Hubli News: ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ ಏರಿಕೆ, ಇನ್ನೂ ಇಬ್ಬರ ಸ್ಥಿತಿ ಗಂಭೀರ
ಹುಬ್ಬಳ್ಳಿಯಲ್ಲಿ ಕಳೆದ ವಾರ ಆಕಸ್ಮಿಕವಾಗಿ ಸಿಲೆಂಡರ್ ಸೋರಿ ನಂತರ ಸ್ಪೋಟಗೊಂಡಿದ್ದ ಪ್ರಕರಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ ಆರಕ್ಕೆ ಏರಿಕೆ ಕಂಡಿದೆ.
ಹುಬ್ಬಳ್ಳಿ: ವಾರದ ಹಿಂದೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಮಾಲಾಧಾರಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಇದೇ ಪ್ರಕರಣದಲ್ಲಿ ಮೊದಲು ಇಬ್ಬರು, ಆನಂತರ ಇನ್ನಿಬ್ಬರು ಮೃತಪಟ್ಟಿದ್ದರು. ಈಗ ಇನ್ನೂ ಇಬ್ಬರು ಜೀವ ಕಳೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ ಆರಕ್ಕೆ ತಲುಪಿದೆ. ಘಟನೆಯಲ್ಲಿ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಶಂಕರ ಚವ್ಹಾಣ್ (30) ಬೆಳಗಿನ ಜಾವದ ಹೊತ್ತಿಗೆ ಸಾವನ್ನಪ್ಪಿದರೆ ಮಂಜುನಾಥ ವಾಘ್ಮೋಡೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾನೆ. ಶಂಕರ ಕೆಎಂಸಿ ಆಸ್ಪತ್ರೆಯಲ್ಲೇ ಗುತ್ತಿಗೆ ಆಧಾರದಲ್ಲಿ ವಾರ್ಡಬಾಯ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಈಗ ಮೃತಪಟ್ಟಿರುವುದು ಸಿಬ್ಬಂದಿಯ ಬೇಸರಕ್ಕೆ ಕಾರಣವಾಗಿದೆ.
ಸಾವಿನ ಸಂಖ್ಯೆಯಲ್ಲಿ ಏರಿಕೆ
ಸಾಯಿನಗರದ ಅಚ್ಚವ್ವಳ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಕಳೆದ ಭಾನುವಾರ ಸಂಜೆ ಸಿಲಿಂಡರ್ ಸ್ಫೋಟ ಸಂಭವಿಸಿ, 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ನಿಜಲಿಂಗಪ್ಪ ಬೇಪುರಿ (38), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24) ಈಗಾಗಲೇ ಮೃತಪಟ್ಟಿದ್ದರು.
ಘಟನಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಬಾರಕೇರ್, ವಿನಾಯಕ ಬಾರಕೇರ್, ತೇಜಸ್ವರ್ ಸಾತರೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು, ಒಬ್ಬನನ್ನು ಹೊರತುಪಡಿಸಿದರೆ ಉಳಿದಿಬ್ಬರ ಸ್ಥಿತಿಯು ಚಿಂತಾಜನಕವಾಗಿದೆ.
ಉಳಿಸಿಕೊಳ್ಳಲು ನಿರಂತರ ಪ್ರಯತ್ನ
ಗಾಯಗೊಂಡವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆವು. ವೈದ್ಯರೂ ಸಹಕಾರ ನೀಡಿದರು. ಆದರೂ ಸುಟ್ಟ ಗಾಯದ ಪ್ರಮಾಣ ಅಧಿಕವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಜೀವ ಬಿಟ್ಟಿದ್ದಾರೆ ಎಂದು ಇಬ್ಬರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಇನ್ನೂ ಮೂವರಿಗೂ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನಡೆದಿದೆ. ಒಬ್ಬಾತ ಚೇತರಿಸಿಕೊಳ್ಳುತ್ತಿದ್ದಾನೆ. ಇನ್ನು ಇಬ್ಬರ ಸ್ಥಿತಿ ಈಗಲೂ ಚಿಂತಾಜನಕವಾಗಿದೆ. ಚಿಕಿತ್ಸೆಯನ್ನು ನಾವು ಮುಂದುವರಿಸಿದ್ದೇವೆ ಎನ್ನುವುದು ಹುಬ್ಬಳ್ಳಿ ಕಿಮ್ಸ್ ವೈದ್ಯರು ನೀಡುವ ವಿವರಣೆ.
ಇವರಿಗೂ ಪರಿಹಾರ ಸಿಗುವ ಸಾಧ್ಯತೆ
ಈಗಾಗಲೇ ಮೃತಪಟ್ಟಿರುವ ಕುಟುಂಬಗಳಿಗೆ ಐದು ಲಕ್ಷ ರೂ. ನೀಡುವುದಾಗಿ ಸರ್ಕಾರ ಕಳೆದ ವಾರ ಹೇಳಿತ್ತು. ಸಚಿವ ಸಂತೋಷ್ ಲಾಡ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಪ್ರಕಟಿಸಿದ್ದರು. ಹಂತ ಹಂತವಾಗಿ ಪರಿಹಾರವೂ ಬಿಡುಗಡೆಯಾಗುತ್ತಿದೆ. ಈಗ ಮೃತಪಟ್ಟವರ ಕುಟುಂಬದವರಿಗೂ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ನೀಡುವ ಸಾಧ್ಯತೆಯಿದೆ.
ಅಯ್ಯಪ್ಪ ಸ್ವಾಮಿ ಭಕ್ತರು ಮನೆಯಿಂದ ಹೊರಗಿದ್ದು ನಿತ್ಯ ಪೂಜೆಗೆ ತಯಾರಿ ಮಾಡಿಕೊಳ್ಳುತ್ತಾರೆ. ಬೆಳಗಿನಜಾವ ಬೇಗನೇ ಎದ್ದು ಸ್ನಾನ, ಪೂಜೆ ಮಾಡುತ್ತಾರೆ. ಗುಂಪಾಗಿ ಒಂದು ಕಡೆ ಇದ್ದು ಧಾರ್ಮಿಕ ಚಟುವಟಿಕೆಗಳು ನಡೆಸುವುದು ನಡೆದುಕೊಂಡು ಬಂದಿದೆ. ಈ ವೇಳೆ ಅನಾಹುತಗಳು ಆಗುತ್ತವೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ದೊಡ್ಡ ದುರಂತವೇ ಆಗಿದೆ. ಮಲಗಿದಾಗ ಗ್ಯಾಸ್ ಸಿಲೆಂಡರ್ ಗೆ ಒಬ್ಬರು ಒದ್ದಿದ್ದು ಅದು ಉರುಳಿ ಬಿದ್ದು ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಎಲ್ಲರೂ ಸುಟ್ಟು ಗಾಯಗೊಂಡಿದ್ದರು.
ಎಲ್ಲೆಡೆ ಈಗ ಮುನ್ನೆಚ್ಚರಿಕೆ
ಈಗಾಗಲೇ ಬಹಳಷ್ಟು ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೈಗೆ ಹೋಗಿ ಬಂದಿದ್ದರೆ, ಇನ್ನು ಕೆಲವರು ಜನವರಿ ಎರಡನೇ ವಾರ ನಡೆಯುವ ಶಬರಿಮಲೈ ಜ್ಯೋತಿ ದರ್ಶನದ ವೇಳೆ ಹೋಗುತ್ತಾರೆ. ಕರ್ನಾಟಕದಿಂದಲೂ ಇನ್ನೂ ಹಲವರು ಹೋಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದ, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಲಾಗುತ್ತಿದೆ.
ವಿಭಾಗ