Hubballi Murder: 5 ವರ್ಷದ ಬಾಲಕಿ ಅತ್ಯಾಚಾರ–ಕೊಲೆ, ಆರೋಪಿ ಎನ್‌ಕೌಂಟರ್‌ಗೆ ಬಲಿ; ಹುಬ್ಬಳ್ಳಿ ಪ್ರಕರಣದ ಇದುವರೆಗಿನ 10 ವಿದ್ಯಮಾನಗಳು
ಕನ್ನಡ ಸುದ್ದಿ  /  ಕರ್ನಾಟಕ  /  Hubballi Murder: 5 ವರ್ಷದ ಬಾಲಕಿ ಅತ್ಯಾಚಾರ–ಕೊಲೆ, ಆರೋಪಿ ಎನ್‌ಕೌಂಟರ್‌ಗೆ ಬಲಿ; ಹುಬ್ಬಳ್ಳಿ ಪ್ರಕರಣದ ಇದುವರೆಗಿನ 10 ವಿದ್ಯಮಾನಗಳು

Hubballi Murder: 5 ವರ್ಷದ ಬಾಲಕಿ ಅತ್ಯಾಚಾರ–ಕೊಲೆ, ಆರೋಪಿ ಎನ್‌ಕೌಂಟರ್‌ಗೆ ಬಲಿ; ಹುಬ್ಬಳ್ಳಿ ಪ್ರಕರಣದ ಇದುವರೆಗಿನ 10 ವಿದ್ಯಮಾನಗಳು

Hubballi Murder: ಹು‌ಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಆರೋಪಿ ಈಗ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದ ಇದುವರೆಗಿನ 10 ವಿದ್ಯಮಾನಗಳ ವಿವರ ಇಲ್ಲಿದೆ.

ಅತ್ಯಾಚಾರ ಆರೋಪಿಯನ್ನು ಬಂಧಿಸುವಂತೆ ಪೊಲೀಸರೆದುರು ಜನರ ಆಕ್ರೋಶ (ಬಲಚಿತ್ರ) ಪಿಎಸ್‌ಐ ಅನ್ನಪೂರ್ಣ (ಎಡಚಿತ್ರ)
ಅತ್ಯಾಚಾರ ಆರೋಪಿಯನ್ನು ಬಂಧಿಸುವಂತೆ ಪೊಲೀಸರೆದುರು ಜನರ ಆಕ್ರೋಶ (ಬಲಚಿತ್ರ) ಪಿಎಸ್‌ಐ ಅನ್ನಪೂರ್ಣ (ಎಡಚಿತ್ರ) (PC: Deccan Herald/ Instagram )

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶದೆಲ್ಲೆಡೆ ಸದ್ದು ಮಾಡಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಈ ಘಟನೆ ಸಂಬಂಧ ಹುಬ್ಬಳ್ಳಿ ಮಂದಿ ರೊಚ್ಚಿಗೆದ್ದಿದ್ದರು. ಈ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಕಂಡುಹುಡುಕಿದ್ದರು. ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆತ ಈಗ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಅತ್ಯಾಚಾರ ಆರೋಪಿಯ ಎನ್‌ಕೌಂಟರ್ ಮಾಡಿರುವ ಪಿಎಸ್‌ಐ ಅನ್ನಪೂರ್ಣರನ್ನು ಲೇಡಿ ಸಿಂಗಂ ಎಂದು ಕರೆಯುವ ಜೊತೆಗೆ ಆಕೆಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೀವು ತಿಳಿಯಬೇಕಾದ 10 ಅಂಶಗಳು ಇಲ್ಲಿವೆ.

ಹುಬ್ಬಳ್ಳಿ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 10 ಅಂಶಗಳು

  1. ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಬಿಹಾರ ಮೂಲದ ರಿತೇಶ್‌ ಕುಮಾರ್ ಎಂಬ ವ್ಯಕ್ತಿ 5 ವರ್ಷ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಸಾಕಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ.
  2. ಕೊಪ್ಪಳ ಮೂಲದ ಹುಬ್ಬಳ್ಳಿಯಲ್ಲಿ ನೆಲೆಸಿರುವ ದಂಪತಿಯ 5 ವರ್ಷದ ಮಗಳು ಮೃತ ಬಾಲಕಿ. ತಂದೆ ಕೆಲಸಕ್ಕೆ ಹೋದಾಗ, ತಾಯಿ ಮನೆಯೊಳಗೆ ಕೆಲಸ ಮಾಡುತ್ತಿರುತ್ತಾರೆ. ಬಾಲಕಿ ಮನೆಯ ಹೊರಗಡೆ ಆಟವಾಡುತ್ತಿದ್ದ ಸಂದರ್ಭ ಚಾಕೊಲೇಟ್ ಕೊಡಿಸುವ ಆಸೆ ತೋರಿಸುವ ರಿತೇಶ್, ಆಕೆಯನ್ನು ಕರೆದುಕೊಂಡು ಹೋಗುತ್ತಾನೆ.
  3. ನಿರ್ಜನ ಪ್ರದೇಶಕ್ಕೆ ಹೋಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆತ, ಪಾಳು ಬಿದ್ದ ಕಟ್ಟಡದಲ್ಲಿ ಮೃತದೇಹವನ್ನು ಎಸೆದು ಹೋಗಿರುತ್ತಾನೆ.

