Breaking News: ಸಿಲಿಂಡರ್ ಸೋರಿಕೆ ಪ್ರಕರಣ ; ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸರಣಿ ಮುಂದುವರಿಕೆ, ಮತ್ತಿಬ್ಬರ ಸಾವು
ಹುಬ್ಬಳ್ಳಿಯಲ್ಲಿ ಸಿಲೆಂಡರ್ ಸ್ಪೋಟದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇನ್ನೂ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಈವರೆಗೂ ಎಂಟು ಮಂದಿ ಮೃತಪಟ್ಟಂತಾಗಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ವಾರ ಸಿಲೆಂಡರ್ ಸ್ಪೋಟದಿಂದ ನಡೆದಿದ್ದ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇನಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎಂಟು ಮಂದಿ ಪ್ರಾಣ ಕಳೆದುಕೊಂಡಂತಾಗಿದೆ. ಇನ್ನೊಬ್ಬನಿಗೆ ಚಿಕಿತ್ಸೆ ಮುಂದುವರಿದಿದೆ.ಹುಬ್ಬಳ್ಳಿಯ ಉಣಕಲ್ ನಿವಾಸಿ ಪ್ರಕಾಶ ಬಾರಕೇರ ಎಂಬುವವರು ಮೃತಪಟ್ಟಿದ್ದಾರೆ. ಮೃತ ಅಯ್ಯಪ್ಪ ಮಾಲಾಧಾರಿ ಪ್ರಕಾಶ ಬಾರಕೇರ (42) ಅವರಿಗೆ ತೀವ್ರ ಗಾಯಗಳಾಗಿದ್ದವು. ಸೋಮವಾರ ರಾತ್ರಿಯೂ ತೇಜೇಸ್ವರ್ ಎನ್ನುವವರು ಪ್ರಾಣ ಕಳೆದುಕೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಾಲಾಧಾರಿಗಳು ಕೊನೆಯುಸಿರೆಳೆದರು. ಇನ್ನೋರ್ವ ಅಯ್ಯಪ್ಪ ಮಾಲಾಧಾರಿ 12 ವರ್ಷದ ಬಾಲಕನಿಗೆ ಚಿಕಿತ್ಸೆಯನ್ನು ಕಿಮ್ಸ್ ವೈದ್ಯಾಧಿಕಾರಿಗಳ ತಂಡ ಮುಂದುವರೆಸಿದ್ದು. ಆತ ಚೇತರಿಸಿಕೊಳ್ಳುತ್ತಿದ್ದಾನೆ.
ಭಾನುವಾರ ಬೆಳಿಗ್ಗೆ ಶಂಕರ ಚವ್ಹಾಣ್ (30) ಬೆಳಗಿನ ಜಾವದ ಹೊತ್ತಿಗೆ ಸಾವನ್ನಪ್ಪಿದರೆ ಮಂಜುನಾಥ ವಾಘ್ಮೋಡೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದರು.
ಸಾಯಿನಗರದ ಅಚ್ಚವ್ವಳ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಕಳೆದ ಭಾನುವಾರ ಸಂಜೆ ಸಿಲಿಂಡರ್ ಸ್ಫೋಟ ಸಂಭವಿಸಿ, 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ನಿಜಲಿಂಗಪ್ಪ ಬೇಪುರಿ (38), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗರಾಜು ಬೀರನೂರ (24) ಈಗಾಗಲೇ ಮೃತಪಟ್ಟಿದ್ದರು.
ಅಯ್ಯಪ್ಪ ಸ್ವಾಮಿ ಭಕ್ತರು ಮನೆಯಿಂದ ಹೊರಗಿದ್ದು ನಿತ್ಯ ಪೂಜೆಗೆ ತಯಾರಿ ಮಾಡಿಕೊಳ್ಳುತ್ತಾರೆ. ಬೆಳಗಿನಜಾವ ಬೇಗನೇ ಎದ್ದು ಸ್ನಾನ, ಪೂಜೆ ಮಾಡುತ್ತಾರೆ. ಗುಂಪಾಗಿ ಒಂದು ಕಡೆ ಇದ್ದು ಧಾರ್ಮಿಕ ಚಟುವಟಿಕೆಗಳು ನಡೆಸುವುದು ನಡೆದುಕೊಂಡು ಬಂದಿದೆ. ಈ ವೇಳೆ ಅನಾಹುತಗಳು ಆಗುತ್ತವೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ದೊಡ್ಡ ದುರಂತವೇ ಆಗಿದೆ. ಮಲಗಿದಾಗ ಗ್ಯಾಸ್ ಸಿಲೆಂಡರ್ ಗೆ ಒಬ್ಬರು ಒದ್ದಿದ್ದು ಅದು ಉರುಳಿ ಬಿದ್ದು ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಎಲ್ಲರೂ ಸುಟ್ಟು ಗಾಯಗೊಂಡಿದ್ದರು. ಇವರಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆಯಿದು. ಇನ್ನೊಬ್ಬ ಬಾಲಕ ಮಾತ್ರ ಬದುಕುಳಿದಿದ್ದು ಆತನಿಗೂ ಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ವಿಭಾಗ