Hubli News: ಹುಬ್ಬಳ್ಳಿ ಧಾರವಾಡದಲ್ಲಿ ಹೆಚ್ಚಿದ ಅಪರಾಧ ಪ್ರಕರಣ: 45 ಜನರನ್ನು ಗಡಿಪಾರು ಮಾಡಿದ ಪೊಲೀಸ್ ಆಯುಕ್ತರು
ಹುಬ್ಬಳ್ಳಿ ಧಾರವಾಡದಲ್ಲಿ ವಿವಿಧ ಆರೋಪ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ನಿಗಾ ಇರಿಸುವ ಕ್ರಮವಾಗಿ 45 ಮಂದಿಯನ್ನು ಗಡಿಪಾರು ಮಾಡಿ ಆದೇಶಿಸಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.

ಹುಬ್ಬಳ್ಳಿ: ಛೋಟಾ ಮುಂಬೈ ಎಂದೇ ಹೆಸರಾದ ಹುಬ್ಬಳ್ಳಿ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರು ಕೂಡ ಸಕ್ರಿಯವಾಗಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ನಿಯಂತ್ರಿಸುವ ಜತೆಗೆ ಅವರಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರು ಸುಮಾರು 45 ವ್ಯಕ್ತಿಗಳನ್ನು ಗಡಿಪಾರು ಕೂಡ ಮಾಡಿದ್ದಾರೆ. ಇದರಲ್ಲಿ ಕೊಲೆ (8), ಕೊಲೆಗೆ ಯತ್ನ (12), ಸುಲಿಗೆ(3 ), ಮನೆ ಗಳ್ಳತನ(1), ಮಾನಭಂಗ (1), ಅಪಹರಣ(1), ಎನ್‌ಡಿಪಿಎಸ್ ಕಾಯ್ದೆ(9), ಅಬಕಾರಿ ಕಾಯ್ದೆ(1), ಓಸಿ ಮಟ್ಕಾ/ಕ್ರಿಕೆಟ್ ಬೆಟ್ಟಿಂಗ್ ಜೂಜಾಟ(6), ಹಲ್ಲೆ(1), ದೊಂಬಿ( 2) ಪ್ರಕರಣದಲ್ಲಿ ಪಾಲ್ಗೊಂಡ ಒಟ್ಟು 45 ಮಂದಿಯನ್ನು 1996, 55 ಕಾಯ್ದೆಯಡಿ ಗಡಿಪಾರು ಮಾಡಲಾಗಿದೆ.
45 ಅಪರಾಧಿಗಳನ್ನು ಬೀದರ್, ಯಾದಗಿರಿ, ಕಲಬುರಗಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರಗಳಿಗೆ ಗಡಿಪಾರು ಮಾಡಲಾಗಿದೆ. ಗಡಿಪಾರಾದ ಅಪರಾಧಿಗಳು ಜಿಲ್ಲೆ ನಿಗದಿ ಪಡಿಸಿದ ಠಾಣೆಯಲ್ಲಿ ವರದಿ ಮಾಡಿಕೊಳ್ಳಬೇಕು. ಆದೇಶ ಉಲ್ಲಂಘಿಸಿ ಮತ್ತೆ ನಗರಕ್ಕೆ ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಹಲವು ಅಪರಾಧಿಗಳು ನಾಪತ್ತೆಯಾಗಿದ್ದು, ಅವರಿಗೆ ಶೋಧ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಗುಂಡಾ ಕಾಯ್ದೆ ಹಾಕಲು ಸಹ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲು ಠಾಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹುಬ್ಬಳ್ಳಿ ನಗರ ಕಳೆದ ಎರಡು ವರ್ಷದಿಂದ ಅಪರಾಧ ಪ್ರಕರಣದಲ್ಲಿ ಭಾರೀ ಸುದ್ದಿಯಲ್ಲಿದೆ. ಕಾಲೇಜು ಯುವತಿಯರ ಹತ್ಯೆ, ಗುಂಡೇಟು, ಹಣ ವಹಿವಾಟಿನ ಮೋಸದ ಪ್ರಕರಣಗಳು, ಆರೋಪಿಗಳ ಮೇಲೆ ಫೈರಿಂಗ್‌ನ ಪ್ರಕರಣಗಳು ನಡೆದಿವೆ. ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ಬಿಗಿ ಕ್ರಮ ಕೈಗೊಂಡರೂ ಇನ್ನೂ ಕೆಲವರು ಆಟಾಟೋಪ ತೋರುತ್ತಲೇ ಇದ್ದಾರೆ. ಈ ಕಾರಣದಿಂದಲೇ ಅವರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸ್ ನಿಗಾ ಇರಿಸಿರುವ ವ್ಯಕ್ತಿಗಳನ್ನು ಆರು ತಿಂಗಳ ಕಾಲ ನಗರದಿಂದಲೇ ಹೊರಗೆ ಇಡಲಾಗುತ್ತದೆ. ಇಂತಹ ಜಿಲ್ಲೆಗೆ ಹೋಗಬೇಕು ಎನ್ನುವ ಸೂಚನೆಯನ್ನೂ ನೀಡಲಾಗಿದ್ದು, ಪೊಲೀಸ್ ಸಿಬ್ಬಂದಿ ಅಂತವರ ಚಲನವಲನದ ಮೇಲೆ ನಿಗಾ ಇರಿಸುವರು. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದರೆ ಬಂಧಿಸುವ ಇಲ್ಲವೇ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.
