ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು
ಕನ್ನಡ ಸುದ್ದಿ  /  ಕರ್ನಾಟಕ  /  ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು

ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಎರಡು ಕುಟುಂಬಗಳು ಬೀದಿಗೆ ಬಂದಿವೆ. ಮೈಕ್ರೊ ಫೈನಾನ್ಸ್‌ ಕಡೆಯವರು ಮನೆಗೆ ಬೀಗ ಜಡಿದು ಹೋಗಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು
ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು

ಧಾರವಾಡ :‌ ಕರ್ನಾಟಕದಲ್ಲಿ ಮೈಕ್ರೊ ಪೈನಾನ್ಸ್‌ನಿಂದ ಸಾಲ ಪಡೆದು ಹಲವಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಈ ಸಂಬಂಧ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಆ ಮೂಲಕ ಮೈಕ್ರೊ ಫೈನಾನ್ಸ್‌ ಅಬ್ಬರಕ್ಕೆ ಮೂಗುದಾರ ಹಿಡಿಯಲು ಮುಂದಾಗಿದೆ. ಈ ನಡುವೆಯೂ, ಸಾಲ ಪಡೆದವರ ಮೇಲೆ ಶೋಷಣೆ ಮುಂದುವರೆದಿದೆ. ರಾಜ್ಯದ ಹಲವು ಭಾಗಗಳಲ್ಲಿ ಸಾವು-ನೋವಿನ ಘಟನೆ ವರದಿಯಾಗುತ್ತಿದೆ. ಜತೆಗೆ ಕೆಲವೆಡೆ ಮನೆಯವರನ್ನೇ ಹೊರಗೆ ಹಾಕಿರುವ ಘಟನೆ ಬೆಳಕಿಗೆ ಬರುತ್ತಿದೆ. ಮನೆಯ ಬಾಗಿಲು ಹಾಕಿ ಬೀಗ ಜಡಿದು ಮನೆ ಸದಸ್ಯರನ್ನು ಹೊರ ಹಾಕಿರುವ ಘಟನೆ ಕುಂದಗೋಳ ತಾಲ್ಲೂಕಿನ ಹಿರೇನೇರ್ತಿ ಹಾಗೂ ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಹಿರೇನೇರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಹಾಗೂ ಕುಂದಗೋಳ ಪಟ್ಟಣದ ದಾಸಪ್ಪ ನಾಗಣ್ಣವರ ಅವರ ಮನೆಯಲ್ಲಿ ಈ ಘಟನೆ ಜರುಗಿವೆ. ಮೈಕ್ರೊ ಪೈನಾನ್ಸ್ ಹಾವಳಿಯಿಂದ ಕಾಟ ತಾಳಲಾರದೆ ಕುಟುಂಬ ಹೈರಾಣಾಗಿದೆ. ನಮ್ಮ ಮನೆಗೆ 4 ಜನ ಬಂದು ಮನೆಯಲ್ಲಿರುವ ಎಲ್ಲಾ ಸಾಮಾನುಗಳನ್ನು ಹೊರಗೆ ಹಾಕಿದ್ದಾರೆ. ನಮ್ಮ ಮನೆಗೆ ಬೀಗ ಹಾಕಿರುವದರಿಂದ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಕಟ್ಟಿಕೊಂಡು ನಮ್ಮ ಮಕ್ಕಳು ಹೊರಗಡೆ ಹೋಗಿದ್ದಾರೆ. ಮಗನಾದ ಮೌಲಾಸಾಬ ಬೂಕಟಗಾರ ಮನೆ ಬಿಟ್ಟು ಹೋಗಿದ್ದು, ಎಲ್ಲಿ ಇದ್ದಾರೆ ಎಂಬುದು ತಿಳಿಯುತ್ತಿಲ್ಲ. ನಾನು ಅಕ್ಕ-ಪಕ್ಕದವರ ಮನೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆಯವರ ಮನೆಯಲ್ಲಿ ಎಷ್ಟು ದಿನ ಅಂತ ಇಟ್ಟುಕೊಳ್ಳುತ್ತಾರೆ? ಎಂದು ಮಾಬುಬಿ ಹಾಗೂ ಮಮ್ಮುಸಾಬ ಬೂಕಟಗಾರ ಕಣ್ಣಿರಿಡುತ್ತಾ ತಮ್ಮ ಅಳಲು ತೊಂಡಿಕೊಂಡಿದ್ದಾರೆ.

ಅತ್ತ ಅಂಬೇಡ್ಕರ್ ನಗರದ ದಾಸಪ್ಪ ನಾಗಣ್ಣವರ ಕೂಡಾ ಮನೆ ಬಿಟ್ಟು ಬೇರೆಡೆ ಹೋಗಿರುವ ಘಟನೆ ಜರುಗಿದೆ. ಕುಂದಗೋಳ, ಹಿರೇನೇರ್ತಿ, ಹಿರೇಹರಕುಣಿ, ಸೇರಿದಂತೆ ವಿವಿಧ ಕಡೆ ಇಂತಹದೇ ಘಟನೆಗಳು ನಡೆಯುತ್ತಿದೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕದಿದ್ದರೆ, ಸಂಬಂಧಿಸಿದ ಇಲಾಖೆಯ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕ.ರ.ವೇ. ತಾಲ್ಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಎಚ್ಚರಿಸಿದ್ದಾರೆ.

ಆನ್‌ಲೈನ್ ಗೇಮ್ ಚಟ: ಯುವಕ ಆತ್ಮಹತ್ಯೆ

ಆನ್‌ಲೈನ್ ಗೇಮ್ ಚಟಕ್ಕೆ ಒಳಗಾಗಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಿನ್ನೆ (ಫೆ.4) ನಡೆದಿದೆ. ನಾಗರಾಜ ಶಿವಪ್ಪ ಉಳವಣ್ಣವರ (30) ನೇಣಿಗೆ ಶರಣಾದ ಯುವಕ. ಈತ ಧಾರವಾಡ ಐಐಟಿಯಲ್ಲಿ ಸ್ಟಾಫ್ ನರ್ಸ್‌ ಕೆಲಸ ನಿರ್ವಹಿಸುತ್ತಿದ್ದ. ಯುವಕ ಆನ್‌ಲೈನ್ ಗೇಮ್ ಚಟಕ್ಕೆ ಸಿಲುಕಿದ್ದ ಎಂದು ಹೇಳಲಾಗುತ್ತಿದ್ದು, ಅಂದಾಜು 20 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ರಾಮಪ್ಪ ಉನ್ನದ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

Whats_app_banner