Ganesh Festival: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿಕ್ತು ಸಮ್ಮತಿ; ಬಿಗಿ ಪೊಲೀಸ್ ಬಂದೋಬಸ್ತ್
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Eidgah MaidanHubballi) ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕೃತ ಅನುಮತಿ ನೀಡಿದ್ದು, ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈದ್ಗಾ ಮೈದಾನದಲ್ಲಿ ನಡೆಯಲಿರುವ ಗಣೇಶೋತ್ಸಕ್ಕೆ ಹಲವು ಷರತ್ತುಗಳ ಸಹಿತ ಅನುಮತಿ ನೀಡಲಾಗಿದೆ.
ಹುಬ್ಬಳ್ಳಿ: ನಗರದ ಚೆನ್ನಮ್ಮ ವರ್ತುಲ ಬಳಿಯ ಈದ್ಗಾ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ದೊರೆತಿದೆ. ಗಣೇಶೋತ್ಸವಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕೃತ ಅನುಮತಿ ನೀಡಿದ್ದು, ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈದ್ಗಾ ಮೈದಾನದಲ್ಲಿ ನಡೆಯಲಿರುವ ಗಣೇಶೋತ್ಸಕ್ಕೆ ಹಲವು ಷರತ್ತುಗಳ ಸಹಿತ ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 7ರಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸೆಪ್ಟೆಂಬರ್ 9ರಂದು ಮಧ್ಯಾಹ್ನ 12ರೊಳಗೆ ವಿಸರ್ಜನೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಇನ್ನು ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತಿದ್ದಂತೆ ಮೈದಾನದಲ್ಲಿ ಪೆಂಡಾಲ್ ಹಾಕುವ ಕಾರ್ಯ ಆರಂಭಗೊಂಡಿದೆ. ಈ ಬಾರಿ ಹುಬ್ಬಳ್ಳಿಯಲ್ಲಿಯೇ ಗಣೇಶನ ಮೂರ್ತಿ ನಿರ್ಮಾಣ ಮಾಡಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಇತರ ಪದಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಅಧ್ಯಕ್ಷ ಸಂಜು ಬಡಸ್ಕರ ಹೇಳಿದ್ದಾರೆ. ಈ ಸಂಬಂಧ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 7ರಿಂದ ಛಬ್ಬಿ ಗಣೇಶೋತ್ಸವ
ವಿಘ್ನ ನಿವಾರಕ ಗಣೇಶ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಭಕ್ತರು ಗಣಪತಿಯ ಹಬ್ಬಕ್ಕೆ ಸಕಲ ತಯಾರಿ ಮಾಡುತ್ತಿದ್ದಾರೆ. ಕೆಲವು ಮನೆಗಳಲ್ಲಿ ತಲೆತಲಾಂತರದಿಂದ ಈ ಹಬ್ಬವನ್ನು ಮಾಡಿಕೊಂಡು ಬರಲಾಗುತ್ತಿದೆ. ಅದೇ ರೀತಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಕುಲಕರ್ಣಿ ಮನೆತನದಲ್ಲಿ ಕೆಂಪು ಗಣಪತಿ ಉತ್ಸವವನ್ನು 198 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಉತ್ಸವವು ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 9ರವರೆಗೆ ಮೂರು ದಿನಗಳ ಕಾಲ ಜರುಗಲಿದೆ. ಸೆಪ್ಟೆಂಬರ್ 7ರಂದು ಏಳು ಮನೆತನಗಳ ಗಣಪತಿಯನ್ನು ತಂದು ಚಂದ್ರೋದಯಕ್ಕೆ ಸರಿಯಾಗಿ ಪ್ರತಿಷ್ಠಾಪನೆ ಮಾಡಬೇಕು. ರಾತ್ರಿ 8.30ರಿಂದ ಗಣೇಶನ ದರ್ಶನಕ್ಕೆ ಅವಕಾಶವಿದೆ. ಸೆಪ್ಟೆಂಬರ್ 9ರ ತಡರಾತ್ರಿ ಗಣಪತಿಯನ್ನು ವಿಸರ್ಜಿಸಲಾಗುತ್ತದೆ.
1827ರಿಂದ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಛಬ್ಬಿ ಗ್ರಾಮದ ಕುಲಕರ್ಣಿ ಮನೆತನದಲ್ಲಿ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ನಡೆಸಿಕೊಂಡು ಬರಲಾಗುತ್ತಿದೆ. ರಾಮಚಂದ್ರ ಅನಂತ್ ಕುಲಕರ್ಣಿ, ಮೋಹನರಾವ್ ಹನುಮಂತರಾವ್ ಕುಲಕರ್ಣಿ, ವಿನಾಯಕ ಕಾಶಿನಾಥ ಕುಲಕರ್ಣಿ, ನಾರಾಯಣರಾವ್ ರಾಮಚಂದ್ರ ಕುಲಕರ್ಣಿ, ಸೋಮರಾವ್ ಶ್ರೀಪಾದರಾವ್ ಕುಲಕರ್ಣಿ, ವಿಶ್ವನಾಥ ವಾಸುದೇವ ಕುಲಕರ್ಣಿ, ಮಾಲತೇಶ ಶಂಕರ ಕುಲಕರ್ಣಿ ಇವರ ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಬರುವ ಭಕ್ತರಿಗೆ ಉಚಿತ ದರ್ಶನ ಮತ್ತು ಪ್ರಸಾದ ವ್ಯವಸ್ಥೆ ಇದೆ. ಛಬ್ಬಿ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ವ್ಯಾಪಕ ಪೊಲೀಸ್ ಬಂದೋಬಸ್ತ್ ಅಲ್ಲದೆ ವಾಯುವ್ಯ ಸಾರಿಗೆ ಸಂಸ್ಥೆಯು ವಿಶೇಷ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಿದೆ.
ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಯಲ್ಲಿ ಆಯುಧ ಹೊಂದಿರುವ ಇಂತಹ ಅಪರೂಪದ ಕೆಂಪು ಬಣ್ಣದ ಗಣಪತಿಯನ್ನು ಮೈಸೂರು ಹಾಗೂ ಇಂದೂರಿನ ಅರಮನೆಯಲ್ಲಿ ಕಾಣಬಹುದಾಗಿದೆ. ಛಬ್ಬಿ ಗಣೇಶನ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜಿಲ್ಲೆ, ಹೊರಜಿಲ್ಲ, ನೆರೆಯ ರಾಜ್ಯಗಳಿಂದಲೂ ಭಕ್ತರು ಧಾವಿಸುತ್ತಾರೆ.