ಗಿರೀಶ್

ರೈಲಿನಲ್ಲಿ ಮಹಿಳೆಯ ಹತ್ಯೆಗೆ ಯತ್ನಿಸಿದ ಗಿರೀಶ್‌ನನ್ನು ಪ್ರಯಾಣಿಕರು ಹಿಡಿದು ಥಳಿಸಿದ್ದರು. ಇದೇ ವೇಳೆ ತೀವ್ರ ಹಲ್ಲೆಗೆ ಒಳಗಾದ ಗಿರೀಶ್‌ ರೈಲಿನಿಂದ ಧುಮುಕಿ ಪ್ರಯಾಣಿಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಮಾಯಕೊಂಡ ಸಮೀಪ ಈ ಘಟನೆ ನಡೆದಿದ್ದು, ಪ್ರಯಾಣಿಕರು ಗಿರೀಶ್‌ನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದರು.

ಗಾಯಗೊಂಡಿದ್ದ ಗಿರೀಶ್‌ನನ್ನು ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದರು. ಆಗ ಆತನ ಮುಖಚಹರೆ ನೋಡಿ, ಹುಬ್ಬಳ್ಳಿಯ ಅಂಜಲಿ ಹತ್ಯೆ ಆರೋಪಿ ಎಂಬುದನ್ನು ಖಚಿತಪಡಿಸಿಕೊಂಡರು. ಕೂಡಲೇ ಹುಬ್ಬಳ್ಳಿ ಧಾರವಾಡ ಪೊಲೀಸರಿಗೆ ಗಿರೀಶ್ ಸೆರೆ ಸಿಕ್ಕ ವಿಚಾರ ಹಂಚಿಕೊಂಡಿದ್ದರು. ಬಳಿಕ ಆರೋಪಿಯನ್ನು ಅವರಿಗೆ ಹಸ್ತಾಂತರಿಸಿದ್ದಾರೆ.

ಇದೇ ವೇಳೆ, ರೈಲಿನಲ್ಲಿ ಗಿರೀಶ್‌ನಿಂದ ಹಲ್ಲೆಗೊಳಗಾದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner