Hubli Pune Vande Bharat: ಹುಬ್ಬಳ್ಳಿ-ಪುಣೆ ವಂದೇ ಭಾರತ್‌ ರೈಲಿಗೆ ಅಸ್ತು: ಯಾವಾಗ ಆರಂಭವಾಗಬಹುದು ಕರ್ನಾಟಕ ಮಹಾರಾಷ್ಟ್ರ ಸಂಪರ್ಕಿಸುವ ರೈಲು-hubli news hubli pune new vande bharat express train approved service to connect maharashtra karnataka start shortly prh ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hubli Pune Vande Bharat: ಹುಬ್ಬಳ್ಳಿ-ಪುಣೆ ವಂದೇ ಭಾರತ್‌ ರೈಲಿಗೆ ಅಸ್ತು: ಯಾವಾಗ ಆರಂಭವಾಗಬಹುದು ಕರ್ನಾಟಕ ಮಹಾರಾಷ್ಟ್ರ ಸಂಪರ್ಕಿಸುವ ರೈಲು

Hubli Pune Vande Bharat: ಹುಬ್ಬಳ್ಳಿ-ಪುಣೆ ವಂದೇ ಭಾರತ್‌ ರೈಲಿಗೆ ಅಸ್ತು: ಯಾವಾಗ ಆರಂಭವಾಗಬಹುದು ಕರ್ನಾಟಕ ಮಹಾರಾಷ್ಟ್ರ ಸಂಪರ್ಕಿಸುವ ರೈಲು

Indian Railways ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆ(Hubli Pune Vande Bharat Express) ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.(ವರದಿ:ಪ್ರಸನ್ನಕುಮಾರ ಹಿರೇಮಠ. ಹುಬ್ಬಳ್ಳಿ)

ಸದ್ಯವೇ ಹುಬ್ಬಳ್ಳಿ ಪುಣೆ ವಂದೇ ಭಾರತ್‌ ರೈಲು ಆರಂಭವಾಗಲಿದೆ.
ಸದ್ಯವೇ ಹುಬ್ಬಳ್ಳಿ ಪುಣೆ ವಂದೇ ಭಾರತ್‌ ರೈಲು ಆರಂಭವಾಗಲಿದೆ.

ಹುಬ್ಬಳ್ಳಿ: ಗಣೇಶ ಹಬ್ಬದ ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಗದೊಂದು ಕೊಡುಗೆ ನೀಡಿದೆ. ಅದೇ ವಂದೇ ಭಾರತ್ ರೈಲು. ಹಬ್ಬಕ್ಕೂ ಮುನ್ನ ರೈತರಿಗೆ ಹೆಸರು, ಉದ್ದು, ಸೋಯಾಬಿನ್, ಸೂರ್ಯಕಾಂತಿಗೆ ಬೆಂಬಲ ಬೆಲೆ ಕೊಡುಗೆ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರದ ಮತ್ತೊಂದು ಗಿಫ್ಟ್ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ -- ಪುಣೆ ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವುದಕ್ಕೆ ಅನುಮತಿ ನೀಡಿದ್ಧಾರೆ.

ಅತಿ ಶೀಘ್ರದಲ್ಲೇ ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮಾಹಿತಿ ನೀಡಿದ್ದಾರೆ.ವಂದೇ ಭಾರತ್ ಗೆ ಮನವಿ ಮಾಡಿದ್ದರು ಜೋಶಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿ- ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಅಶ್ವಿನಿ ವೈಷ್ಣವ್ ಅವರಿಗೆ ಜುಲೈ ಮೊದಲ ವಾರದಲ್ಲಷ್ಟೇ ಪತ್ರ ಬರೆದು ಮನವಿ ಮಾಡಿದ್ದರು.

ಪ್ರಮುಖ ಬೇಡಿಕೆ ಈಡೇರಿಕೆ

ರಾಜ್ಯದಲ್ಲಿ ಬೆಂಗಳೂರು ನಂತರ ಪ್ರಮುಖ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕಿದೆ. ಅಲ್ಲದೇ, ವಂದೇ ಭಾರತ್ ರೈಲು ಸಂಚಾರದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಾಹತು ಬೆಳವಣಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಜೋಶಿ ಕೇಂದ್ರದ ಗಮನ ಸೆಳೆದಿದ್ದರು.

ಹುಬ್ಬಳ್ಳಿಯಿಂದ ಮುಂಬೈ ಸಂಪರ್ಕಕ್ಕೂ ಈ ಮಾರ್ಗ ಅತ್ಯಂತ ಪ್ರಮುಖವಾಗಲಿದೆ ಎಂಬುದನ್ನು ಜೋಶಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ಒತ್ತಾಯಿಸಿದ್ದರು. ಹುಬ್ಬಳ್ಳಿ-ಧಾರವಾಡದ ಜನರಿಗೆ ಹಬ್ಬದ ಈ ಶುಭ ಸಂದರ್ಭದಲ್ಲಿ ವಂದೇ ಭಾರತ್ ರೈಲು ಸಂಚಾರ ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ಹುಬ್ಬಳ್ಳಿಯ ಎರಡನೇಯ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚರಿಸಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಉದ್ಘಾಟನೆ ದಿನ, ವೇಳಾಪಟ್ಟಿ ಶೀಘ್ರ ಪ್ರಕಟ

ವಂದೇ ಭಾರತ್ ರೈಲು ಸಂಚಾರದ ಉದ್ಘಾಟನೆ ದಿನ ಮತ್ತು ವೇಳಾ ಪಟ್ಟಿಯನ್ನು ರೈಲ್ವೆ ಇಲಾಖೆ ಆದಷ್ಟು ಬೇಗ ಪ್ರಕಟಿಸಲಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಪ್ರಧಾನಿಗೆ, ರೈಲ್ವೆ ಸಚಿವರಿಗೆ ಜೋಶಿ ಧನ್ಯವಾದ: ನಮ್ಮ ವಿಭಾಗದ ರೇಲ್ವೆ ಅಭಿವೃದ್ಧಿಗೆ, ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಮೂಲಕ ಮಹತ್ವದ ಕೊಡುಗೆ ನೀಡಿದ್ದು, ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.

ಈಗಾಗಲೇ ಕರ್ನಾಟಕದಲ್ಲಿ ಹಲವು ವಂದೇ ಭಾರತ್‌ ರೈಲುಗಳಿವೆ. ಬೆಂಗಳೂರು-ಧಾರವಾಡ, ಮೈಸೂರು ಚೆನ್ನೆ, ಬೆಂಗಳೂರು-ಕಲಬುರಗಿ, ಬೆಂಗಳೂರು ಹೈದ್ರಾಬಾದ್‌, ಬೆಂಗಳೂರು-ಮಧುರೈ, ಮಂಗಳೂರು-ಗೋವಾ, ಮಂಗಳೂರು-ತಿರುವನಂತಪುರಂ ವಂದೇ ಭಾರತ್ ರೈಲುಗಳು ‌ ಸಂಚರಿಸುತ್ತಿವೆ. ಇದರಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಎರಡನೇ ವಂದೇ ಭಾರತ್‌ ರೈಲು ದೊರೆತಂತಾಗಲಿದೆ.

(ವರದಿ:ಪ್ರಸನ್ನಕುಮಾರ ಹಿರೇಮಠ. ಹುಬ್ಬಳ್ಳಿ)

mysore-dasara_Entry_Point