ಕನ್ನಡ ಸುದ್ದಿ  /  Karnataka  /  Hubli Dharwad Mayor Election Tussle Between Congress Bjp Jagadish Shettar Pralhad Joshi Kub

Hubli News: ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಚುನಾವಣೆ; ಪ್ರಲ್ಹಾದ ಜೋಶಿ- ಜಗದೀಶ ಶೆಟ್ಟರ್‌ಗೆ ಪ್ರತಿಷ್ಠೆಯ ಕಣ

ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯ ಜೋಡೆತ್ತು ಎನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬದಲಾದ ರಾಜಕೀಯ ಪರಿಸ್ಥಿತಿಯಿಂದ ಪರಸ್ಪರ ವಿರೋಧ ವಲಯದಲ್ಲಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿ ತಮ್ಮ ಶಕ್ತಿ ಪ್ರದರ್ಶಿಸಲು ಇಬ್ಬರು ನಾಯಕರು ತೆರೆಮೆರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಪ್ರಲ್ಹಾದ ಜೋಶಿ (ಎಡಚಿತ್ರ), ಜಗದೀಶ ಶೆಟ್ಟರ್(ಬಲಚಿತ್ರ)
ಪ್ರಲ್ಹಾದ ಜೋಶಿ (ಎಡಚಿತ್ರ), ಜಗದೀಶ ಶೆಟ್ಟರ್(ಬಲಚಿತ್ರ)

ಹುಬ್ಬಳ್ಳಿ: ರಾಜ್ಯದಲ್ಲೇ ಎರಡನೇ ಅತೀ ದೊಡ್ಡ ಪಾಲಿಕೆ ಎನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಅಧಿಕಾರ ಅವಧಿ ಮೇ 27ಕ್ಕೆ ಪೂರ್ಣಗೊಳ್ಳಲಿದ್ದು, ಈ ಬಾರಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನ ಸಿಗುವ ಕುರಿತು ಚರ್ಚೆಗಳು ನಡೆದಿವೆ.

ಒಟ್ಟು 82 ಜನ ಸದಸ್ಯರನ್ನು ಒಳಗೊಂಡಿರುವ ಪಾಲಿಕೆಯಲ್ಲಿ 39 ಜನ ಸದಸ್ಯರ ಬಲ ಪಡೆದಿರುವ ಬಿಜೆಪಿ ಆಡಳಿತದಲ್ಲಿದೆ. ಉಳಿದಂತೆ ಕಾಂಗ್ರೆಸ್ 33, ಎಂಐಎಂಐಎಂ ಪಕ್ಷದ ಮೂವರು, ಆರು ಜನ ಪಕ್ಷೇತರರು ಹಾಗೂ ಓರ್ವ ಜೆಡಿಎಸ್ ಸದಸ್ಯರಿದ್ದಾರೆ. ಮೇಯರ್ ಈರೇಶ ಅಂಚಟಗೇರಿ ಹಾಗೂ ಉಪ ಮೇಯರ್ ಉಮಾ ಮುಕುಂದ ಅವರ 1 ವರ್ಷದ ಅವಧಿ ಮೇ 27ಕ್ಕೆ ಪೂರ್ಣಗೊಳ್ಳಲಿದೆ. 22ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆ ಮೀಸಲಾತಿ ಘೋಷಿಸಲಾಗಿದ್ದು, ಮೇಯರ್ ಸ್ಥಾನ ಮಹಿಳೆ (ಸಾಮಾನ್ಯ) ಹಾಗೂ ಉಪಮೇಯರ್ ಸ್ಥಾನ ಪುರುಷ (ಸಾಮಾನ್ಯ) ಮೀಸಲಿರಿಸಲಾಗಿದೆ.

ಪ್ರತಿಷ್ಠೆ ಏಕೆ?

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಾದ ರಾಜಕೀಯ ವಿದ್ಯಮಾನಗಳು ಈ ಬಾರಿ ಹುಬ್ಬಳ್ಳಿ-ಧಾರವಾಡ ಮೇಯರ್-ಉಪ ಮೇಯರ್ ಆಯ್ಕೆ ಮೇಲೂ ಪರಿಣಾಮಗಳು ಬೀರುವ ಸಾಧ್ಯತೆ ಹೆಚ್ಚಳವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯ ಜೋಡೆತ್ತು ಎನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬದಲಾದ ರಾಜಕೀಯ ಪರಿಸ್ಥಿತಿಯಿಂದ ಪರಸ್ಪರ ವಿರೋಧ ವಲಯದಲ್ಲಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿ ತಮ್ಮ ಶಕ್ತಿ ಪ್ರದರ್ಶಿಸಲು ಇಬ್ಬರು ನಾಯಕರು ತೆರೆಮೆರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಶೆಟ್ಟರ್ ನಡೆ ಏನು?