ಇದನ್ನೂ ಓದಿ: ಹುಬ್ಬಳ್ಳಿಯ 5 ವರ್ಷದ ಬಾಲಕಿಯನ್ನು ಅಪಹರಿಸಿ ಕೊಂದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ

4. ಮಗು ಕಾಣೆಯಾಗಿದೆ ಎಂದು ತಿಳಿದ ತಾಯಿ ಸ್ಥಳೀಯರೊಂದಿಗೆ ಸೇರಿ ಹುಡುಕಾಟ ನಡೆಸುತ್ತಾಳೆ. ಆಗ ಪಾಳುಬಿದ್ದ ಕಟ್ಟಡದಲ್ಲಿ ಮಗುವಿನ ಮೃತ ದೇಹ ಪತ್ತೆಯಾಗುತ್ತದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸುವ ಸ್ಥಳೀಯರು ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ಅದರ ಬೆನ್ನಲ್ಲೇ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಾರೆ.

5. ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ. ಘಟನೆಯ ಸಂಬಂಧ ದೂರು ಬಂದ ಕೂಡಲೇ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ಅಶೋಕ್‌ ನಗರ ಠಾಣೆಯ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸುತ್ತಾರೆ.

6. ಘಟನೆ ನಡೆದ 6 ಗಂಟೆಯೊಳಗೆ ಆರೋಪಿ ಇರುವ ಸ್ಥಳವನ್ನು ಗುರುತಿಸುವ ಪೊಲೀಸರು ಆತನ ಬಂಧನಕ್ಕೆಂದು ಸ್ಥಳಕ್ಕೆ ತೆರಳಿದಾಗ ಆತ ತಪ್ಪಿಸಿಕೊಳ್ಳುವ ಸಲುವಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಾನೆ. ಈ ಸಂದರ್ಭ ಅಶೋಕನಗರ ಠಾಣೆ ಪಿಎಸ್‌ಐ ಅನ್ನಪೂರ್ಣ, ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸುತ್ತಾನೆ. ಆ ಸಂದರ್ಭ ಅನ್ನಪೂರ್ಣ ಅವರು ಹಾರಿಸಿದ ಗುಂಡು ಆತನ ಕಾಲು ಹಾಗೂ ಬೆನ್ನಿನ ಭಾಗಕ್ಕೆ ತಗುಲುತ್ತದೆ. ಕೂಡಲೇ ಅವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ರಿತೇಶ್‌ ಆಸ್ಪತ್ರೆಯಲ್ಲಿ ಮರಣ ಹೊಂದುತ್ತಾನೆ.

6. ರಿತೇಶ್‌ ಕುಮಾರ್‌ನನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿ ಪೊಲೀಸರ ಕಾರ್ಯ ಈಗ ಜನ ಮೆಚ್ಚುಗೆ ಪಾತ್ರವಾಗಿದೆ. ಅನ್ನಪೂರ್ಣವನ್ನು ಲೇಡಿ ಸಿಂಗಂ ಎಂದು ಜನ ಕರೆಯುತ್ತಿದ್ದಾರೆ.

7. ಇನ್ನೊಂದೆಡೆ ಇಂತಹ ಆರೋಪಿಗಳನ್ನು ಮಾತ್ರ ನಿಮ್ಮಿಂದ ಕೊಲ್ಲಲ್ಲು ಸಾಧ್ಯವಾಗುವುದು. ಪ್ರಮುಖ ಜಾತಿ ಧರ್ಮದಿಂದ ಬಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಪೊಲೀಸರು ಎನ್‌ಕೌಂಟರ್ ಮಾಡುವುದಿಲ್ಲ ಎಂಬ ಜನಾಕ್ರೋಶವು ಕೇಳಿಬರುತ್ತಿದೆ. ಇಂತಹ ಆರೋಪಿಗಳನ್ನು ನಮಗೆ ಒಪ್ಪಿಸಿ, ನಾವು ಅವರಿಗೆ ತಕ್ಕ ಶಿಕ್ಷೆ ಕೊಡುತ್ತೇವೆ ಎಂದು ಜನರು ಪೊಲೀಸರಿಗೆ ಅಗ್ರಹಿಸುತ್ತಿದ್ದಾರೆ.

8. ಈ ಪ್ರಕರಣವನ್ನು ಸೌಜನ್ಯ ಪ್ರಕರಣಕ್ಕೆ ಹೋಲಿಸಿರುವ ಜನರು ನಿಜವಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸೋತಿದೆ. ಕಾನೂನಿನ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

9. ಈ ಘಟನೆ ಸಂಬಂಧ ಮೃತ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಕುಟುಂಬಸ್ಥರಿಗೆ ಸ್ಲಂ ಬೋರ್ಡ್‌ನಿಂದ ಒಂದು ಮನೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

10. ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಹೊರ ರಾಜ್ಯಗಳಿಂದ ಬಂದವರಿಂದಲೇ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner