Byadgi Chilli Price: ಬ್ಯಾಡಗಿ ಮೆಣಸಿನಕಾಯಿ ದರ ಹಠಾತ್ ಇಳಿಕೆ; ಎಪಿಎಂಸಿ ಕಚೇರಿ, ವಾಹನಗಳಿಗೆ ಬೆಂಕಿ, ದಿಢೀರ್ ರೈತ ಪ್ರತಿಭಟನೆ
Byadgi Chilli Price: ಬ್ಯಾಡಗಿ ಮೆಣಸಿನಕಾಯಿ ದರ ಹಠಾತ್ ಇಳಿಕೆಯಾದ ಕಾರಣ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಬ್ಯಾಡಗಿ ಎಪಿಎಂಸಿ ಕಚೇರಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಸೋಮವಾರ ಸಂಜೆ ಉದ್ವಿಗ್ನತೆ ಕಂಡುಬಂದಿತ್ತು.
ಬ್ಯಾಡಗಿ (ಹಾವೇರಿ): ಬ್ಯಾಡಗಿ ಒಣ ಮೆಣಸಿನಕಾಯಿ ದರ (Byadgi Chilli Price) ಶೇಕಡ 10ಕ್ಕಿಂತ ಹೆಚ್ಚು ಹಠಾತ್ ಇಳಿಕೆ ಮಾಡಿದ ಕಾರಣ ತೀವ್ರ ಅಸಮಾಧಾನಕ್ಕೆ ಒಳಗಾದ ಮೆಣಸಿನಕಾಯಿ ಬೆಳೆಗಾರರು ಸೋಮವಾರ ಸಂಜೆ ದಿಢೀರ್ ಉಗ್ರ ಪ್ರತಿಭಟನೆ (Farmer Protest) ವ್ಯಕ್ತಪಡಿಸಿದರು. ಎಪಿಎಂಸಿ ಕಚೇರಿ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಒಣ ಮೆಣಸಿನಕಾಯಿ ದರವನ್ನು ಹಠಾತ್ತನೆ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಟೆಂಡರ್‌ಗೆ ಇಟ್ಟಿದ್ದ ಸಾವಿರಾರು ರೈತರು ಆಕ್ರೋಶಗೊಂಡಿದ್ದರು. ದಿಢೀರ್ ಪ್ರತಿಭಟನೆ ವ್ಯಕ್ತವಾಯಿತು. ಎಪಿಎಂಸಿ ಮುಖ್ಯ ಕಚೇರಿ, ಅಲ್ಲಿದ್ದ ವಾಹನ, ಮತ್ತಿತರ ಸಾಮಗ್ರಿಗಳಿಗೆ ರೈತರು ಬೆಂಕಿ ಹಚ್ಚಿದರು. ಇದರಿಂದಾಗಿ ಎಪಿಎಂಸಿ ಆವರಣ ರಣಾಂಗಣದಂತೆ ಗೋಚರಿಸಿತು.
ಒಣಮೆಣಸಿನ ಕಾಯಿ ದರ ಕುಸಿತದ ದರಪಟ್ಟಿ ಪ್ರಕಟವಾದ ಕೂಡಲೇ ಸಾವಿರಕ್ಕೂ ಹೆಚ್ಚು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಮುತ್ತಿಗೆ ಹಾಕಿ ಕಂಪ್ಯೂಟರ್, ವಿವಿಧ ಸಾಮಗ್ರಿಗಳನ್ನು ಒಡೆದು ಹಾಕಿದರು. ಕಚೇರಿ ವಾಹನ, ಅಗ್ನಿ ಶಾಮಕ ವಾಹನಕ್ಕೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹಠಾತ್ತನೆ ನುಗ್ಗಿದ ರೈತರು ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು. ಅವರನ್ನು ನಿಯಂತ್ರಿಸಲು ಬಂದ ಬೆರಳೆಣಿಕೆಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಸಹ ಹೊಡೆದು ಓಡಿಸಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ದಿಢೀರ್ ವ್ಯಕ್ತವಾದ ರೈತ ಪ್ರತಿಭಟನೆಗೆ ವರ್ತಕರು, ದಲಾಲರು, ಕೂಲಿ ಕಾರ್ಮಿಕರು ಬೆಚ್ಚಿಬಿದ್ದರು. ರೈತರು ಕೈಗೆ ಸಿಕ್ಕ ಕಲ್ಲು ಬಡಿಗೆಗಳಿಂದ ವಾಹನ ಹಾಗೂ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ.
