ಕನ್ನಡ ಸುದ್ದಿ  /  Karnataka  /  Hubli News Mla Kona Reddy Suggested Officers To Distribute Seeds Fertilizer Appropriately To Farmers Rsm

Hubli News: ರೈತರಿಗೆ ಬಿತ್ತನೆ ಬೀಜ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಿ; ಹುಬ್ಬಳ್ಳಿಯಲ್ಲಿ ಅಧಿಕಾರಿಗಳಿಗೆ ಶಾಸಕ ಕೋನರೆಡ್ಡಿ ಸೂಚನೆ

ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕಳಪೆ ಬಿತ್ತನೆ ಬೀಜ ಪೂರೈಕೆ ಆಗಬಾರದು ಎಂದು ಶಾಸಕ ಕೋನರೆಡ್ಡಿ ಸಹಾಯಕ ​ಕೃಷಿ ನಿರ್ದೇಶಕರಾದ ರಾಜಶೇಖರ ಅನಗೌಡರ ಅವರಿಗೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೋನ ರೆಡ್ಡಿ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೋನ ರೆಡ್ಡಿ

ಹುಬ್ಬಳ್ಳಿ: ಗ್ರಾಮೀಣ ಭಾಗದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಆ ಮೂಲಕ ನಮಗೆ ಗೌರವ ತರಬೇಕಾಗಿದೆ. ನವಲಗುಂದ ಹಾಗೂ ಕುಂದಗೋಳ ಮತಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎನ್‌ಹೆಚ್‌ ಕೋನರೆಡ್ಡಿ ಹೇಳಿದರು.

ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ್‌ ಸಭಾ ಭವನದಲ್ಲಿ ಮಂಗಳವಾರ ಶಾಸಕ ಎನ್‌ಹೆಚ್‌ ಕೋನರೆಡ್ಡಿ ಹಾಗೂ ಎಂಆರ್‌ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ನವಲಗುಂದ ಹಾಗೂ ಕುಂದಗೋಳ ಮತಕ್ಷೇತ್ರಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕಾಗಿದೆ. ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಬೇಕು. ಗ್ರಾಮ ಪಂಚಾಯತ್‌ಗಗಳಿಗೆ ಹೊರೆ ಆಗದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ತಿಗೊಳಿಸಿ. ಕಾಮಗಾರಿಗಳನ್ನು ಮಾಡುವಾಗ ಹೊಸ ತಂತ್ರಜ್ಞಾನ ಬಳಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಗದೀಶ ಪಾಟೀಲ್ ಅವರಿಗೆ ಸೂಚಿಸಿದರು.

ಶಾಸಕ ಎಂಆರ್‌ ಪಾಟೀಲ ಮಾತನಾಡಿ, ಹೆಸ್ಕಾಂ ಇಲಾಖೆಯವರು ಜನರಿಗೆ ಸಮರ್ಪಕ ವಿದ್ಯುತ್ ಒದಗಿಸಬೇಕು. ಹೊಸ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಆಗುತ್ತಿರುವ ಸಮಸ್ಯೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ರಸ್ತೆಗಳ ಅಭಿವೃದ್ಧಿಗೆ ನೀಡಲಾದ ಅನುದಾನ ಬಳಕೆಯಾಗಲಿ. ಗುಣಮಟ್ಟದ ಕಾಮಗಾರಿಗಳು ನಡೆಯಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅನುದಾನ ಸದ್ಬಳಕೆಯಾಗಲಿ

ವಿವಿಧ ಕಾಮಗಾರಿಗಳಿಗೆ ನೀಡಿದ ಅನುದಾನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಬಾರದು. ಹೆಚ್ಚಿನ ಅನುದಾನದ ಕುರಿತು ಮನವಿ ಮಾಡಿದರೆ ಸರ್ಕಾರಕ್ಕೆ ಪ್ರಸ್ತಾಪ ಕಳಿಸಲಾಗುವುದು. ಹಿಂದಿನ ಕಾಮಗಾರಿಗಳಲ್ಲಿನ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ರೈತರಿಗೆ ಬೀಜ-ಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಿ

ಈಗಾಗಲೇ ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಬೀಜ ಗೊಬ್ಬರ ಅಸ್ತವ್ಯಸ್ತವಾಗದಂತೆ ಸಂಗ್ರಹದ ಕಡೆ ಹೆಚ್ಚಿನ ಒತ್ತು ನೀಡಿ, ರೈತರಿಗೆ ಪೂರೈಕೆ ಮಾಡಬೇಕು. ಕಳಪೆ ಬಿತ್ತನೆ ಬೀಜ ಪೂರೈಕೆ ಆಗಬಾರದು ಎಂದು ಸಹಾಯಕ ​ಕೃಷಿ ನಿರ್ದೇಶಕರಾದ ರಾಜಶೇಖರ ಅನಗೌಡರ ಅವರಿಗೆ ಶಾಸಕರು ತಿಳಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಗ್ರಾಮಗಳಿಗೆ ಬಸ್‌ ವ್ಯವಸ್ಥ ಮಾಡಲು ಕ್ರಮ ವಹಿಸಬೇಕು. ಬಸ್‌ಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ವಿಫಲವಾದರೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಾರಿಗೆ ಸಚಿವರಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗುಣಮಟ್ಟದ ಶಿಕ್ಷಣ ನೀಡಲು ಸೂಚನೆ

ಶಾಲೆಗಳು ಆರಂಭಗೊಂಡಿವೆ. ಮಕ್ಕಳಿಗೆ ಎಲ್‌ಕೆಜಿಯಿಂದಲೇ ಗುಣ ಮಟ್ಟದ ಶಿಕ್ಷಣ ನೀಡಬೇಕು. ಬೇರೆ ತಾಲೂಕು, ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಅವರಿಗೆ ಶಾಸಕರು ತಿಳಿ ಹೇಳಿದರು.

ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಮುರಗೇಶ ಚನ್ನಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಪ್ರಹ್ಲಾದಗೌಡ ಬಿ.ಜಿ, ಧಾರವಾಡ

ವಿಭಾಗ