ಸಾಮಾನ್ಯವಾಗಿ ಚುನಾವಣೆ, ಗಲಭೆಗಳಂತ ಪ್ರಕರಣ ನಡೆದಾಗ ಗಡಿಪಾರು ಮಾಡಲಾಗುತ್ತಿತ್ತು. ಈಗ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ. ಆದ್ದರಿಂದ ಗಡಿಪಾರು ಮಾಡುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ಪ್ರಕರಣಗಳಲ್ಲಿ ಪಾಲ್ಗೊಂಡ ಹುಬ್ಬಳ್ಳಿ-ಧಾರವಾಡ ಅವಳಿನಗರ 45 ಜನರನ್ನು ಆರು ತಿಂಗಳವರೆಗೆ ಗಡಿಪಾರು ಮಾಡಲಾಗಿದೆ ಎನ್ನುವುದು ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೀಡುವ ವಿವರಣೆ.
ಸಿವಿಲ್ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್: ಆರೋಪಿಗೆ ಜಾಮೀನು
ಈಚೆಗೆ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ ಹಾಗೂ ರಿವಾಲ್ವರ್ ಬಳಸಿ ಹೆದರಿಸಿದ್ದಾರೆ ಎಂದು ಗೋಪನಕೊಪ್ಪ ನಿವಾಸಿ ಶ್ರೀಧರ ಅಲಿಯಾಸ್ ಚಿದು ನರಗುಂದ ದೂರು ದಾಖಲಿಸಿದ್ದರು. ಸಮೀರ ಮೈನುದ್ದೀನ್ ಸೇರಿದಂತೆ ಆರು ಜನರ ಮೇಲೆ ದೂರು ದಾಖಲಾಗಿತ್ತು.ಪ್ರಕರಣಕ್ಕೆ ಆರೋಪಿಗಳಲ್ಲಿ ಒಬ್ಬರಾದ ಸಮೀರಗೆ ಜಾಮೀನು ದೊರೆತಿದೆ.
ದೂರುದಾರ ಚಿದು ನರಗುಂದ ಜಮೀನು ನೀಡುವ ವಿಚಾರವಾಗಿ ಹಣಕಾಸಿನ ವ್ಯವಹಾರ ಸುಂದರ್ ಪೌಲ್ ಜೊತೆ ಮಾಡಿದ್ದರು. ಇದಕ್ಕೆ ಜಂಟಿಯಾಗಿ ಕೊಠಾರಿ ಸಹೋದರರು ಹಾಗೂ ಸಮೀರ ಹಣ ಹೂಡಿಕೆ ಮಾಡಿದ್ದರು. ಇದೀಗ ಅದೇ ಜಮೀನಿಗೆ ಚಿನ್ನದ ಬೆಲೆ ಬಂದಿದ್ದು ಹೇಗಾದರೂ ಮಾಡಿ ಜಮೀನನ್ನು ಮತ್ತೆ ಪಡೆಯಬೇಕು ಎನ್ನುವ ಉದ್ದೇಶಕ್ಕಾಗಿ ದೂರು ದಾಖಲಾಗಿದೆ. ಪೌಲ್ ಕುಟುಂಬಸ್ಥರನ್ನು, ಕೊಠಾರಿ ಸಹೋದರರು ಹಾಗೂ ಸಮೀರನನ್ನು ಬೆದರಿಸುವ ತಂತ್ರವಾಗಿ ಉದ್ದೇಶಪೂರ್ವಕವಾಗಿ ಸಿವಿಲ್ ವ್ಯಾಜ್ಯವನ್ನು ದೂರುದಾರರಾಗಿರುವ ಚಿದು ಅವರಿಗೆ ಸಹಕಾರ ಮಾಡುವ ಸಲುವಾಗಿ ಪೊಲೀಸರೇ ವಿಶೇಷ ಕಾಳಜಿ ವಹಿಸಿ ಈ ದೂರು ದಾಖಲಿಸಿದ್ದರು ಎಂದು ಹುಬ್ಬಳ್ಳಿಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೇಳಿ ಬರುತ್ತಿದೆ.
ಅವಳಿನಗರದ ಪೊಲೀಸರು ಇತ್ತೀಚಿಗೆ ಹಲವು ಸಿವಿಲ್ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿದ್ದು, ಉದ್ಯಮಿಗಳಲ್ಲಿ ಭಯದ ವಾತಾವರಣ ಕೂಡ ಸೃಷ್ಟಿ ಮಾಡಿದೆ. ಇನ್ನು ಜಾಮೀನು ನೀಡಿರುವ ನ್ಯಾಯಾಧೀಶರು ಇಂತಹ ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ನಡೆ ಬಗ್ಗೆ ಕೂಡ ಉಲ್ಲೇಖ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.
