ಕನ್ನಡ ಸುದ್ದಿ  /  ಕರ್ನಾಟಕ  /  Neha Hiremath: ಹುಬ್ಬಳ್ಳಿ ನೇಹಾ ನಿವಾಸಕ್ಕೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆ

Neha Hiremath: ಹುಬ್ಬಳ್ಳಿ ನೇಹಾ ನಿವಾಸಕ್ಕೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆ

ನೇಹಾ ಹಿರೇಮಠ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಬಿಜೆಪಿಯು ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ನೇಹಾ ಹಿರೇಮಠ ನಿವಾಸಕ್ಕೆ ಬಿಜೆಪಿ ಅಧ್ಯಕ್ಷ ಜೆಪಿನಡ್ಡಾ ಭೇಟಿ ನೀಡಿದ್ದರು.
ನೇಹಾ ಹಿರೇಮಠ ನಿವಾಸಕ್ಕೆ ಬಿಜೆಪಿ ಅಧ್ಯಕ್ಷ ಜೆಪಿನಡ್ಡಾ ಭೇಟಿ ನೀಡಿದ್ದರು.

ಹುಬ್ಬಳ್ಳಿ: ಮೂರು ದಿನದ ಹಿಂದೆ ಹುಬ್ಬಳ್ಳಿಯಲ್ಲಿ ಸ್ನೇಹಿತನಿಂದಲೇ ಭೀಕರ ಹತ್ಯೆಗೆ ಒಳಗಾದ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದ್ದರು. ಭಾನುವಾರ ಬಿಜೆಪಿ ಸಭೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ ನಡ್ಡಾ ಅವರು ಸಭೆಯ ಬಳಿಕ ಸಂಜೆ ನೇಹಾ ನಿವಾಸಕ್ಕೆ ತೆರಳಿ ಅವರ ತಂದೆ- ತಾಯಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಂದು ನಡೆದ ಘಟನೆ, ಇದಕ್ಕೆ ಕಾರಣವಾದ ಅಂಶಗಳು, ಫಯಾಜ್‌ ವರ್ತನೆ ಸಹಿತ ಹಲವಾರು ವಿಷಯಗಳನ್ನು ಕುಟುಂಬದವರಿಂದ ಪಡೆದುಕೊಂಡ ನಡ್ಡಾ ನಿಮ್ಮ ಪರವಾಗಿ ನಾವಿದ್ದೇವೆ. ನಿಮಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ. ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ನಡ್ಡಾ ಅವರು ಅಭಯ ನೀಡಿದರು.

ಟ್ರೆಂಡಿಂಗ್​ ಸುದ್ದಿ

ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹಿಸಿದರು.

ನೇಹಾಳಿಗಾದ ದುಸ್ಥಿತಿ, ಅನ್ಯಾಯ ಇನ್ಯಾವ ವಿದ್ಯಾರ್ಥಿನಿ, ಯುವತಿಯರಿಗೂ ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ನಡ್ಡಾ ಒತ್ತಾಯಿಸಿದರು.

ರಾಜ್ಯದಲ್ಲಿ ಇಂದು ಇಂಥ ಮತಾಂಧ ಯುವಕರಿಂದ ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವಂಥ ಪರಿಸ್ಥಿತಿ ತಲೆದೋರಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ತೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೇ, ಸಿಮಾ ಮಸೂತಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಲಿಂಗರಾಜ ಪಾಟೀಲ್ ಮತ್ತಿತರರು ಇದ್ದರು.

ಸಚಿವ ಜೋಶಿ ಕಿಡಿ

ನೇಹಾಳನ್ನು ಮತಾಂತರ ಮಾಡಲು ಪ್ರಯತ್ನಿಸಿದ್ದರು. ಆದರೆ ಆಕೆ ಒಪ್ಪಿರಲಿಲ್ಲ ಎಂಬುದನ್ನು ಆಕೆ ತಂದೆಯೇ ಹೇಳಿದ್ದಾರೆ. ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಆರೋಪಿ ಫಯಾಜ್ ನೇಹಾಳನ್ನು ಮತಾಂತರ ಮಾಡಿ ಮದುವೆ ಮಾಡಿಕೊಳ್ಳಲು ನೋಡಿದ್ದಾನೆ. ಇದಕ್ಕೆ ನೇಹಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಒಪ್ಪದಿದ್ದಾಗ ಅಂತಿಮವಾಗಿ ಹತ್ಯೆ ಕೃತ್ಯ ವೆಸಗಿದ್ದಾನೆ ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ್ ಅವರೇ ನನ್ನೆದುರು ಮಾತ್ರವಲ್ಲಾ ಬಹಿರಂಗವಾಗೇ ಹೇಳಿದ್ದಾರೆ ಎಂದರು ಸಚಿವ ಜೋಶಿ.

