65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ
Vasanta Hulagannavar: ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ವಸಂತಾ ಹುಲಗಣ್ಣನವರ್ ಅವರು ಕೆ-ಸೆಟ್ ದೈಹಿಕ ವಿಕಲಚೇತನರ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.

ಹುಬ್ಬಳ್ಳಿ: ಕೆ-ಸೆಟ್ ದೈಹಿಕ ವಿಕಲಚೇತನರ ವಿಭಾಗದಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ವಸಂತಾ ಹುಲಗಣ್ಣನವರ್ (23) ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಸಾಮಾನ್ಯ ವಿಭಾಗದಲ್ಲಿ 177ನೇ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಸಮಸ್ಯೆಗಳ ನಡುವೆಯೂ ಪ್ರತಿದಿನ 65 ಕಿಮೀ ದೂರ ಇರುವ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ (KUD) ಪ್ರಯಾಣಿಸುತ್ತಿದ್ದ ವಸಂತಾ, ತಯಾರಿಗಾಗಿ ಯೂಟ್ಯೂಬ್ ವಿಡಿಯೋಗಳನ್ನು ಬ್ರೈಲ್ ಆಗಿ (ಅಂಧರ ಲಿಪಿ) ಪರಿವರ್ತಿಸುತ್ತಿದ್ದರು.
ಐಚ್ಛಿಕ ಕನ್ನಡದೊಂದಿಗೆ ಮೂರನೇ ಸೆಮಿಸ್ಟರ್‌ನಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ ವಸಂತಾ ಅವರು, ಬೆಳಿಗ್ಗೆ 7 ಗಂಟೆಗೆ ಕುಸುಗಲ್‌ನಿಂದ ಹೊರಟು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣಕ್ಕೆ ಹೋಗುತ್ತೇನೆ. ಅಲ್ಲಿ ಬಸ್ ಬದಲಾಯಿಸಿಕೊಂಡು ವಿಶ್ವವಿದ್ಯಾಲಯ ತಲುಪುತ್ತಿದ್ದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ನಾನು 6 ಬಸ್ ಬದಲಾಯಿಸುತ್ತಿದ್ದೆ. ಆದರೆ ಪ್ರಯಾಣದ ವೇಳೆ ನನ್ನ ಫೋನ್‌ನಲ್ಲಿ ಶೈಕ್ಷಣಿಕ ವಿಡಿಯೋಗಳನ್ನು ಕೇಳುತ್ತಲೇ ಇರುತ್ತೇನೆ ಎನ್ನುತ್ತಾರೆ ವಸಂತಾ. ಪ್ರಾಥಮಿಕ ಶಿಕ್ಷಣವನ್ನು ಹಳೇ ಹುಬ್ಬಳ್ಳಿಯ ಆರೂಢ ಅಂಧರ ಶಾಲೆಯಲ್ಲಿ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.
ವಸಂತಾ ಹುಲಗಣ್ಣನವರ್ ಶೈಕ್ಷಣಿಕ ಜೀವನ
ಬೆಳಗಾವಿಯ ಮಹೇಶ್ವರಿ ಅಂಧರ ಶಾಲೆಯಲ್ಲಿ ಉನ್ನತ ಶಿಕ್ಷಣ ಪಡೆದ ಅವರು, ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯುಸಿ-ಬಿಎ ವ್ಯಾಸಂಗ ಮುಗಿಸಿದರು. ಎಸ್ಎಸ್ಎಲ್ಸಿಯಲ್ಲಿ ಶೇ 90, ಪಿಯುಸಿಯಲ್ಲಿ ಶೇ 87, ಮತ್ತು ಬಿಎಯಲ್ಲಿ ಶೇ 84 ಅಂಕ ಪಡೆದಿದ್ದಾರೆ. ಬ್ರೈಲ್ ಲಿಪಿಯಲ್ಲಿ ಅಧ್ಯಯನ ಸಾಮಗ್ರಿಗಳು ಲಭ್ಯವಿಲ್ಲದ ಕಾರಣ ನನ್ನ ಅಂಕಗಳು ಕುಸಿದಿವೆ ಎಂದು ಬೇಸರದಿಂದ ಹೇಳುತ್ತಾರೆ ವಸಂತಾ. ಉನ್ನತ ಶಿಕ್ಷಣದ ಸ್ಟಡಿ ಮೆಟೀರಿಯಲ್ ಮತ್ತು ನೆಟ್, ಸೆಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬ್ರೈಲ್ ಲಿಪಿಯಲ್ಲಿ ಪಡೆಯಲು ಸಾಧ್ಯವಾದರೆ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಮಾನ ಅವಕಾಶ ಸಿಗುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ಕೆ-ಸೆಟ್‌ಗೆ ತಯಾರಿ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, 77 ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಧನಯ್ಯ ಕೌಂಟಗಿ ಅವರ ಶೈಕ್ಷಣಿಕ ವಿಡಿಯೋಗಳನ್ನು ಅನುಸರಿಸುವುದಾಗಿ ಹೇಳಿದರು. ನಾನು ಅವರ ಅಧ್ಯಯನ ಸಾಮಗ್ರಿಗಳ ಬ್ರೈಲ್‌ನಲ್ಲಿ ಟಿಪ್ಪಣಿ ಮಾಡಿದ್ದೇನೆ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದೇನೆ. ಅವರು ನನಗೆ ಹೆಚ್ಚಿನ ಅಧ್ಯಯನ ಸಾಮಗ್ರಿಗಳನ್ನು ಕೊರಿಯರ್ ಮಾಡಿದ್ದರು. ಬ್ರೈಲ್ ಟಿಪ್ಪಣಿ ರಚಿಸಲು ನನ್ನನ್ನು ಪ್ರೋತ್ಸಾಹಿಸಿದರು. ವಿಶ್ವವಿದ್ಯಾಲಯದ ಕನ್ನಡ ಅಧ್ಯಯನದ ಹೆಚ್ಒಡಿ ಡಾ. ಕೃಷ್ಣ ರೈಕ್ವಾರ್, ದೃಷ್ಟಿ ವಿಕಲಚೇತನ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಪ್ಪ ಬಂಡಿ ಮತ್ತು ಪಿಎಚ್‌ಡಿ ವಿದ್ಯಾರ್ಥಿ ಮಲ್ಲೇಶ್ ಮಾರ್ಗದರ್ಶನ ನೀಡಿದರು ಎಂದರು.
400 ಅಭ್ಯರ್ಥಿಗಳು ತೇರ್ಗಡೆ
ಅನೇಕ ಅಭ್ಯರ್ಥಿಗಳು ಮೂರ್ನಾಲ್ಕು ಪ್ರಯತ್ನಗಳಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹೆಣಗಾಡುತ್ತಿದ್ದಾರೆ. ಆದರೆ ಎಲ್ಲಾ ಸವಾಲುಗಳ ನಡುವೆಯೂ ಹುಲಗಣ್ಣನವರ್, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಾಧಿಸಿದ್ದಾರೆ ಎಂದು ಕೌಂಟಗಿ ಪ್ರತಿಕ್ರಿಯಿಸಿದ್ದಾರೆ. ಈ ಬಾರಿ 1.17 ಲಕ್ಷ ಅಭ್ಯರ್ಥಿಗಳು ಕೆ-ಸೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಕನ್ನಡದಲ್ಲಿ ಪರೀಕ್ಷೆ ಬರೆದ ಸುಮಾರು 5,000 ಅಭ್ಯರ್ಥಿಗಳ ಪೈಕಿ ತೇರ್ಗಡೆ ಹೊಂದಿದ್ದು 400 ಮಂದಿ ಮಾತ್ರ.
ಹುಲಗಣ್ಣನವರ್ ಅವರ ಹಿರಿಯ ಸಹೋದರ ಯಲ್ಲಪ್ಪ ಹುಲಗಣ್ಣನವರ್ ಅವರು ಎಂಎ ರಾಜ್ಯಶಾಸ್ತ್ರ ಮತ್ತು ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಅವರು ಹುಟ್ಟಿನಿಂದಲೇ ಶೇ 100ರಷ್ಟು ದೃಷ್ಟಿಹೀನರಾಗಿದ್ದಾರೆ. ತಾಯಿ ರೇಣುಕಾ ಗೃಹಿಣಿಯಾಗಿದ್ದು, ಕುಟುಂಬವು 8 ಎಕರೆ ಕೃಷಿ ಭೂಮಿಯನ್ನು ಅವಲಂಬಿಸಿದೆ. ಈ ಭೂಮಿಯನ್ನು ಪ್ರತಿ ವರ್ಷ ಇತರರಿಗೆ ಗುತ್ತಿಗೆಗೆ ನೀಡುತ್ತಾರೆ. ಇಬ್ಬರೂ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಸಂಸ್ಥೆಗಳಿಂದ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
