Hubli News: ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ
Hubli News: ಹುಬ್ಬಳ್ಳಿ ನಗರದಲ್ಲಿ ಸಾಲಗಾರರ ಕಾಟ ತಾಳಲಾರದೇ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಟ್ರಕ್‌ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರ ಪ್ರಕರಣ ನಡೆದಿದೆ.

ಹುಬ್ಬಳ್ಳಿ: ಕರ್ನಾಟಕದ ಹಲವು ಭಾಗಗಳಲ್ಲಿ ಈಗ ಮೀಟರ್ ಬಡ್ಡಿ ಕಿರುಕುಳದ್ದೇ ಸದ್ದು ಜೋರಾಗಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಸಹಿತ ಹಲವು ಕಡೆಗಳಲ್ಲಿ ಬಡ್ಡಿ ಕಾಟ ತಾಳಲಾರದೇ ಹೆಣ್ಣು ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದರೆ, ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಹುಬ್ಬಳ್ಳಿ ನಗರದ ದಾರಾವತಿ ಹನುಮಂತ ದೇವಸ್ಥಾನದ ಬಳಿ ನಡೆದಿದೆ. ಹುಬ್ಬಳ್ಳಿ ಧಾರವಾಡ ನಗರದಲ್ಲಿ ಮೀಟರ್ ಬಡ್ಡಿ ಹಾವಳಿ ಕುರಿತು ದೂರುಗಳು ದಾಖಲಾಗುತ್ತಲೇ ಇದ್ದು, ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿ ಎಚ್ಚರಿಕೆಯನ್ನೂ ನೀಡಿದ್ಧಾರೆ. ಇದರ ನಡುವೆಯೇ ಹುಬ್ಬಳ್ಳಿ ನಗರದ ಉಣಕಲ್ ದುರ್ಗಮ್ಮನ ಓಣಿ ನಿವಾಸಿ ಸಿದ್ಧಪ್ಪ ಕೆಂಚಣ್ಣವರ( 42 ) ಮೃತ ದುರ್ದೈವಿಯಾಗಿದ್ದಾನೆ.
ಮೃತ ವ್ಯಕ್ತಿಯು ಮಹೇಶ್ ಚಿಕ್ಕವೀರಮಠ್ ಎಂಬ ವ್ಯಕ್ತಿಯ ಬಳಿ 10 ಲಕ್ಷ ರೂ. ಸಾಲವನ್ನು ತೆಗೆದುಕೊಂಡಿದ್ದ, ತಗೊಂಡ ಸಾಲಕ್ಕೆ 65 ಲಕ್ಷ ಬಡ್ಡಿ ತುಂಬಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿಟ್ಟು ಬೈಕ್ ಚಲಾಯಿಸುತ್ತಲೇ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ತನ್ನ ಸಹೋದರನ ಸಾವಿಗೆ ನ್ಯಾಯ ಬೇಕೆಂದು ಮೃತನ ಕುಟುಂಬಸ್ಥರು ಹಾಗೂ ಗೆಳೆಯರು ಗೋಕುಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಗೋಕುಲ್ ಪೊಲೀಸ್ ಠಾಣೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮೂಲಕ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಸಾಲ ಪಡೆದು ಹಣ ನೀಡಿದ್ದರೂ ಇನ್ನು ಅಸಲು ಹಣ ತೀರಿಲ್ಲ ಎಂದು ಕಿರುಕುಳ ನೀಡಲಾಗುತ್ತಿತ್ತು. ಕೆಲವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸರಿಯಾಗಿ ಲೆಕ್ಕವನ್ನೂ ನೀಡದೇ ಬರೀ ಬಾಕಿ ಕೊಡಬೇಕು ಎಂದು ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದಲ್ಲೆವನ್ನು ಹೇಳಿರಲಿಲ್ಲ. ಈಗ ಚಲಿಸುತ್ತಿದ್ದ ಗಾಡಿಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು ಎಂದು ಕುಟುಂಬದವರು ಪೊಲೀಸರ ಎದುರು ಹೇಳಿಕೊಂಡರು.
ಹುಬ್ಬಳ್ಳಿ ಧಾರವಾಡದಲ್ಲಿ ಹೀಗೆ ಮೀಟರ್ ಬಡ್ಡಿ ವಹಿವಾಟು ನಡೆಸುವವರ ಮೇಲೆ ಕ್ರಮವೂ ಆಗಿದೆ. ಪೊಲೀಸರು ನಿಗಾ ಇರಿಸಿದ್ದಾರೆ. ದೂರು ಬಂದ ಪ್ರಕರಣಗಳಲ್ಲಿ ಕ್ರಮವೂ ಆಗಿದೆ. ಹೀಗಿದ್ದರೂ ಈಗ ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿದ್ದಾರೆ.ಈ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ಧಾರೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ವಿಭಾಗ