ಸಿಎಂ, ಡಿಸಿಎಂ, ಗೃಹ ಸಚಿವರು ತುಷ್ಟಿಕರಣದ ನೀತಿಯಿಂದಾಗಿ ಹೇಗೆಲ್ಲ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಮತ್ತು ಸಮಾಜ ಎಚ್ಛೆತ್ತುಕೊಳ್ಳಬೇಕು, ಬಹಳ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ಮಾಡಿದರು.

ಕಾಂಗ್ರೆಸ್ ಕಾರ್ಪೋರೇಟರ್ ಆದ ನನ್ನ ಮಗಳ ಘಟನೆಯಲ್ಲೇ ಹೀಗೆ ವರ್ತಿಸುತ್ತಿದ್ದೀರಿ. ಇನ್ನು ಜನ ಸಾಮಾನ್ಯರ ಗತಿ ಏನು? ನಿರಂಜನ್ ಅವರೇ ಸಿಎಂ, ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಂಥ ದುಸ್ಥಿತಿಗೆ ತಂದಿದ್ದಾರೆ. ನೇಹಾಳನ್ನು ಹಾಡಹಗಲೇ ಒಂಬತ್ತು-ಹತ್ತು ಬಾರಿ ಚೂರಿ ಇರಿದು ಹತ್ಯೆಗೈದ ದೃಶ್ಯ ನೋಡಿದರೂ ಈ ಕಾಂಗ್ರೆಸ್ಸಿಗರಿಗೆ ಕರುಣೆಯೇ ಇಲ್ಲ. ನೇಹಾಳ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂಬ ಕಿಂಚಿತ್ತೂ ಜವಾಬ್ದಾರಿ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಡಿಜೆ ಹಳ್ಳಿ-ಕೆಜೆ ಹಳ್ಳಿ, ರಾಮೇಶ್ವರ್ ಕೆಫೇ ಬಾಂಬ್ ಸ್ಫೋಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಉಡುಪಿಯ ಟಾಯ್ಲೆಟ್ ಒಳಗೆ ಕ್ಯಾಮರಾ ಇಟ್ಟ ಪ್ರಕರಣ ಹೀಗೆ ಎಲ್ಲಾ ಘಟನೆಗಳಲ್ಲೂ ಇವರ ತುಷ್ಟಿಕರಣ ನೀತಿ ಮಿತಿಮೀರಿದೆ. ಇದರಿಂದಾಗಿ ಜನರ ಆಕ್ರೋಶ ಮುಗಿಲು ಮುಟ್ಟಿದೆ ಎಂದು ಪ್ರಲ್ಹಾದ ಜೋಶಿ ಎಚ್ಚರಿಸಿದರು.

ಸೋಮವಾರ ಬಿಜೆಪಿ ಪ್ರತಿಭಟನೆ

ಈಗಾಗಲೇ ನೇಹಾ ಹಿರೇಮಠ ಹತ್ಯೆ ಪ್ರಕರಣ ಖಂಡಿಸಿ ಕರ್ನಾಟಕದ ಹಲವು ಕಡೆಗಳಲ್ಲಿ ಬಿಜೆಪಿ, ಎಬಿವಿಪಿಯಿಂದ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ ಬಿಜೆಪಿಯು ಸೋಮವಾರ ಪ್ರತಿಭಟನೆಗೆ ಕರೆ ನೀಡಿದೆ. ಕರ್ನಾಟಕದ ಎಲ್ಲಾ ಬಿಜೆಪಿ ಘಟಕಗಳು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲ ಪ್ರತಿಭಟನೆ ನಡೆಸಲು ಸೂಚಿಸಲಾಗಿದೆ. ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಿದ್ದಾರೆ.