ದರ ಕುಸಿತದ ಕಾರಣ ಆಕ್ರೋಶಿತ ರೈತರು, ಅಧಿಕಾರಿಗಳ ಸಂಧಾನ ಯತ್ನ ವಿಫಲ
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ 3.13 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಸೋಮವಾರ ಬೆಲೆಯಲ್ಲಿ ಹಠಾತ್ ಕಡಿಮೆಯಾಗಿತ್ತು. ಮೆಣಸಿನಕಾಯಿ ಚೀಲ ಅತಿಹೆಚ್ಚು 34 ರಿಂದ 36 ಸಾವಿರ ರೂಪಾಯಿ ಇದ್ದದ್ದು ಸೋಮವಾರ ದಿಢೀರನೇ 30 ರಿಂದ 32 ಸಾವಿರ ರೂಪಾಯಿಗೆ ವಿಕ್ರಯವಾಯಿತು. ಇದರಿಂದ ರೈತರು ಸಿಟ್ಟಿಗೆದ್ದು ದಾಂಧಲೆಗಿಳಿದರು. ಅಧಿಕಾರಿಗಳು ರೈತರ ಜೊತೆ ಸಂಧಾನಕ್ಕೆ ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಪ್ರತಿಭಟನೆ ಹಿಂಸಾರೂಪ ಪಡೆಯಿತು. ಎಪಿಎಂಸಿ ಮುಖ್ಯ ಕಚೇರಿ ಆವರಣದಲ್ಲಿ ನಿಲ್ಲಿಸಿದ ಸ್ಕಾರ್ಪಿಯೋ ವಾಹನ, ಸಿಬ್ಬಂದಿ ಕಾರುಗಳನ್ನು ಪುಡಿಪುಡಿ ಮಾಡಿದ ರೈತರು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಪೊಲೀಸರ ಹಾಗೂ ಎಪಿಎಂಸಿ ಅಧಿಕಾರಿಗಳ ಎದುರಲ್ಲೇ ಅವು ಸುಟ್ಟು ಬೂದಿಯಾದವು.
ಅಗ್ನಿಶಾಮಕ ಸೇವೆ ಸಿಬ್ಬಂದಿ ಬೆಂಕಿ ಆರಿಸಲು ಬಂದಾಗ ಅವರ ವಾಹನಕ್ಕೂ ಬೆಂಕಿ ಹಚ್ಚಿದ ಘಟನೆ ನಡೆಯಿತು. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಲು ಮುಂದಾದರು. ಕೂಡಲೇ ಪೊಲೀಸರನ್ನು ಬೆನ್ನುಹತ್ತಿದ ರೈತರು ಅವರನ್ನೂ ಕಲ್ಲು, ಬಡಿಗೆಗಳಿಂದ ಬಡಿದರು.
ಹಿಂಸಾಚಾರಕ್ಕೆ ಸಂಬಂಧಿಸಿ 40 ರೈತರ ಬಂಧನ
ಬ್ಯಾಡಗಿ ಎಪಿಎಂಸಿ ಕಚೇರಿಗೆ ಪೀಠೋಪಕರಣ ಧ್ವಂಸಗೊಳಿಸಿದ, ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ 40 ರೈತರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾವಣಗೆರೆ ಐಜಿಪಿ ಹಾಗೂ ಎಸ್‌ಪಿ ಡಿವೈಎಸ್‌ಪಿ, ಹುಬ್ಬಳ್ಳಿ ಧಾರವಾಡದ ಎಸ್‌ಪಿ ಹಾಗೂ ಡಿವೈಎಸ್‌ಪಿ, ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರು, ಡಿಆರ್ ಹಾಗೂ ಕೆಸ್‌ಆರ್‌ಪಿ ವಾಹನಗಳು ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ರೈತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಮೆಣಸಿನಕಾಯಿ ಬೆಲೆ ಕುಸಿತಕ್ಕೆ ಸ೦ಬ೦ಧಿಸಿದ೦ತೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಅಹಿತಕರ ಘಟನೆಯಲ್ಲಿ ಗಾಯಗೊ೦ಡ ರೈತರು, ಪತ್ರಕರ್ತರು ಹಾಗೂ ಪೊಲಿಸ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)