ಟಿಕೆಟ್ ಸಿಗದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ ಶೆಟ್ಟರ ಪಾಲಿಕೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ಸಿದ್ಧತೆ ನಡೆಸಿದ್ದಾರೆ. ಜಗದೀಶ ಶೆಟ್ಟರ ಅವರು ತಮ್ಮ ಬೆಂಬಲಿಗ ಪಾಲಿಕೆ ಸದಸ್ಯರನ್ನು ಮುಂದಿಟ್ಟು ಯಾವ ಅಸ್ತ್ರ ಪ್ರಯೋಗಿಸುತ್ತಾರೆ ಎಂಬುದು ಸದ್ಯದ ಚರ್ಚಿತ ವಿಷಯ. ಎಂಎಲ್ಎ ಚುನಾವಣೆಯಲ್ಲಿ ಸೋಲು ಕಂಡಿರುವ ಶೆಟ್ಟರ ಶತಾಯಗತಾಯ ಮೇಯರ್ ಆಯ್ಕೆಯಲ್ಲಿ ಹಿಡಿತ ಸಾಧಿಸಲೇಬೇಕು ಎಂಬ ಪಣದಲ್ಲಿದ್ದಾರೆ.

ಜಗದೀಶ ಶೆಟ್ಟರ್ ಗೆ ಟಿಕೆಟ್ ತಪ್ಪಿದ ಸಂದರ್ಭದಲ್ಲಿ ಬಿಜೆಪಿಯ 16 ಪಾಲಿಕೆ ಸದಸ್ಯರು ರಾಜೀನಾಮೆ ಬೆದರಿಕೆ ಹಾಕಿದ್ದರು. ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ, ಎಐಎಮ್ಐಎಮ್ ಜೊತೆ ಶೆಟ್ಟರ್ ಬೆಂಬಲಿಗ ಪಾಲಿಕೆ ಸದಸ್ಯರು ಕೈ ಜೋಡಿಸಿದರೆ ಬಿಜೆಪಿಗೆ ಅಪಾಯ ತಪ್ಪಿದಲ್ಲ. ಹೀಗಾಗಿ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲಿ ಶೆಟ್ಟರ್ ಯಾವ ರೀತಿಯ ದಾಳ ಉರುಳಿಸುತ್ತಾರೆ ಅನ್ನೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜೋಶಿಗೂ ಪ್ರತಿಷ್ಠೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಚುನಾವಣೆ ರಣತಂತ್ರದಲ್ಲಿದ್ದು, ಬಿಜೆಪಿ ಅಭ್ಯರ್ಥಿಗಳಿಗೆಯೇ ಮೇಯರ್ ಚುಕ್ಕಾಣಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸತತ ಪ್ರಯತ್ನಗಳನ್ನೂ ನಡೆಸಿದ್ದಾರೆ. ಇಬ್ಬರು ನಾಯಕರಿಗೂ ಪ್ರತಿಷ್ಠೆಯ ಕಣವಾಗಿದ್ದು, ಮೇಯರ್ ಚುನಾವಣೆಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ದಿನಾಂಕ ನಿಗದಿ ಬಾಕಿ

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಮೀಸಲಾತಿಯ ಅನ್ವಯ ಬಿಜೆಪಿಯಲ್ಲಿ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದು, ಪ್ರಾದೇಶಿಕ ಆಯುಕ್ತರು ಚುನಾವಣೆಗೆ ದಿನಾಂಕ ನಿಗದಿಪಡಿಸುವುದನ್ನೇ ಕಾಯುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಕರ್ತವ್ಯ ಹಾಗೂ ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪಾಲಿಕೆಯ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸಲು ವಿಳಂಬವಾಗಿದೆ. ಮೇ 27ರೊಳಗೆ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಡೆಯುವುದು ಕಷ್ಟ ಎನ್ನಲಾಗುತ್ತಿದೆ. ನೂತನ ಮೇಯರ್- ಉಪ ಮೇಯರ್ ಆಯ್ಕೆಯಾಗುವವರೆಗೆ ಹಾಲಿ ಬಿಜೆಪಿಯ ಮೇಯರ್- ಉಪ ಮೇಯರ್ ಆಡಳಿತ ಮುಂದುವರಿಯಲಿದೆ. ರಾಜ್ಯದಲ್ಲಿ ಸಿಎಮ್, ಸಚಿವರ ಪದಗ್ರಹಣ ಮುಗಿದ ನಂತರ ಅವಳಿ ನಗರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸಂಚಲನ ಮೂಡಿರುವುದಂತೂ ಖಚಿತ.

ಚುನಾವಣೆಗೆ ದಿನಾಂಕವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ನಿಗದಿಪಡಿಸಬೇಕು. ನೂತನ ಮೇಯರ್- ಉಪ ಮೇಯರ್ ಆಯ್ಕೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದೆ. ಮೇಯರ್ -ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ತಿಳಿಸಿದ್ದಾರೆ.

ವರದಿ: ಪ್ರಹ್ಲಾದಗೌಡ ಗೊಲ್ಲನಗೌಡರ