ಚುನಾವಣೆಯ ಗಡಿಬಿಡಿಯಲ್ಲಿ ನಾವು ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯ, ದೈವ ನಿಂದನೆ ಹಾಗೂ ರಾಷ್ಟ್ರ ಭಕ್ತರ ಮೇಲಿನ ಹಲ್ಲೆ ಪ್ರಕರಣಗಳನ್ನು ನಿರ್ಲಕ್ಷಿಸಿ ಕೂರಲಾಗದು. ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಅಮಾನುಷ ಘಟನೆ.ಇದನ್ನು ಪೋಲಿಸರು ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಬೇಕಾಗಿರುವುದು ಸಾರ್ವಜನಿಕರ ಆಗ್ರಹವಾಗಿದೆ, ಆದರೆ ಮುಖ್ಯಮಂತ್ರಿಗಳು,ಗೃಹ ಸಚಿವರು ಹಾಗೂ ಕೆಲ ಸಚಿವರು ಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ನೋಡಿದರೆ ದುಷ್ಟರಿಗೆ ಹಾಗೂ ಹಿಂದೂ ಧರ್ಮದ ಕಂಟಕರಿಗೆ ಸರ್ಕಾರದ ಕೃಪಾಪೋಷಣೆಯ ಉದಾರತೆ ದೊರೆಯುತ್ತಿರುವುದು ಸ್ಪಷ್ಟವಾಗಿದೆ, ಅಲ್ಪಸಂಖ್ಯಾತರ ಓಲೈಕೆಯೇ ಈ ಸರ್ಕಾರದ ಆದ್ಯತೆಯಾಗಿದೆ. ಭಾರತೀಯ ಜನತಾ ಪಾರ್ಟಿ ಸಿದ್ದಾಂತಕ್ಕಾಗಿ ಜನ್ಮ ತಾಳಿದ ಪಕ್ಷ , ನಮ್ಮ ಆದ್ಯತೆ ಏನಿದ್ದರೂ ‘ಧ್ಯೇಯ’ಕ್ಕೇ ಹೊರತು ಅಧಿಕಾರಕ್ಕಲ್ಲ, ಚುನಾವಣಾ ಕಾರ್ಯವನ್ನು ಬದಿಗಿರಿಸಿ ಏಪ್ರಿಲ್ 22 ರ ಸೋಮವಾರದಂದು ನಮ್ಮ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ

ಬೀದಿಗಿಳಿದು ಹೋರಾಟ ನಡೆಸಲು ಕರೆ ನೀಡಲಾಗಿದೆ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪೊಲೀಸರಿಗೆ ಬಹುಮಾನ

ಹುಬ್ಬಳ್ಳಿ ಹಾಗೂ ಧಾರವಾಡ ನಗರ ಪೊಲೀಸ್‌ ಆಯುಕ್ತರಾದ ರೇಣುಕಾ ಸುಕುಮಾರ್‌ ಅವರು ತಿಂಗಳ ಪೊಲೀಸ್‌ ಕಾರ್ಯಕ್ರಮದಡಿ ನೇಹಾ ಹಿರೇಮಠ ಹತ್ಯೆ ಆರೋಪಿ ಸೆರೆ ಹಿಡಿದ ಪೊಲೀಸರಿಗೆ ನಗದು ಬಹುಮಾನ ನೀಡಿದ್ದಾರೆ. ಭಾನುವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸಿಪಿ ಶಿವಪ್ರಕಾಶ್‌ ನಾಯಕ್‌, ಇನ್ಸ್‌ಪೆಕ್ಟರ್‌ ಪಾಟೀಲ್‌ ಹಾಗೂ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನವನ್ನು ನೀಡಿದರು. ಒಂದು ಗಂಟೆಯೊಳಗೆ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಇದು ಶ್ಲಾಘನೀಯ ಕಾರ್ಯ. ತನಿಖೆಯಲ್ಲಿ ಉತ್ತಮವಾಗಿ ಕೆಲಸ ಮಾಡುವ ಸೂಚನೆಯನ್ನು ಪೊಲೀಸ್‌ ಆಯುಕ್ತರು ನೀಡಿದರು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