ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳ ವಿವರ ಇಲ್ಲಿದೆ.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಗೀಡಾದ ಅಂಜಲಿ ಅಂಬಿಗೇರ (ಎಡ ಚಿತ್ರ) ಸಹೋದರಿ ಯಶೋದಾ (ಬಲ ಚಿತ್ರ) ಆತ್ಮಹತ್ಯೆ ಯತ್ನ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಗೀಡಾದ ಅಂಜಲಿ ಅಂಬಿಗೇರ (ಎಡ ಚಿತ್ರ) ಸಹೋದರಿ ಯಶೋದಾ (ಬಲ ಚಿತ್ರ) ಆತ್ಮಹತ್ಯೆ ಯತ್ನ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರವಾಡ/ ಬೆಂಗಳೂರು: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಗೀಡಾದ ಅಂಜಲಿ ಅಂಬಿಗೇರಾ ಅವರ ಸಹೋದರಿ ಯಶೋದಾ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ ಕಳವಳಕಾರಿ ಘಟನೆ ವರದಿಯಾಗಿದೆ. ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಹೇಳಿದೆ.

ಅಕ್ಕನ ಮರಣದಿಂದ ಮನನೊಂದಿರುವ ಯಶೋದಾ ಶನಿವಾರ (ಮೇ 18) ಸ್ವಾಮೀಜಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮನೆಗೆ ಹೋದ ಬಳಿಕ ಈ ಅತಿರೇಕದ ಕೆಲಸ ಮಾಡಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯರನ್ನು ಉಲ್ಲೇಖಿಸಿ ಟಿವಿ 9 ಕನ್ನಡ ವರದಿ ಮಾಡಿದೆ.

ಅಕ್ಕ ಅಂಜಲಿ ಅಂಬಿಗೇರಾ ಹತ್ಯೆ ಪ್ರಕರಣದ ವಿಚಾರವಾಗಿ ಬಹಳ ನೊಂದುಕೊಂಡಿದ್ದ ಯಶೋದಾ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದು, ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುವಾಗಲೂ ಬಹಳ ಭಾವೋದ್ರಿಕ್ತರಾಗಿದ್ದು, ಆರೋಪಿಯನ್ನು ಗಲ್ಲಿಗೇರಿಸಬೇಕು. ಇಲ್ಲದೇ ಇದ್ದರೆ ನಮಗೊಪ್ಪಿಸಿ ಕೊಂದು ಬಿಡುತ್ತೇವೆ ಎಂದು ಹೇಳಿದ್ದು ಪ್ರಸಾರವಾಗಿತ್ತು.

ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿ ವಿವಿಧ ಮಠಾಧೀಶರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ನಿನ್ನೆ (ಮೇ 18) ರಂದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಅಂಜಲಿ ಅಂಬಿಗೇರಾ ಸಹೋದರಿ ಯಶೋದಾ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಪ್ರಜ್ಞಾಹೀನರಾಗಿ ಬಿದ್ದ ಘಟನೆಯೂ ನಡೆದಿತ್ತು. ಕೂಡಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆಯಲು ಮನೆಗೆ ಕಳುಹಿಸಲಾಗಿತ್ತು. ಆದರೆ, ಮನೆಗೆ ಹೋದ ಯಶೋದಾ, ನಿನ್ನೆ ರಾತ್ರಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರೆಂದು ವರದಿ ಹೇಳಿದೆ.

ಗಮನಿಸಿ; ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ

ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

1) ಅಂಜಲಿ ಅಂಬಿಗೇರ್ ಅವರ ಸಹೋದರಿ ಯಶೋದಾ ನಿನ್ನೆ (ಮೇ 18) ರಾತ್ರಿ ತಮ್ಮ ಮನೆಯಲ್ಲಿಯೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕಳವಳಕಾರಿ ಘಟನೆ ನಡೆದಿದೆ. ಅವರು ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

2) ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯದ ಕಾರಣ ನೀಡಿ ನಿನ್ನೆ (ಮೇ 18) ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ಅವರನ್ನು ಇಲಾಖೆ ಅಮಾನತು ಮಾಡಿದೆ.

3) ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಿನ್ನೆ (ಮೇ 18) ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾ ವೇದಿಕೆಗೆ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಸ್ವಾಮೀಜಿಗಳಿಂದ ಮನವಿ ಸ್ವೀಕರಿಸಿದರು. ಅಂಜಲಿ ಕುಟುಂಬದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

4) ಪ್ರತಿಭಟನಾ ವೇದಿಕೆಯ ಮೇಲೆಯೇ ಭಾವೋದ್ರೇಕಗೊಂಡಿದ್ದ ಯಶೋದಾ (ಅಂಜಲಿ ಅಂಬಿಗೇರ ಸಹೋದರಿ) ಅಳುತ್ತಾ ಕುಸಿದುಹೋಗಿದ್ದರು. ತೀವ್ರ ಅಸ್ವಸ್ಥರಾಗಿ ಪ್ರಜ್ಞೆ ಕಳೆದುಕೊಂಡ ಅವರಿಗೆ ಅಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಜ್ಯೂಸ್ ಕುಡಿಸಿ ಸಾಂತ್ವನ ಹೇಳಿ ಮನೆಗೆ ಕಳುಹಿಸಿದ್ದರು.

5) ಅಂಜಲಿಯನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದ. ಅವರ ಮಾತುಗಳನ್ನು ನಾನು ನಂಬುತ್ತಿಲ್ಲ. ಆತ ಕಳೆದ ಕೆಲವು ವರ್ಷಗಳಿಂದ ಸರಿ ಇರಲಿಲ್ಲ. ಆರು ತಿಂಗಳಿಂದ ಮನೆಗೂ ಬಂದಿಲ್ಲ. ಎಷ್ಟು ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿಲ್ಲ. ಆತ ಮಾಡಿದ್ದು ಆತನೇ ಅನುಭವಿಸಬೇಕು. ನಾನು ಆತನನ್ನು ಬಿಡಿಸಿಕೊಂಡುಬರಲು ಹೋಗಲ್ಲ. ನ್ಯಾಯಾಲಯ ಏನು ಶಿಕ್ಷೆ ವಿಧಿಸುವುದೋ ವಿಧಿಸಲಿ, ಅದನ್ನು ಆತ ಅನುಭವಿಸಲಿ ಎಂದು ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಸಾವಂತ ತಾಯಿ ಸವಿತಾ ಹೇಳಿದ್ದಾಗಿ ಈ ಟಿವಿ ವರದಿ ಮಾಡಿದೆ.

6) ಅಂಜಲಿ ಅಂಬಿಗೇರ ಹತ್ಯೆಗೂ ಮೊದಲು ಆರೋಪಿ ವಿಶ್ವ (ಗಿರೀಶ್ ಸಾವಂತ) ಮತ್ತೊಬ್ಬ ಬಾಲಕಿಯನ್ನು ಬೆದರಿಸಿ ವಂಚಿಸಿದ್ದ. ಈ ಕುರಿತು ನಿನ್ನೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸ್ ನಿರ್ಲಕ್ಷ್ಯದ ವಿಚಾರವೂ ಗಮನಸೆಳೆದಿದೆ. ಆರೋಪಿ ವಿಶ್ವ ಮಗಳ ಜೊತೆ ಪ್ರೀತಿಸುವ ನಾಟಕವಾಡಿ, ಚಿನ್ನಾಭರಣ ದೋಚಿದ್ದ. ಆಕೆಗೆ ಜೀವ ಬೆದರಿಕೆಯನ್ನೂ ಹಾಕಿದ್ದ. ಈ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು “ನಿಮ್ಮ ಮಗಳು ಸಣ್ಣವಳು ಅಂತ ದೂರು ತೆಗೆದುಕೊಳ್ಳಲಿಲ್ಲ” ಎಂದು ದೂರು ದಾಖಲಿಸಿರುವ ಬಾಲಕಿಯ ತಂದೆ ಪರಶುರಾಮ್‌ ಆರೋಪಿಸಿದ್ದಾರೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.

7) ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ (Santosh lad) ಅವರು, ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. 2 ಲಕ್ಷ ರೂಪಾಯಿ ಪರಿಹಾರ ಚೆಕ್ ಕೂಡ ನೀಡಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

8) ಕರ್ತವ್ಯ ಲೋಪವೆಸಗಿದ ಕಾರಣ ಅಲ್ಲಿನ ಠಾಣಾ ಪೊಲೀಸ್​ ಇನ್ಸ್​ಪೆಕ್ಟರ್​ ಮತ್ತು ಮಹಿಳಾ ಹೆಡ್​​ಕಾನ್​ಸ್ಟೇಬಲ್​ ಅವರನ್ನು ಅಮಾನತುಗೊಳಿಸಲಾಗಿದೆ. ನನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಅಂತ ಕೊಲೆಯಾದ ಅಂಜಲಿಯ ಅಜ್ಜಿ ಪೊಲೀಸರಿಗೆ ಕೇವಲ ಮಾಹಿತಿ ನೀಡಿದ್ದರು. ಸದ್ಯ ಕೊಲೆ ಆರೋಪಿ ವಿಶ್ವನನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮೇ 17 ರಂದು ಬೆಂಗಳೂರಿನಲ್ಲಿ ಹೇಳಿದ್ದರು.

9) ಇದಕ್ಕೂ ಮೊದಲು, ರೈಲಿನಲ್ಲಿ ಮಹಿಳೆಗೆ ಚಾಕು ಇರಿಯಲು ಪ್ರಯತ್ನಿಸಿದ್ದ ಆರೋಪಿ ಗಿರೀಶ್ ಸಾವಂತ (ವಿಶ್ವ)ನನ್ನು ಮಾಯಕೊಂಡ ಸಮೀಪ ರೈಲ್ವೆ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಬಳಿಕ ಹುಬ್ಬಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

10) ಹುಬ್ಬಳ್ಳಿಯ ವೀರಾಪುರ ಓಣಿಯ ಕರಿಯಮ್ಮನ ಗುಡಿ ಸಮೀಪದ ನಿವಾಸಿ ಅಂಜಲಿ ಮೋಹನ ಅಂಬಿಗೇರ (20) ಎಂಬ ಯುವತಿಯನ್ನು ಪಕ್ಕದ ರಾಮಾಪುರ ಓಣಿಯ ನಿವಾಸಿ ಗಿರೀಶ್ ಎಂ ಸಾವಂತ ಎಂಬಾತ ಕಳೆದ ಬುಧವಾರ (ಮೇ 15) ಬೆಳಗಿನ ಜಾವ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹೆಚ್ಚಿದ ಜನಾತಂಕ; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್ಚಿದ ಒತ್ತಡ

ಹುಬ್ಬಳ್ಳಿಯ ನೇಹಾ ಹಿರೇಮಠ್ ಮತ್ತು ಅಂಜಲಿ ಅಂಬಿಗೇರಾ ಹತ್ಯೆ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡ ಹೆಚ್ಚಾಗಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ. ಅವರನ್ನು ಗಲ್ಲಿಗೇರಿಸಬೇಕು ಎಂಬ ಆಗ್ರಹ ಹೆಚ್ಚಾಗಿದ್ದು, ದಿನೇದಿನೆ ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದೆ.

Whats_app_banner