ಕನ್ನಡ ಸುದ್ದಿ  /  ಕರ್ನಾಟಕ  /  ಎಂಎಲ್ಸಿ ಸ್ಥಾನ ತೊರೆದ ಉದ್ಯಮಿ ನಂಜುಂಡಿ,ಬಿಜೆಪಿಗೂ ರಾಜೀನಾಮೆ ನೀಡಿ ನಾಳೆ ಕಾಂಗ್ರೆಸ್‌ ಸೇರ್ಪಡೆ

ಎಂಎಲ್ಸಿ ಸ್ಥಾನ ತೊರೆದ ಉದ್ಯಮಿ ನಂಜುಂಡಿ,ಬಿಜೆಪಿಗೂ ರಾಜೀನಾಮೆ ನೀಡಿ ನಾಳೆ ಕಾಂಗ್ರೆಸ್‌ ಸೇರ್ಪಡೆ

ವಿಧಾನ ಪರಿಷತ್‌ ಸ್ಥಾನಕ್ಕೆ ಬಿಜೆಪಿಯ ಸದಸ್ಯ ಕೆ.ಪಿ.ನಂಜುಂಡಿ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ತೊರೆದು ಬುಧವಾರ ಕಾಂಗ್ರೆಸ್‌ ಸೇರಲಿದ್ದಾರೆ.

ಕೆಪಿ ನಂಜುಂಡಿ ಅವರು ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಕೆಪಿ ನಂಜುಂಡಿ ಅವರು ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಬೆಂಗಳೂರು: ಆರು ವರ್ಷದಿಂದ ಬಿಜೆಪಿಯಲ್ಲಿದ್ದು ವಿಧಾನಪರಿಷತ್‌ ಸದಸ್ಯರಾಗಿದ್ದ ಉದ್ಯಮಿ ಕೆ.ಪಿ.ನಂಜುಂಡಿ ಅವರು ಲೋಕಸಭೆ ಚುನಾವಣೆಗೆ ಮುನ್ನವೇ ರಾಜೀನಾಮೆ ನೀಡಿದ್ದಾರೆ. ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಖುದ್ದು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿದ ನಂಜುಂಡಿ ರಾಜೀನಾಮೆ ಪತ್ರವನ್ನು ಮಂಗಳವಾರ ಸಲ್ಲಿಸಿದರು. ಸಭಾಪತಿ ಅವರು ನಂಜುಂಡಿ ಅವರೇ ಖುದ್ದು ರಾಜೀನಾಮೆ ಪತ್ರ ಸಲ್ಲಿಸಿರುವ ಜತೆಗೆ ಕೈಯಲ್ಲಿ ಬರೆದಿರುವ ಪತ್ರ ನೀಡಿರುವುರಿಂದ ಅದನ್ನು ಅಂಗೀಕರಿಸಿರುವುದಾಗಿ ಹೇಳಿದ್ದಾರೆ. ಪರಿಷತ್‌ ಸದಸ್ಯ ಸ್ಥಾನ ಇನ್ನು ಎರಡು ತಿಂಗಳು ಇರುವಾಗಲೇ ನಂಜುಂಡಿ ಈ ಹುದ್ದೆಯನ್ನು ತ್ಯಜಿಸಿದ್ದಾರೆ. ಅವರು ಬಿಜೆಪಿಗೂ ರಾಜೀನಾಮೆ ನೀಡಿ ಸದ್ಯದಲ್ಲಿಯೇ ಕಾಂಗ್ರೆಸ್‌ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಪ್ರಮುಖ ಚಿನ್ನದ ವ್ಯಾಪಾರಿಯಾಗಿರುವ ಕೆ.ಪಿ.ನಂಜುಂಡಿ ಅವರು ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸಹಿತ ಹಲವು ಕಡೆ ಉದ್ಯಮ ಹೊಂದಿದ್ದಾರೆ. ಅವರು ರಾಜಕೀಯವಾಗಿಯ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಅವಧಿ ಕಾಂಗ್ರೆಸ್‌ನಲ್ಲಿಯೇ ಇದ್ದರು. ಅಲ್ಲಿಯೇ ಇದ್ದುಕೊಂಡು ವಿಧಾನಪರಿಷತ್‌ ಸ್ಥಾನಕ್ಕೆ ಪ್ರಯತ್ನಿಸಿದ್ದರು. ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡು ಬಿಜೆಪಿ ಸೇರಿದ್ದಾರೆ. ಅವರನ್ನು ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ನೇಮಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಕರಿಸಿದ್ದರು. ನಂಜುಂಡಿ ಅವರು ಕೆಲ ದಿನಗಳಿಂದ ಬಿಜೆಪಿಯಿಂದ ದೂರವೇ ಉಳಿದಿದ್ದರು. ತಮಗೆ ಮತ್ತೊಂದು ಅವಧಿಯ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನುವ ಕಾರಣದಿಂದ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ಧಾರೆ ಎನ್ನುವುದು ಬಿಜೆಪಿ ಮೂಲಗಳು ನೀಡುವ ವಿವರಣೆ.

ಇದರಿಂದಾಗಿ ಕಾಂಗ್ರೆಸ್‌ ನೊಂದಿಗೆ ಸಂಪರ್ಕದಲ್ಲಿದ್ದ ನಂಜುಂಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೂ ಮೂರ್ನಾಲ್ಕು ಸುತ್ತಿನಲ್ಲಿ ಮಾತುಕತೆ ನಡೆಸಿದ್ದರು. ಅಲ್ಲಿ ವಿಧಾನಪರಿಷತ್‌ ಸ್ಥಾನದ ಅಭಯ ಸಿಕ್ಕಿದ್ದರಿಂದಲೇ ಬಿಜೆಪಿ ತೊರೆದಿದ್ದಾರೆ ಎನ್ನಲಾಗುತ್ತಿದೆ.

ರಾಜೀನಾಮೆ ಪತ್ರ ನೀಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೆ.ಪಿ.ನಂಜುಂಡಿ, ಬಿಜೆಪಿ ನನಗೆ ಎಂಎಲ್ಸಿ ಸ್ಥಾನ ಕೊಟ್ಟರೂ ಯಾವುದೇ ಜವಾಬ್ದಾರಿ ನೀಡಿರಲಿಲ್ಲ. ಇದರಿಂದ ಬೇಸರವಿತ್ತು. ಈ ಕಾರಣದಿಂದಲೇ ರಾಜೀನಾಮೆ ನೀಡಿದ್ದೇನೆ. ಬಿಜೆಪಿಗೂ ರಾಜೀನಾಮೆ ಕೊಟ್ಟು ಬುಧವಾರ ಕಾಂಗ್ರೆಸ್‌ ಸೇರುತ್ತೇನೆ ಎಂದು ಹೇಳಿದರು.

ಬಿಜೆಪಿ ಎಂದೂ ಕಾಯಕವರ್ಗಗಳ ಬಗ್ಗೆ ಗೌರವ ಇಟ್ಟುಕೊಂಡಿಲ್ಲ. ಅವರಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಇದು ನನಗೆ ಅಲ್ಲಿದ್ದರೂ ಬೇಸರವಿತ್ತು. ನಮ್ಮ ಸಮುದಾಯಕ್ಕೂ ಸೂಕ್ತ ಸ್ಪಂದನೆ, ಬೆಂಬಲ ನಮ್ಮ ಸಮುದಾಯಕ್ಕೆ ದೊರೆತಿಲ್ಲ ಎಂದು ನಂಜುಂಡಿ ಆಪಾದಿಸಿದರು.

IPL_Entry_Point